ನಿವೃತ್ತಿ ಘೋಷಿಸಿದ ರಾಜಕೀಯ “ಭಸ್ಮಾಸುರ” ಜಿ.ಎಸ್.ಬಸವರಾಜು, ಮುಖ್ಯಮಂತ್ರಿಯಾಗುವ ಯೋಗ ಕಳೆದುಕೊಂಡ ನತದೃಷ್ಟ ರಾಜಕಾರಣಿ

ತುಮಕೂರು : ಜಿ.ಎಸ್.ಬಸವರಾಜು ಅವರನ್ನು ಜಿಲ್ಲೆಯ ಕೆಲ ರಾಜಕಾರಣಿಗಳು ಭಸ್ಮಾಸುರ ಎಂದು ಕರೆಯುತ್ತಾರೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸುವ ಮೂಲಕ ತಮ್ಮ ಭಸ್ಮಾಸುರ ಪಟ್ಟವನ್ನು ಸಾಭೀತು ಪಡಿಸಿದರೂ, ಮುಖ್ಯಮಂತ್ರಿಯಾಗುವ ಯೋಗ ಕಳೆದುಕೊಂಡ ನತದೃಷ್ಟ ರಾಜಕಾರಣಿ ಎನ್ನಲಾಗುತ್ತಿದೆ.

ಇಂತಹ ರಾಜಕೀಯ ಭಸ್ಮಾಸುರ ಎಂದು ಕರೆಸಿಕೊಳ್ಳುತ್ತಿದ್ದ ಸಂಸದ ಜಿ.ಎಸ್.ಬಸವರಾಜು ಅವರು ತಮ್ಮ 86ನೇ ಹುಟ್ಟು ಹಬ್ಬದ ದಿನ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ನಂತರ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಕೂಲಾಗಿ ಹೇಳಿದರು.

86ನೇ ಹುಟ್ಟು ಹಬ್ಬ ಆಚರಿಸಿಕೊಂಡರೂ ಅವರು ಇನ್ನೂ 50ರ ಅಸುಪಾಸಿನವರಂತೆ ಕಾಣಿಸುತ್ತಿದ್ದು ಅವರ ಅಭಿಮಾನಿಗಳಿಗೆ ಒಂದು ತರಹ ಖುಷಿ, ಹೊಟ್ಟೆಕಿಚ್ಚು ಎರಡೂ ಅಲ್ಲಿ ಮನೆ ಮಾಡಿದ್ದವು.

ತಮ್ಮ ರಾಜಕೀಯವನ್ನು ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಪ್ರಾರಂಭಿಸಿದ ಜಿ.ಎಸ್.ಬಸವರಾಜು ಅವರು, ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ ಸಂಸತ್ ಸದಸ್ಯರಾಗುವ ತನಕ ಮುನ್ನುಗಿದರು.

8ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, 5ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ, ಇವರು 1984ರಲ್ಲಿ ಮೊದಲನೆಯದಾಗಿ ಸಂಸದರಾಗಿ ಆಯ್ಕೆಯಾದರು. 1989ರಲ್ಲಿ ಇವರು ಕಾಂಗ್ರೆಸ್‍ನಿಂದ ಸ್ವರ್ಧಿಸಿದಾಗ ಈಗಿನ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಬಸವರಾಜು ವಿರುದ್ಧ ತೊಡೆ ತಟ್ಟಿದ್ದರೂ ಜಿ.ಎಸ್.ಬಸವರಾಜು ತಮ್ಮ ರಾಜಕೀಯ ಚಾಣಕ್ಷಯತನದಿಂದ ಗೆಲುವು ಸಾಧಿಸಿದರು.

1990, 2009 ಮತ್ತು 2019ರಲ್ಲಿ ಸೇರಿದಂತೆ ಐದು ಬಾರಿ ಸಂಸದರಾಗಿ ಆಯ್ಕೆಯಾದರು. ಸುಧೀರ್ಘವಾಗಿ 5 ಬಾರಿ ಸಂಸದರಾಗುವ ಮೂಲಕ ತಮ್ಮ ದಾಖಲೆಯನ್ನು ಇತಿಹಾಸದಲ್ಲಿ ನಿರ್ಮಿಸಿದ್ದು ಇದನ್ನು ಮುಂದೆ ಈ ಜಿಲ್ಲೆಯಲ್ಲಿ ಯಾರು ಬ್ರೇಕ್ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ.

ಜಿ.ಎಸ್.ಬಸವರಾಜು ಅವರು ಮುಖ್ಯಮಂತ್ರಿ ಮತ್ತು ಕೇಂದ್ರದ ಮಂತ್ರಿಯಾಗುವ ಎಲ್ಲಾ ಆರ್ಹತೆಗಳಿದ್ದರೂ ಅವರ ರಾಜಕೀಯ ಸ್ಥಾನ ಪಲ್ಲಟಗಳಿಂದ ಅದು ಸಾಧ್ಯವಾಗಲಿಲ್ಲ.

ಸುಮಾರು 21ವರ್ಷಗಳ ಕಾಲ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು ಪಕ್ಷ ಕಟ್ಟುವುದಕ್ಕಿಂತ ಪಕ್ಷದೊಳಗಿನವರನ್ನು ತುಳಿಯಲು, ಎಡೆಮುರಿಕಟ್ಟಿ ರಾಜಕೀಯವನ್ನೇ ಮುಗಿಸಿದವರು ಎಂದು ಖ್ಯಾತಿಗೊಳಿಸಿರುವ ಇವರಿಗೆ ಈ ರೀತಿ ನಡೆಗೆ ಇವರನ್ನು ಕಾಂಗ್ರೆಸ್‍ನವರು ರಾಜಕೀಯ ‘ಭಸ್ಮಾಸುರ’ ಎಂದು ಕರೆಯುತ್ತಿದ್ದರು. ಇದರಿಂದ ಜಿಲ್ಲಾ ಕಾಂಗ್ರೆಸ್‍ನಲ್ಲಿ ಹಲವಾರು ಸಂಘರ್ಷಗಳು ನಡೆಯುತ್ತಿದ್ದವು, ಕೆ.ಎನ್.ರಾಜಣ್ಣ, ಎಸ್.ಪಿ.ಮುದ್ದಹನುಮೇಗೌಡ ಅವರುಗಳು ಇವರ ರಾಜಕೀಯ ಹೊಡೆತಗಳನ್ನು ತಾಳಲಾರದೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದರು.

ಸಂಘರ್ಷ ಅತಿರೇಕಕ್ಕೆ ಹೋದಾಗ ಜಿ.ಎಸ್.ಬಸವರಾಜು ಅವರನ್ನು ಇಳಿಸಿ ಮಾಜಿ ಶಾಸಕ ಎಸ್.ಷಫೀಅಹ್ಮದ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಆನಂತರ ಬಿಜೆಪಿಗೆ ಬಂದ ಜಿ.ಎಸ್.ಬಸವರಾಜು ಅವರು ಸೊಗಡು ಶಿವಣ್ಣನವರಿಗೆ ಸೆಡ್ಡು ಹೊಡೆದು 2009ರಲ್ಲಿ ಸಂಸದರಾಗಿ ಆಯ್ಕೆಯಾಗಿಯೇ ಬಿಟ್ಟರು, ಅಲ್ಲಿಂದ ಸೊಗಡು ಶಿವಣ್ಣನವರ ಮೇಲೆ ನಾಗರ ಹಾವಿನಂತೆ ಬುಸುಗುಟ್ಟುತ್ತಿದ್ದ ಜಿ.ಎಸ್.ಬಿ ಅವರು 2013ರ ಚುನಾವಣೆಯಲ್ಲಿ ಮಗನನ್ನು ಯಡಿಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸುವಂತೆ ನೋಡಿಕೊಂಡು, ತಮ್ಮ ರಾಜಕೀಯ ದಾಳವನ್ನು ಬಳಸಿ, ನನ್ನ ಮಗನಿಗೆ ಓಟಾಕದಿದ್ದರೂ ಪರವಾಗಿಲ್ಲ ಕಾಂಗ್ರೆಸ್‍ಗೆ ಹಾಕಿ ಎಂದು ಕೈಮುಗಿದ ಬಸವರಾಜು, ಸೊಗಡು ಶಿವಣ್ಣನವರ ರಾಜಕೀಯಕ್ಕೆ ತಿಲಾಂಜಲಿ ಹಾಡಿದ ಅವರು, 2018ರಲ್ಲಿ ತಮ್ಮ ಮಗ ಜ್ಯೋತಿಗಣೇಶರನ್ನು ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ತಂದು, ನಿಲ್ಲಿಸಿ ಗೆಲ್ಲಿಸುವ ಮೂಲಕ ಸೊಗಡು ಶಿವಣ್ಣನವರ ರಾಜಕೀಯಕ್ಕೆ ಪೂರ್ಣ ವಿರಾಮ ಇಟ್ಟರು.

2023ರಲ್ಲಿ ಪಕ್ಷ ಕಟ್ಟಿದ ಸೊಗಡು ಶಿವಣ್ಣನವರು ನನಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಾಗ ಕೊನೆ ಗಳಿಗೆಯವರೆಗೂ ಟಿಕೆಟ್ ಘೋಷಣೆ ಮಾಡದೆ ಕೊನೆಗೆ ಹಾಲಿ ಶಾಸಕರಾಗಿದ್ದ ಮಗ ಜ್ಯೋತಿಗಣೇಶ್ ಅವರಿಗೆ ಟಿಕೆಟ್ ಕೊಡಿಸಿದಾಗ, ಸೊಗಡು ಶಿವಣ್ಣನವರು ಪಕ್ಷೇತರರಾಗಿ ನಿಂತಿದ್ದರಿಂದ ಪಕ್ಷದಿಂದ ಉಚ್ಛಾಟನೆಗೊಂಡರು.

ಬಿಜೆಪಿ ಪಕ್ಷಕ್ಕೆ ಎಂದೂ ಬಾವುಟ ಹಾರಿಸದ ಅಪ್ಪ ಮಕ್ಕಳು ಹುತ್ತಕ್ಕೆ ಬಂದು ಸೇರಿಕೊಂಡ ಹಾವುಗಳು ಎಂದು ಸೊಗಡು ಶಿವಣ್ಣ ಜರಿದರೂ ಬಸವರಾಜು ತಣ್ಣಗೆ ತಮ್ಮ ಭಸ್ಮಾಸುರ ರಾಜಕೀಯ ಹಸ್ತವನ್ನು ಇನ್ನೂ ಒಬ್ಬರಿಗೆ ಕೊನೆಯಲ್ಲೂ ಪ್ರಯೋಗಿಸಿದರು.

ಅದು ಈ ಜಿಲ್ಲೆಯ ಖಡಕ್ ಮಂತ್ರಿ ಎಂದು ಕರೆಸಿಕೊಂಡಿದ್ದ ಜೆ.ಸಿ.ಮಾಧುಸ್ವಾಮಿಯವರ ರಾಜಕೀಯದ ಮೇಲೂ ಇವರ ಭಸ್ಮಾಸುರ ನೆರಳು ಬಿದ್ದಿತು, ಗೋಡೆಕೆರೆಯ ಸಭೆಯೊಂದರಲ್ಲಿ ಜೆ.ಸಿ.ಮಾಧುಸ್ವಾಮಿ ನನ್ನ ಪರವಾಗಿ ಪ್ರಚಾರ ಮಾಡದಿದ್ದರೆ ನಾನು ಸಂಸದನಾಗುತ್ತಿರಲಿಲ್ಲ ಎಂದು ಹೇಳಿದ ಬಸವರಾಜು ಅವರು, ಮಾಧುಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನನ್ನ ತಾಳಕ್ಕೆ ತಕ್ಕಂತೆ ಅಧಿಕಾರಿಗಳ ವರ್ಗಾವಣೆ, ಕಾಮಗಾರಿಗಳ ಗುತ್ತಿಗೆ ನೀಡಲು ಬಿಡಲಿಲ್ಲ ಎಂದು ಸಮಯಕ್ಕಾಗಿ ಕಾಯುತ್ತಿದ್ದರು.

ಈ ಬಾರಿಯ ಲೋಕಸಭೆ ಟಿಕೆಟನ್ನು ಜೆ.ಸಿ.ಮಾಧುಸ್ವಾಮಿಯವರಿಗೇ ಎಂದು ಯಡಿಯೂರಪ್ಪನವರು ಘೋಷಿಸಿದರು. ಜೆ.ಸಿ.ಮಾಧುಸ್ವಾಮಿಯವರು ತಮ್ಮ ಪಂಚೆ ಕೊಡವಿಕೊಂಡು ಮತ್ತೊಮ್ಮೆ ಚುನಾವಣೆಗೆ ನಿಲ್ಲಲು ಕ್ಷೇತ್ರಾದ್ಯಂತ ಓಡಾಡುತ್ತಿರುವಾಗಲೇ ಬಿನ್ನಿಪೇಟೆ ವಿ.ಸೋಮಣ್ಣನನ್ನು ಹೈಕಮಾಂಡ್ ಬಳಿ ಕರೆದೊಯ್ದು ಜೆ.ಸಿ.ಮಾಧುಸ್ವಾಮಿ ಬಗ್ಗೆ ನೆಗಿಟೀವ್ ಥಾಟ್ ಬರುವಂತೆ ಅಮಿತ್ ಶಾ ಕಿವಿಯಲ್ಲಿ ಊದಿ ಸೋಮಣ್ಣನಿಗೆ ತುಮಕೂರು ಲೋಕಸಭಾ ಟಿಕೆಟ್ ಕೊಡಿಸುವ ಮೂಲಕ ತಮ್ಮ ರಾಜಕೀಯ ನಿವೃತ್ತಿಯ ಕೊನೆಯಲ್ಲೂ ತಮ್ಮ ಭಸ್ಮಾಸುರ ಹಸ್ತವನ್ನು ಪ್ರಯೋಗಿಸಿಯೇ ನಿವೃತ್ತಿಯಾಗಿದ್ದಾರೆ.

ಮಾಧುಸ್ವಾಮಿಯವರಿಗೆ ಟಿಕೆಟ್ ಏಕೆ ಸಿಗಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಬಸವರಾಜು ಅವರು ಮಂತ್ರಿಯಾಗಿದ್ದಾಗ ಅವರು ತೋರಿದ ದರ್ಪಕ್ಕೆ ಸಿಗಲಿಲ್ಲ ಎಂದಷ್ಟೇ ಹೇಳಿದರು.

ಕಾಂಗ್ರೆಸ್‍ನಲ್ಲೇ ಇದ್ದು 2009 ರಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ 2ನೇ ಅವಧಿಯಲ್ಲಿ ಮಂತ್ರಿಯಾಗ ಬಹುದಿತ್ತು, ಇಲ್ಲ 2013ರಲ್ಲಿ ಲಿಂಗಾಯಿತರ ಕೋಟ ಅಥವಾ ಕಾಂಗ್ರೆಸ್ ಹಿರಿಯ ಮುತ್ಸದಿ ಎಂದು ಸಿದ್ದರಾಮಯ್ಯನವರ ಬದಲು ಇವರು ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳನ್ನು ಬಿ.ಎಸ್.ಯಡಿಯೂರಪ್ಪನವರಿಂದ ಕಳೆದುಕೊಂಡ ನತದೃಷ್ಟ ರಾಜಕಾರಣಿ ಎಂದು ಕಾಂಗ್ರೆಸ್‍ನವರು ಈಗಲೂ ಟೀಕಿಸುತ್ತಾರೆ, ಅವರು ಬಿಜೆಪಿಗೆ ಹೋಗಿದ್ದರಿಂದ ಕೆಲವರು ಕಾಂಗ್ರೆಸ್‍ನಲ್ಲಿ ರಾಜಕೀಯವಾಗಿ ಮೇಲೆದ್ದರು ಎಂದು ಹೇಳುಲಾಗುತ್ತಿದೆ.

ಜಿ.ಎಸ್.ಬಸವರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ನಾನು ಚುನಾವಣಾ ನಿವೃತ್ತಿ ಘೋಷಿಸಿದ್ದೇನೆ, ರಾಜಕೀಯದಿಂದಲ್ಲ, ನೀರಾವರಿ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ರಾಜಕಾರಣದಲ್ಲಿರುತ್ತೇನೆ ಎನ್ನುವ ಮೂಲಕ ತಮ್ಮ ಭಸ್ಮಾಸುರ ಹಸ್ತವನ್ನು ಇನ್ನೂ ಕೆಲವರ ಮೇಲೆ ಪ್ರಯೋಗಿಸುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಹೇಮಾವತಿಯ ಬಗ್ಗೆ ಮಾತನಾಡಿದ ಬಸವರಾಜು ನಾನು ಹುಚ್ಚಮಾಸ್ತಿಗೌಡರ ಮುಖಾಂತರ ಹೇಮಾವತಿ ನೀರಿಗಾಗಿ ಜಿ.ಎಸ್.ಪರಮಶಿವಯ್ಯನವರ ಮುಖಾಂತರ ಪ್ರಾಜೆಕ್ಟ್ ಮಾಡಿಸಿ ದೇವರಾಜು ಅರಸ್ಸು ಅವರು ಮುಖ್ಯಮಂತ್ರಿ ಪದವಿಯಿಂದ ಇಳಿಯುವ ಕೆಲ ದಿನಗಳಿಗಿಂತ ಮುಂಚೆ ಮಂಜುರಾತಿ ಕೊಡೊಸಿದ್ದು ನಾನು, ಹೆಚ್‍ಎಎಲ್ ತಂದಿದ್ದು ನಾನು ಎಂದರು.

ವೈ.ಕೆ.ರಾಮಯ್ಯನವರು ದೇವೇಗೌಡರ ರಾಜಕೀಯ ವಿರೋಧಕ್ಕಾಗಿ ಹೇಮಾವತಿಯನ್ನು ರಾಜಕೀಯಗೊಳಿಸಿದರು ನಾನು ಹೇಮಾವತಿಯನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ, ಅದಕ್ಕೆ ಕೆಲಸ ಮಾಡಿದ್ದೇನೆ ಎಂದರು. ಇತ್ತಿಚೆಗೆ ಕೆಲವರು ಹೇಮಾವತಿ ತಂದಿದ್ದು ನಾನೇ ಅನ್ನುತ್ತಾರೆ ಅವರಿಗೆಲ್ಲಾ ರಾಜಕೀಯ ಗೊತ್ತಿಲ್ಲ ಬಿಡಿ ಎಂದು ಹೇಮಾವತಿ ಹೆಸರಿನ ರಾಜಕಾರಣಿಗಳಿಗೆ ಚುಚ್ಚಿದರು

ಒಟ್ಟಿನಲ್ಲಿ ಸುಧೀರ್ಘವಾಗಿ 60 ವರ್ಷಗಳ ಕಾಲ ತಮಕೂರು ಜಿಲ್ಲೆಯ ರಾಜಕೀಯ ಅನಭಿಶಕ್ತ ದೊರೆಯಾಗಿ ಆಳಿದ ಜಿ.ಎಸ್.ಬಸವರಾಜು ಅವರು ನಿವೃತ್ತಿ ಘೋಷಿಸುವ ದಿನ ದೊಡ್ಡ ನಾಯಕರಾಗಲಿ, ಬಿಜೆಪಿಯ ಪ್ರಮುಖ ರಾಜಕಾರಣಿಗಳಾಗಲಿ ಅವರ ಪಕ್ಕದಲ್ಲಿರಲಿಲ್ಲ, ತಮ್ಮ ಶಿಷ್ಯ ಕುಂದರನಹಳ್ಳಿ ರಮೇಶ್ ಅವರನ್ನು ಕೂರಿಸಿಕೊಂಡು ರಮೇಶ್ ಅವರು ಇಂಜಿನಿಯರ್ ಪಾಸಾಗದಿದ್ದರೂ ಅವರ ಬುದ್ದಿವಂತಿಕೆ ತುಂಬಾ ಒಳ್ಳೆಯ ಕೆಲಸ ಮಾಡಲು ನನಗೆ ಸಹಕಾರಿಯಾಗಿದೆ ಎಂದು ಶಿಷ್ಯನ ಗುಣಗಾನ ಮಾತ್ರ ಅಚ್ಚರಿ ತಂದಿತ್ತು.

ಒಟ್ಟಿನಲ್ಲಿ ಈ ಜಿಲ್ಲೆಯ ಹಿರಿಯ, ಮುತ್ಸದಿ, ರಾಜಕೀಯ ಚಾಣಕ್ಷ್ಯ, ಭಸ್ಮಾಸುರ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಜಿ.ಎಸ್.ಬಸವರಾಜು ಅವರು 86ನೇ ಹುಟ್ಟು ಹಬ್ಬದ ದಿನ ಲೋಕಸಭೆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ನಿವೃತ್ತಿ ಘೋಷಿಸಿದ್ದು, ಫಲಿತಾಂಶದ ದಿನ ಮತ್ತೊಬ್ಬರು ಭಸ್ಮವಾಗಲಿದ್ದಾರೆಂದು ಅಲ್ಲಿದ್ದವರು ಕಿರು ನಗೆ ನಕ್ಕಿದ್ದು ಪತ್ರಕರ್ತರೊಂದಿಗೆ ಮೊಸರನ್ನ ಸವಿಯುತ್ತಿದ್ದ ಹಿರಿಯ ಜೀವಿ ಜಿ.ಎಸ್.ಬಸವರಾಜು ಅವರಿಗೆ ತಿಳಿಯಲೇ ಇಲ್ಲ.

ಇವರು ಇಂದಿರಾಗಾಂಧಿಯಿಂದ ಹಿಡಿದು ಈಗಿನ ನರೇಂದ್ರ ಮೋದಿಯವರೆಗೂ ಪ್ರಧಾನಿಗಳನ್ನು ಕಂಡಿದ್ದು, ಮೋದಿಯಂತಹ ಪ್ರಧಾನಿಯನ್ನು ನಾನು ಕಂಡಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರ ಅರ್ಥ ಏನೋ ತಿಳಿಯದು.

ವಿಧಾನಸಭೆಗೆ ಆಯ್ಕೆಯಾಗಬೇಕೆಂದು ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಾತಿಯ ನಾಯಕರಾಗಿದ್ದ ಜಿ.ಎಸ್.ಶಿವನಂಜಪ್ಪನರನ್ನೂ ರಾಜಕೀಯವಾಗಿ ಮುಗಿಸಿದ ಜಿ.ಎಸ್. ಬಸವರಾಜು ಅವರು, ತಮ್ಮ ಲಿಂಗಾಯಿತ ಸಮುದಾಯದ ರಾಜಕಾರಣಿಗಳಾದ ಉತ್ತಮ ಸಂಸದೀಯ ಪಟು, ಲೋಕಸಭೆಯ ಡೆಪ್ಯೂಟಿ ಸ್ಪೀಕರಾಗಿದ್ದ ಹಾಗೂ ಜಿ.ಎಸ್.ಬಿ.ರವರ ವಕೀಲ ವೃತ್ತಿಯ ಮತ್ತು ರಾಜಕೀಯ ಗುರುಗಳಾದ ಎಸ್.ಮಲ್ಲಿಕಾರ್ಜುನಯ್ಯವರ ರಾಜಕೀಯ ಜಿ.ಎಸ್. ಬಿ.ರವರು 2009 ರಲ್ಲಿ ಬಿಜೆಪಿಯಿಂದ ಟಿಕೆಟ್ ತಂದಿದ್ದರಿಂದ ಅಂತ್ಯಗೊಂಡಿತು.

ಮಾಜಿ ಸಚಿವರುಗಳಾದ ಸಾಗರನಹಳ್ಳಿ ರೇವಣ್ಣ, ಟಿ.ಎಂ.ಮಂಜುನಾಥ, ಕೆ.ಷಡಕ್ಷರಿ ಮುಂತಾದವರನ್ನು ರಾಜಕೀಯವಾಗಿ ಉನ್ನತ ಸ್ಥಾನ ಸಿಗದಂತೆ, ರಾಜಕೀಯವಾಗಿ ಪ್ರಬಲವಾಗಿ ಬೆಳೆಯದಂತೆ ಇವರು ತೊಡರುಗಾಲು ಹಾಕಿದರೆಂದು ಜಿಲ್ಲೆಯ ಎಲ್ಲಾ ರಾಜಕಾರಿಗಳಿಗೆ ತಿಳಿದಿರುವ ವಿಷಯವೇ ಆಗಿದ್ದು, ಕೆಲವರು ಜಿ.ಎಸ್.ಬಸವರಾಜು ಅವರ ಹೆಸರೇಳಿದರೆ ನಿದ್ದೆಯಲ್ಲೂ ಬೆಚ್ಚಿ ಬೀಳುವವರಿದ್ದಾರೆನ್ನಲಾಗುತ್ತಿದೆ.

ಅಷ್ಟೇ ಅಲ್ಲದೆ ತಮ್ಮ ನಂತರ ಹೊಸ ತಲೆಮಾರಿನ ಯುವ ರಾಜಕಾರಣಿಗಳನ್ನೂ ಸಹ ಇವರು ಬೆಳೆಯದಂತೆ ತುಳಿದರು, ಮತ್ತು ಉನ್ನತ ಮಟ್ಟದಲ್ಲಿ ಹೊಸ ಪೀಳಿಗೆಯ ಯುವ ರಾಜಕಾರಣಿಗಳಿಗೆ ರಾಜಕೀಯ ಅವಕಾಶಗಳು ಸಿಗದಂತೆ ನೋಡಿಕೊಂಡರೆನ್ನಲಾಗಿದೆ.

ಎರಡು ಬಾರಿ ರಾಜ್ಯರಾಜಕಾರಣಕ್ಕೆ ಬರಲು ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅದು ಸಾಧ್ಯವಾಗಲಿಲ್ಲ. ಅವರ ರಾಜ್ಯ ರಾಜಕಾರಣದ ಕನಸ್ಸು ಅವರಿಗೆ ಸಾಧ್ಯವಾಗಲಿಲ್ಲ ಅದನ್ನು ಅವರ ಮಗನ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಜಿ.ಎಸ್.ಬಸವರಾಜು ಅವರು ತಾವಷ್ಟೇ ಬೆಳೆದು ತಮ್ಮ ಬೆಂಬಲಿಗರನ್ನಾಗಲಿ, ಯುವಕರನ್ನಾಗಲಿ ತಮ್ಮ ನಂತರದ ರಾಜಕೀಯ ನಾಯಕರನ್ನಾಗಿ ಬೆಳೆಸುವಲ್ಲಿ ಅವರು ಎಂದೂ ಆಸಕ್ತಿಯನ್ನೂ ತೋರಿಸಲಿಲ್ಲ, ಬೆಳೆಯಲೂ ಬಿಡಲಿಲ್ಲ ಎಂಬುದು ರಾಜಕೀಯ ಸೇಡಿನ ತಾತ್ಪರ್ಯ ಎಂದು ಬಣ್ಣಿಸಲಾಗುತ್ತಿದೆ.

1941 ಮೇ 4ರಂದು ತುಮಕೂರು ಸಮೀಪದ ಗಂಗಸಂದ್ರದಲ್ಲಿ ಸಿದ್ದಪ್ಪ ಮತ್ತು ನಂಜಮ್ಮನವರ ಪುತ್ರನಾಗಿ ಜನಿಸಿದ ಜಿ.ಎಸ್.ಬಸವರಾಜು ಅವರು, ಪತ್ನಿ ಶಕುಂತಲಾ, ಇಬ್ಬರು ಗಂಡು ಮಕ್ಕಳು, ಅದರಲ್ಲಿ ಒಬ್ಬ ಮಗ ಜಿ.ಬಿ.ಜ್ಯೋತಿಗಣೇಶ್ ಹಾಲಿ ತುಮಕೂರು ನಗರದ ಶಾಸಕರಾಗಿದ್ದಾರೆ.

ಸೋಮಣ್ಣನವರ ಗೆಲುವಿನ ಬಗ್ಗೆಯ ಪ್ರಶ್ನೆಗೆ, ಗೆಲುವು ಸೋಮಣ್ಣನವರ ಮೇಲೆ ನಿಂತಿದೆ, ಒಟ್ಟಿನಲ್ಲಿ ಗೆಲ್ಲುತ್ತಾರಷ್ಟೇ ಎಂದು ಹೇಳಿದರು.

ಜಿ.ಎಸ್. ಬಸವರಾಜುರವರ ನಿವೃತ್ತಿ ಜೀವನ ಚೆನ್ನಾಗಿರಲಿ, ಖುಷಿಯಾಗಿರಲಿ ಎಂಬುದ ಅವರ ಶಿಷ್ಯಕೋಟಿಯ ಬಯಕೆ.

-ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್

Leave a Reply

Your email address will not be published. Required fields are marked *