
ತುಮಕೂರು : ಇತ್ತೀಚೆಗೆ ತುಮಕೂರಿಗೆ ಭೇಟಿ ನೀಡಿದ್ದ ಸಾಹಿತಿ ಕಾಳೇಗೌಡ ನಾಗವಾರ ಅವರು ತುಮಕೂರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ, ಸುಸಜ್ಜಿತ ಮತ್ತು ಡಿಜಿಟಲ್ ಗ್ರಂಥಾಲಯವನ್ನು ಕಂಡು ಮೆಚ್ಚಿಗೆ ವ್ಯಕ್ತಪಡಿಸಿದರು.
ಸ್ಮಾಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ ನಗರ ಕೇಂದ್ರ ಗ್ರಂಥಾಲಯವು ಪೂರ್ಣ ಡಿಜಿಟಲಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಬೇಕಾದ ಎಲ್ಲಾ ಸೌಲಭ್ಯಗಳು, ಪುಸ್ತಕಗಳನ್ನು ಇಲ್ಲಿ ಆಧುನಿಕತೆಗೆ ತಕ್ಕಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಎಲ್ಲಾ ವ್ಯವಸ್ಥೆಯನ್ನು ಹೊಂದಿದೆ.

ಈ ಹಿಂದೆ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರಿನ ಬ್ರಿಟಿಷರು ಕಟ್ಟಿಸಿದ್ದ ಕಟ್ಟಡದಲ್ಲಿದ್ದ ಗ್ರಂಥಾಲಯವು ಕಿಷ್ಕಿಂಧೆಯಾಗಿತ್ತು, ಕುಳಿತುಕೊಳ್ಳಲು, ಮತ್ತು ಏಕಾಗ್ರತೆಯಿಂದ ಓದಲು ಅಷ್ಟಾಗಿ ಆಗುತ್ತಿರಲಿಲ್ಲ.
ಆದರೆ ಇಂದಿನ ಹೊಸ ಪೀಳಿಗೆಗೆ ತಕ್ಕಂತೆ ತುಮಕೂರು ನಗರ ಕೇಂದ್ರ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಿದ್ದು, ಬೇಕಾದ ಪುಸ್ತಕಗಳನ್ನು ಹುಡುಕುವ ತೊಂದರಯೇ ಇಲ್ಲ, ಆಯಾ ವಿಭಾಗಕ್ಕೆ ಹೋಗಿ ಕೋಡ್ ಸಂಖ್ಯೆಯ ಮೂಲಕ ಕ್ಷಣ ಮಾತ್ರದಲ್ಲಿ ಪುಸ್ತಕಗಳನ್ನು ಪಡೆದುಕೊಳ್ಳಬಹುದು.
ವಿಶಾಲವಾದ ಟೇಬಲ್‍ಗೆ ಓದುಗರಿಗೆ ತಕ್ಕಂತೆ ಕುರ್ಚಿಗಳು, ಲೈಟ್‍ಗಳು, ಮತ್ತು ಫ್ಯಾನ್‍ಗಳನ್ನು ಅಳವಡಿಸಿದ್ದು, ನೀರಿನ ವ್ಯವಸ್ಥೆಯನ್ನು ಸಹ ಮಾಡಿದ್ದು, ಸಧ್ಯದಲ್ಲೇ ಗ್ರಂಥಾಲಯದ ಆವರಣದಲ್ಲಿ ಕ್ಯಾಂಟೀನ್ ಪ್ರಾರಂಭಿಸಿ ಗ್ರಾಮಾಂತರದಿಂದ ಬರುವ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ನಡೆಸುವವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ವ್ಯವಸ್ಥೆ ಮಾಡಲು ಮುಂದಾಗಿರುವುದಾಗಿ ಗ್ರಂಥಪಾಲಕರಾದ ಬಸವರಾಜು ಅವರು ತಿಳಿಸಿದರು.

ಇಂತಹ ಗ್ರಂಥಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಾಹಿತಿ ಹಾಗೂ ಬರಹಗಾರರಾದ ಕಾಳೇಗೌಡ ನಾಗವಾರ ಅವರು ಇಂತಹ ಡಿಜಿಟಲ್ ಮತ್ತು ಸುಸಜ್ಜಿತ ಗ್ರಂಥಾಲಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾದರೆ ಎಲ್ಲಾ ಓದುಗರಿಗೆ ಅನುಕೂಲವಾಗುತ್ತದೆ, ತುಮಕೂರು ಇಂತಹ ಗ್ರಂಥಾಲಯ ಹೊಂದಿರುವುದು ವಿದ್ಯಾರ್ಥಿಗಳಿಗೆ, ಓದುಗ ಆಸಕ್ತರಿಗೆ, ಸಾರ್ವಜನಿಕರಿಗೆ ಇದೊಂದು ಸೌಭಾಗ್ಯ ಎಂದು ಗ್ರಂಥಾಲಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸ್ಥಾರ್ಟ್ ಸಿಟಿ ಅನುದಾನದಲ್ಲಿ ಸುಮಾರು 25 ಕೋಟಿ ರೂ.ವೆಚ್ಚದಲ್ಲಿ ಐದು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು, ವೃತ್ತಪತ್ರಿಕೆಗಳ ಓದುಗರಿಗೆ ಅಗತ್ಯ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.
ಡಿಜಿಟಲ್ ಟ್ರೈನಿಂಗ್ ಸೆಂಟರ್ ಸಹ ಇದೇ ಕಟ್ಟಡದಲ್ಲಿ ನಡೆಸುವ ಯೋಚನೆಯಿದೆ ಎನ್ನಲಾಗಿದ್ದು, ಕಟ್ಟಡದ ಸೆಲ್ಲರ್ ಸಂಪೂರ್ಣವಾಗಿ ವಾಹನದ ಪಾಕಿರ್ಂಗ್‍ಗೆ ಮೀಸಲಿದ್ದರೆ, ನೆಲ ಮಹಡಿಯಲ್ಲಿ ಕಚೇರಿ, ಆಡಿಟೋರಿಯಂ ಮತ್ತು ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಮಧ್ಯದಲ್ಲಿ (ಮಾರ್ಜಿನಲ್) ವೃತ್ತ ಪತ್ರಿಕೆ ಮತ್ತು ಮಕ್ಕಳ ಪುಸ್ತಕಗಳ ಓದುಗರಿಗೆ ಅವಕಾಶವಿದ್ದರೆ, ಮೊದಲ ಮಹಡಿಯಲ್ಲಿ ಸುಮಾರು 250ರಿಂದ 300ಜನರು ಎಲ್ಲಾ ತರಹದ ಪುಸ್ತಕಗಳನ್ನು ಅಭ್ಯಸಿಸಲು ಕೊಠಡಿ ಇದ್ದು, ಇದರ ಜೊತೆಗೆ 25 ಜನರು ಕುಳಿತು ಅಭ್ಯಾಸ ಮಾಡಲು ಡಿಜಿಟಲ್ ಲೈಬ್ರರಿ ವ್ಯವಸ್ಥೆಯಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಸುಮಾರು 150ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಸುಮಾರು 25,000 ಪುಸ್ತಕಗಳ ಜೊತೆಗೆ, 94 ಸಾವಿರ ಪುಸ್ತಕಗಳ ಬೃಹತ್ ಗ್ರಂಥಾಲಯ ಇದಾಗಿದೆ. ಗ್ರಂಥಾಲಯದಲ್ಲಿ ಇ-ಜರ್ನಲ್ ಜೊತೆಗೆ 36 ಸಾವಿರ ಯೂಟೂಬ್ ಲಿಂಕ್‍ಗಳನ್ನು ಸಹ ಮಾಡಲಾಗಿದೆ.
ಅಂಧರಿಗಾಗಿ ಬ್ರೈಲ್ ಲಿಪಿ ಒಳಗೊಂಡ ಪುಸ್ತಕಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಗ್ರಂಥಾಲಯದಲ್ಲಿ ಕೆ.ಎ.ಎಸ್ ಮತ್ತು ಐ.ಎ.ಎಸ್, ಐ.ಪಿ.ಎಸ್ ಮತ್ತು ಐ.ಎಫ್.ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ನಿರಂತರವಾಗಿ ಅಭ್ಯಾಸ ನಡೆಸುತ್ತಿರುತ್ತಾರೆ, ಈಗಾಗಲೇ ಇಲ್ಲಿ ಅಭ್ಯಾಸ ಮಾಡಿರುವ ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವುದು ತುಮಕೂರು ನಗರ ಕೇಂದ್ರ ಗ್ರಂಥಾಲಯಕ್ಕೆ ಸಲ್ಲುವ ಹಿರಿಮೆ.
ಇಂತಹ ಗ್ರಂಥಾಲಯಕ್ಕೆ ನಾಡಿನ ಪ್ರಸಿದ್ಧ ಸಾಹಿತಿಯೊಬ್ಬರು ಬೇಟಿ ನೀಡಿ ಅವರ ಅಭಿಪ್ರಾಯವನ್ನು ಓದುಗರ ಅಭಿಪ್ರಾಯದ ಪುಸ್ತಕದಲ್ಲಿ ಬರೆದು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಗ್ರಂಥಾಲಯ ಅಗತ್ಯವಿದೆ ಎಂದು ಹೇಳುವ ಮೂಲಕ ಈ ನಾಡಿನ ಯುವಜನರ ಆಶಯಕ್ಕೆ ಸಾಹಿತಿ ಕಾಳೇಗೌಡ ನಾಗವಾರ ಅವರು ಮಿಡಿದಿರುವುದು ಅಭಿನಂದನೀಯ.