ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಪೌತಿ ಖಾತೆ ಕಡ್ಡಾಯ

ತುಮಕೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗುವ ವಿವಿಧ ಸೌಲಭ್ಯಗಳನ್ನು ಪಡೆಯಲು ತಮ್ಮ ಕುಟುಂಬದ ಮೃತರ ಹೆಸರಿನಲ್ಲಿರುವ ಪಹಣಿಗಳನ್ನು ನೈಜ ವಾರಸುದಾರರಿಗೆ ಪೌತಿ ವಾರಸ್ಸು ಹಕ್ಕು ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕೇಸ್ವಾನ್ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ ಕಂದಾಯ ಪ್ರಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪಹಣಿ ದಾಖಲೆಯಲ್ಲಿ ಮೃತಪಟ್ಟ ಖಾತೆದಾರರ ಹೆಸರಿದ್ದರೆ ಸಂಬಂಧಪಟ್ಟ ನೈಜ ವಾರಸುದಾರರು ಪೌತಿ ವಾರಸು ಖಾತೆಯನ್ನು ಶೀಘ್ರವಾಗಿ ಮಾಡಿಸಿಕೊಳ್ಳುವ ಬಗ್ಗೆ ಎಲ್ಲಾ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕೆಂದು ನಿರ್ದೇಶನ ನೀಡಿದರು. 

ಕೃಷಿ ಸೌಲಭ್ಯಗಳಿಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ ಸೀಡಿಂಗ್ ಹಾಗೂ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಖಾತೆದಾರರ ವಾರಸುದಾರರು ತಮ್ಮ ಮಾಹಿತಿಯನ್ನು ತಂತ್ರಾಂಶದಲ್ಲಿ ಕಾಲೋಚಿತಗೊಳಿಸಬೇಕೆಂದು ತಿಳಿಸಿದರಲ್ಲದೆ, ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೈಜ ವಾರಸುದಾರರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಮೃತರ ಹೆಸರಿನಲ್ಲಿಯೇ ಪಹಣಿಯಲ್ಲಿರುವ ನಮೂದುಗಳು ಮುಂದುವರೆದರೆ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. 


ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ಪಹಣಿ ಖಾತೆದಾರರು ಪವತಿ ವಾರಸ್ಸು ಮೂಲಕ ತಮ್ಮ ಪಹಣಿಗಳನ್ನು ಕಾಲೋಚಿತಗೊಳಿಸಿಕೊಳ್ಳಬೇಕು ಎಂದರಲ್ಲದೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಅಭಿಲೇಖಾಲಯಗಳಲ್ಲಿ ದಾಖಲೆಗಳ ಡಿಜಿಟೈಜೇಷನ್ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಜಮೀನಿನ ದಾಖಲೆಗಳನ್ನು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
 
ಕಂದಾಯ ಇಲಾಖೆಯಲ್ಲಿ ಬಗರ್ ಹುಕುಂ, ದುರಸ್ತು, ಹಕ್ಕುಪತ್ರ ಸಂಬಂಧ ಬಾಕಿ ಇರುವ ಅರ್ಜಿಗಳನ್ನು 2 ತಿಂಗಳೊಳಗಾಗಿ ನೈಜ ದಾಖಲೆಗಳನ್ನು ಪರಿಶೀಲಿಸಿ ರೈತರಿಗೆ ಪಹಣಿ ಖಾತೆಗಳನ್ನು ಮಾಡಿಕೊಡಬೇಕೆಂದು ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್ ಹಾಗೂ ಎಲ್ಲಾ ತಾಲ್ಲೂಕಿನ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು. 

Leave a Reply

Your email address will not be published. Required fields are marked *