ರಾಜಕಾರಣಿಗಳ ಕಾಲ ಬುಡದಲ್ಲೇ ಮೀಟರ್ ಬಡ್ಡಿ ದ್ವಾರಪಾಲಕರು,ಚಕ್ರಬಡ್ಡಿಗಾರರರಿಂದ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿರುವ ಪೊಲೀಸರು, ಮೀಟರ್ ಬಡ್ಡಿಗೆ 5 ಜೀವಗಳ ಬಲಿ.

ತುಮಕೂರು-ರಾಜಕರಣಿಗಳ ಕಾಲ ಬುಡದಲ್ಲೇ ನಡೆಯುತ್ತಿದ್ದ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಸಾಲಕ್ಕೆ ಏನು ಅರಿಯದ 3 ಜನ ಮುಗ್ಧ ಮಕ್ಕಳು ಸೇರಿದಂತೆ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಕತೆಗೆ ಹಲವಾರು ವಿಷಜಂತುಗಳ ಕತೆ ಇದೆ.

ತುಮಕೂರಿನಲ್ಲಿ ಚಕ್ರಬಡ್ಡಿ, ಮೀಟರ್ ಬಡ್ಡಿ ದಂಧೆ ಹೇಗಿದೆ ಎಂದರೆ, ಸಾಲ ಕೊಡುವ ತನಕ ಉಪಾಯ ಮಾಡುವ ಬಡ್ಡಿದಾರರು, ಸಾಲ ನೀಡಿ, ಸಾಲ ಕೊಟ್ಟವರ ಕೈ ಬರಿದಾದ ಕೂಡಲೇ, ಅವರ ಜೀವವನ್ನು, ಮತ್ತು ರಕ್ತವನ್ನು ಚಕ್ರಬಡ್ಡಿ, ಮೀಟರ್ ಬಡ್ಡಿಗಾಗಿ ಜಿಗಣೆಗಿಂತ ಅಂಟಾಗಿ ಅಂಟಿಕೊಳ್ಳುತ್ತಾರೆ, ಸಾಲ ಪಡೆದವನು ತನ್ನ ಪ್ರಾಣವನ್ನು ಕೈಯಲ್ಲಿಡಿದುಕೊಂಡೆ ಮತ್ತೊಬ್ಬನಿಂದ ಮತ್ತೊಂದು ಚಕ್ರಬಡ್ಡಿಗೆ ಸಾಲ ತಂದು ಚಕ್ರಬಡ್ಡಿ ಮಾತ್ರ ಕೊಡುವುದು, ಸಾಲಕ್ಕಿಂತ ಹತ್ತುಪಟ್ಟು ಚಕ್ರಬಡ್ಡಿ ಕಟ್ಟಿದರೂ ಸಾಲ ಮಾತ್ರ ಮಧುಗಿರಿ ಏಕಶಿಲ ಬೆಟ್ಟದಂತೆ ಅವನ ಬೆನ್ನ ಮೇಲೆ ಹನುಮಂತನ ಭಾರದಂತೆ ಬೆಳೆಯುತ್ತಲೇ ಇರುತ್ತದೆ.

ಇಷ್ಟೇ ಅಲ್ಲದೆ ಸಾಲ ನೀಡುವಾಗ ಯಾವ ಹೆಂಡರು ಮಕ್ಕಳನ್ನೂ ಕೇಳದ ಈ ಸಾಲಗಾರರು, ಸಾಲ ನೀಡಿದ ಮೇಲೆ ಮನೆಯ ಬಾಗಿಲೆಗೆ ಹೋಗಿ,p ನಿಮ್ಮ ಗಂಡ, ಅಪ್ಪ ಸಾಲ ಪಡೆದಿದ್ದಾನೆ, ಕಟ್ಟದಿದ್ದರೆ ಮುಂದಿನ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಐದಾರು ಜನ ದಾಂಡಿಗರು ಹೋಗಿ ನಿಂತುಕೊಳ್ಳುತ್ತಾರೆ, ಆಗ ಆ ಮನೆಯವರು ಅಕ್ಕಪಕ್ಕದವರು ನೋಡುತ್ತಾರೆ ಎಂದು ಮನೆಯೊಳಗೆ ಕರೆದ ಕೂಡಲೇ ಇವರ ವರಸೆಯೇ ಬದಲಾಗುತ್ತದೆ.

ಏನಿಲ್ಲಕ್ಕ, ಸಾಲ ಏನೂ ತೀರಿಸೋದು ಬೇಡ, ಈಗ ಬಡ್ಡಿಗೆ, ಚಕ್ರ ಬಡ್ಡಿ ಕೊಟ್ಟರೆ ಸಾಕು ಎಂದು ಉಪಾಯವಾಗಿ ಮಾತನಾಡಿ ತಿಂಗಳ ಇಂತಹ ದಿನ ಬಡ್ಡಿ ಕೊಟ್ಟರೆ ಸಾಕಕ್ಕ ಎನ್ನುತ್ತಾರೆ, ಸಾಲಗಾರ ಮನೆಗೆ ಬಂದಾಗ ಹೆಂಡರು, ಮಕ್ಕಳು ದೊಡ್ಡ ಗಲಾಟೆ ಮಾಡುತ್ತಾರೆ, ಸಾಲಗಾರ ಏನೋ ಮಾಡಿ ಸಾಲ ತೀರಿಸಲು ಹೋದರೂ, ಬೇಡಪ್ಪ ನಿಮ್ಮ ಮನೆಯವರ ಹತ್ತಿರ ಮಾತನಾಡಿದ್ದೇವೆ, ನಿನ್ನ ಕಷ್ಟ ಏನಾದರೂ ಇದ್ದರೆ ಭಂಗ ತೀರಿಸಿಕೋ ಎಂದು ಹೆಂಡತಿ ಮಕ್ಕಳಿಂದ ಬಡ್ಡಿ ಪೀಕುತ್ತಲೇ ಇರುತ್ತಾರೆ.

ಬಡ್ಡಿಯೇ ಬೆಟ್ಟದಷ್ಟು ಕೊಟ್ಟಿದ್ದರೂ, ಹುಲುಕಡ್ಡಿಯಷ್ಟಿದ್ದ ಸಾಲ ಮಾತ್ರ ತೀರಿಯೇ ಇರುವುದಿಲ್ಲ, ಇದನ್ನು ತೆಗೆದುಕೊಂಡು ಆ ಬಡ ಸಾಲಗಾರರು ಪೊಲೀಸ್ ಠಾಣೆಗಳಿಗೆ ಹೋದರೆ, ಪೊಲೀಸರು ಈ ಸಾಲಗಾರರನ್ನೇ ಗುರಿ ಮಾಡಿಕೊಂಡು ಮೀಟರ್ ಬಡ್ಡಿ ದಂಧೆಗಾರರ ಎದುರಲ್ಲೇ ಅವಾಚ್ಯ ಶಬ್ಧಗಳಿಂದ ಮಾತನಾಡುತ್ತಾರೆ, ಹಾಗಾದರೆ, ಈ ಬಡ ಸಾಲಗಾರ, ಬಡಬೋರೇಗೌಡ ಯಾರ ಬಳಿ ತನ್ನ ಸಾಲದ ಬಡ್ಡಿ ಮಧುಗಿರಿ ಬೆಟ್ಟದಷ್ಟು ಆಗಿರುವುದನ್ನು ನಿವೇಧಿಸಿಕೊಳ್ಳಬೇಕು.

ಸಂಸಾರ ಸಮೇತ ಪೊಲೀಸ್ ಠಾಣೆಗೆ ಹೋದಾಗ ಸಾಲಗಾರನಿಗೆ ಪೊಲೀಸರು ಏನಲೇ ಸಾಲ ಮಾಡುವಾಗ ಚೆನ್ನಾಗಿತ್ತು, ಈಗ ತೀರಿಸುವುದಕ್ಕೆ ಆಗುವುದಿಲ್ಲವಾ! ಏರೋಪ್ಲೇನ್ ಹತ್ತಿಸಬೇಕಾ ಎಂಬ ದಮಿಕಿಗೆ, ಇಡೀ ಸಂಸಾರ ಹತ್ತುಕೊಂಡು ಮನೆಗೆ ಬಂದು ಗರಬಡಿದಂತೆ ಆಗಿ ಬಿಡುತ್ತದೆ.

ಆಗ ನೆನಪಾಗುವುದೇ ಈ ರಾಜಕಾರಣಿಗಳು, ಅಯ್ಯೋ ನಾವು ಓಟಾಕಿದ್ದೆವೆಲ್ಲಾ ಅವರಾದರೂ ನಮ್ಮನ್ನು ಕಾಪಾಡುತ್ತಾರೆ ಎಂದು ಆ ರಾಜಕಾರಣಿಯ ಮನೆಯ ಬಳಿಗೆ ಹೋದರೆ, ಇವರಿಗೆ ಸಾಲ ಕೊಟ್ಟವರೇ ಅವರ ಮನೆಯ ದ್ವಾರಪಾಲಕರಾಗಿ ನಿಂತಿರುತ್ತಾರೆ, ನೀವೇನಾದರೂ ಒಳಕ್ಕೆ ಹೋದ್ರೆ, ನಿಮ್ಮ ಗ್ರಹಚಾರ ನೆಟ್ಟಗಿರುವುದಿಲ್ಲ ಎಂಬ ಬೆದಿಕೆಗೇ ಕಣ್ಣೀರಿನ ಕೋಡಿಯನ್ನು ಹರಿಸಿಕೊಂಡು ಮನೆಗೆ ಬರುತ್ತಾರೆ.

ಆಕಸ್ಮಾತ್ ಈ ದ್ವಾರಪಾಲಕರು ಅಲ್ಲಿರದೇ ರಾಜಕಾರಣಿಗಳ ದರುಶನವಾಗಿ ತಮ್ಮ ಅಳಲು ತೋಡಿಕೊಂಡು, ಸಾಲ ತೀರಿಸಿದ್ದಾರಂತೆ ಇನ್ನ ಕೇಳಿಬೇಡಿ ಅಂತ ಹೇಳಿ ಸ್ವಾಮಿ ಎಂದರೆ, ರಾಜಕಾರಣೀಗಳು ಮೆಲುಧ್ವನಿಯಲ್ಲಿ ಆಯಿತು, ನಡೆಯಿರಿ ಈಗ ನನಗೆ ಅರ್ಜೆಂಟ್ ಕೆಲಸ ಇದೆ ಎಂದು ಹೊರಡುತ್ತಾರೆ, ರಾಜಕಾರಣಿ ಮನೆಯಿಂದ ಸಾಲಗಾರ ಮನೆಯ ಬಳಿಗೆ ಬರುವುದರೊಳಗೆ ಸಾಲಕೊಟ್ಟ ರಾಜಕಾರಣಿಗಳ ದ್ವಾರಪಾಲಕರು, ಸಾಲಗಾರನ ಮನೆಯ ದ್ವಾರಪಾಲಕರಾಗಿ ನಿಂತುಕೊಂಡಿರುವುದನ್ನು ನೋಡಿ ಅವನ ಜೀವವೇ ಹೋಗುತ್ತದೆ.

ಆಮೇಲೆ ಅವನ ಮಾನಸಿಕ, ದೈಹಿಕ ಹಿಂಸೆ ಯಮಲೋಕದಲ್ಲೂ ಇರುವುದಿಲ್ಲ ಆ ರೀತಿ ನಡೆಯುತ್ತದೆ. ಆಗ ಈ ಹಿಂಸೆಗಿನ್ನ ಸಾಯುವುದೇ ಲೇಸು ಅಂತ ವಿಷ ಕುಡಿದೋ, ನೇಣಿಗೆ ಕೊರಳೊಡ್ಡಿಯೋ ಇಡೀ ಸಂಸಾರ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.

ಈ ಐವರು ಮುಗ್ಧ ಜೀವಿಗಳಿಗೆ ಆಗಿದ್ದು ಈ ಮೇಲಿನದೇ, 1.50ಲಕ್ಷ ರೂ.ಗಳ ಸಾಲಕ್ಕೆ 3.50ಲಕ್ಷರೂ.ಗಳಷ್ಟು, ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಕಟ್ಟಿದ್ದಾರೆ, ಅದೂ ಆ ಸಾಲವನ್ನು ಮಕ್ಕಳ ವಿದ್ಯಭ್ಯಾಸಕ್ಕಾಗಿ ಮಾಡಿದ ಸಾಲ, ಸಾಲ ತೀರಿಲ್ಲ ಎಂದು ಸಾಲಗಾರ ಈ ಸಾಲ ಪಡೆದವರಿಗೆ ಆಡಬಾರದ ಮಾತನ್ನು ಆಡಿದ್ದಾನೆ, ಈ ಮಾತಿಗೆ ಮನನೊಂದ ಕುಟುಂಬ ಸಾಲ ಕೊಟ್ಟವನ ಎಲ್ಲಾ ಮಾಹಿತಿಯನ್ನು ವಿಡಿಯೋ ಮತ್ತು ಬರೆದಿಟ್ಟು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಕುಟುಂಬವು ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯವರೆಂದು ತಿಳಿದು ಬಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಮಕೂರಿನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಇವರು, ಮಕ್ಕಳ ವಿದ್ಯಾಭ್ಯಾಕ್ಕಾಗಿ ಮೀಟರ್ ಬಡ್ಡಿಯೊಬ್ಬನಿಂದ ಸಾಲ ಪಡೆದು ದರಂತ ಸಾವಿಗೆ ತಮ್ಮನ್ನು ತಾವೇ ಅರ್ಪಸಿಕೊಂಡು ಬಿಟ್ಟರು.

ಈ ಮೀಟರ್ ದಂಧೆ ಪೊಲೀಸರಿಗೆ ತಿಳಿದಿಲ್ಲವೇ, ಈ ದಂಧೆದಾರರಿಗೆ ಸಪೋರ್ಟ್ ಪೊಲೀಸಿನವರದೇ ಎಂದು ತುಮಕೂರು ಶವಗಾರದ ಮುಂದೆ ಜನರು ಮಾತನಾಡಿಕೊಳ್ಳುತ್ತಿದ್ದದ್ದು ಸುಳ್ಳೆ, ಮೀಟರ್ ದಂಧೆಗೆ ಬೆಂಬಲವಾಗಿ ನಿಂತ ಪೊಲೀಸರು ಈ ಅಮೂಲ್ಯವಾದ ಐದು ಜೀವಗಳನ್ನು ಬದುಕಿಸಬಲ್ಲರೇ, ಹಾಗಾದರೆ ಈ ಪೊಲೀಸರು ಯಾರಿಗಾಗಿ, ಯಾತಕ್ಕಾಗಿ, ಏನು ರಕ್ಷಣೆ ಮಾಡಲು ಯೂನಿಫಾರಂ ಹಾಕಿಕೊಂಡು ಟಿಕ್‍ಟಾಕಾಗಿ ಪೊಲೀಸ್ ಠಾಣೆಗಳಲ್ಲಿರಬೇಕು, ಇದಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಉತ್ತರಿಸುತ್ತಾರಾ?, ಗೃಹ ಸಚಿವರ ಜಿಲ್ಲೇಯಲ್ಲೆ ನಿರಂತರ ಕೊಲೆ, ಸುಲಿಗೆ, ಮೀಟರ್ ಬಡ್ಡಿ, ಮಟ್ಕಾದಂದೆ ಯಾರ ಬೆಂಬಲದಿಂದ ನಡೆಯುತಾ ಇದೆ ಎಂಬುದನ್ನು ಹೇಳಬಲ್ಲರೇ?

ಸರ್ಕಾರಗಳು ಬಡವರ ಕಣ್ಣೀರು ಒರೆಸುತ್ತಾ ಇವೆಯೇ?

ಯಾವುದೇ ಸರ್ಕಾರ ಬರಲಿ ಮೊದಲು ಬಲಿಯಾಗುವುದು ಬಡವ, ಬಡವ ನೀನು ಸತ್ತರೂ ಕೇಳಲ್ಲ, ಬದುಕಿದರೂ ಕೇಳಲ್ಲ ಎನ್ನುವಂತೆ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಬಡವರನ್ನು ಉದ್ಧಾರ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿ ವಾಸನೆ ಕುಡಿದುಕೊಂಡು ಬದುಕಿ ಎನ್ನುವಂತಾಗಿದೆ.

ಕರೋನದ ನಂತರ ಬಡವರ ಬದುಕು ಮೂರಾಬಟ್ಟೆಯಾಗಿದೆ, ಬೆಲೆ ಏರಿಕೆ ಆಕಾಶ ಮುಟ್ಟಿ ಅದರ ಮೇಲೆ ಹೋಗಿದೆ, ಬಡವರು ದುಡಿಯುವ ಕಾಸು ಬಟ್ಟೆಗಾದರೆ ಹೊಟ್ಟೆಗಾಗುವುದಿಲ್ಲ, ಹೊಟ್ಟೆಗಾದರೆ ಬಟ್ಟೆಗಾಗುವುದಿಲ್ಲ. ಬಡವರಿಗೆ ನಮ್ಮ ಮಕ್ಕಳೂ ಮಿಣ ಮಿಣ ಅನ್ನುವ ಬಿಲ್ಡಿಂಗ್ ಶಾಲೆಯಲ್ಲಿ ಓದಬೇಕು ಎಂಬ ಆಸೆ ಇಲ್ಲವೆ, ಬಡವರಿಗೆ ಮಣಿಪಾಲ್, ಜಿಂದಾಲ್ ಮುಂತಾದ ಆಸ್ಪತ್ರೆಗಳಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಳ್ಳಬೇಕು ಎಂಬ ಆಸೆ, ಬದುಕು ಇಲ್ಲವೇ?

ಈ ಸರ್ಕಾರಗಳಿಗೆ ಐಟೆಕ್ ಶಾಲೆ, ಐಟೆಕ್ ಆಸ್ಪತ್ರೆಗಳನ್ನು ತೆರಯಲು ಏನು ಲಕ್ವ ಹೊಡೆದಿದೆಯೇ, ರಾಜಕಾರಣಿಗಳ ಮನೆಗಳು ಹೇಗಿವೆ ನೋಡಿದ್ದೀರಾ? ಬಡವ ಅವರ ಮನೆ ಮುಂದಕ್ಕೆ ಹೋದ್ರೇನೆ ಹೃದಯಾಘಾತವಾಗಿ ಅಲ್ಲೇ ಗೊಟಕ್ ಅನ್ನಬೇಕು, ಹಾಗೆ ಕಟ್ಟಿದ್ದಾರೆ, ಆ ಮನೆ ಕಟ್ಟಿದ್ದು ಯಾರ ದುಡ್ಡಿನಿಂದ.

ರಾಜಕರಣಿಗಳು ಬಿಡಿ ಪೊಲೀಸ್ ಇಲಾಖೆಯ ಒಬ್ಬ ಪಿಸಿ ಮನೆಯೇನು, ಅವನು ಮಾಡಿರುವ ಆಸ್ತಿಯೇನು ಇವರದೇ ಹೀಗಾದರೆ ಇನ್ನ ಎಸ್‍ಐ, ಸಿಪಿಐ, ಡಿವೈಎಸ್‍ಪಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ಮನೆ, ತೋಟ, ಹೊಲಗಳು, ಫಾರಂಹೌಸ್‍ಗಳು ಹೇಗಿರಬೇಕು? ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

5 ಜೀವಗಳು ಪಂಡರಾಯಪಟ್ಟಣ ಸೇರಿದ ಮೇಲಾದರೂ ನಮ್ಮದೇ ಜಿಲ್ಲೆಯವರಾದ ಗೃಹ ಸಚಿವರೂ, ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ ಡಾಜಿ.ಪರಮೇಶ್ವರ್ ಅವರು ಆ ಮುಗ್ಧ ಜೀವಿಗಳ ಹೆಣ ನೋಡಿ ಮಮ್ಮಲ ಮರುಗಿದರೆ ವ್ಯವಸ್ಥೆ ಸರಿ ಹೋಗುತ್ತದೆಯೇ, ಈಗಲಾದರೂ ಪೊಲೀಸ್ ದಂಡ ಕೈಗೆತ್ತಿಕೊಳ್ಳಿ, ಐದು ವರ್ಷ ಮಂತ್ರಿಯಾಗಿರುವುದಕ್ಕಿಂತ ಐದೇ ದಿನ ಮಂತ್ರಿಯಾಗಿ ಪೊಲೀಸ್ ಇಲಾಖೆಯನ್ನು ಸರಿ ದಾರಿಗೆ ತನ್ನಿ, ಆಗ ನಿಮ್ಮ ಜೀವಮಾನದಲ್ಲಿ ಈ ನಾಡಿನ ಜನ ಎಂತಹ ಸ್ಥಾನದಲ್ಲಿ ಕೂರಿಸುತ್ತಾರೆ ನೋಡಿ, ದಂಡ ಪ್ರಯೋಗಿಸುತ್ತೀರೋ, ಮಮ್ಮಲ ಮರುಗುತ್ತೀರೋ ಅಥವಾ ಎಸ್ಕಾರ್ಟ್ ಇಟ್ಟುಕೊಂಡು ಬಡವರನ್ನು ದೂರದಿಂದಲೇ ನೋಡಿಕೊಂಡು ಹೋಗುತ್ತೀರೋ ಒಮ್ಮೆ ನಿಮ್ಮ ಹೃದಯವನ್ನು ಮುಟ್ಟಿ ನೋಡಿಕೊಳ್ಳಿ, ಗಾಂಧಿ, ಅಂಬೇಡ್ಕರ್ ಇರದಿದ್ದರೆ ನೀವು ಮಂತ್ರಿಯಾಗುತ್ತಿದ್ರಾ? ಅಂಬೇಡ್ಕರ್ ಸಂವಿಧಾನ ನಿಮ್ಮ ಕೈಯಲ್ಲಿದೆ ಏನು ಮಾಡುತ್ತೀರಾ ನೋಡಿ.

ಗೃಹ ಸಚಿವರೇ ಬಡವರಿಗೆ ಬದಕು ಕೊಡಿ ನೀವು ಬಂಗಾರವಾಗುತ್ತೀರ.

ಆ ಐದು ಮುಗ್ಧ ಜೀವಗಳ ಹೆಣ ನನ್ನನ್ನು ಇಷ್ಟೆಲ್ಲಾ ಬರೆಯುವಂತೆ ಮಾಡಿತು, ಮಣ್ಣಿನೊಳಗಾದರೂ ಆ ಜೀವಗಳು ಶಾಂತಿಯಿಂದ ಬದುಕಲು ಬಿಡಿ ರಾಕ್ಷಸ ಮನುಷ್ಯರೇ….?…..!

-ವೆಂಕಟಾಚಲ ಹೆಚ್.ವಿ.

Leave a Reply

Your email address will not be published. Required fields are marked *