ಬೆಲೆ ಏರಿಕೆ, ಜಿಎಸ್‍ಟಿ, ನಿರುದ್ಯೋಗವೆ ಬಿಜೆಪಿ ಸರ್ಕಾರದ ಅಚ್ಚೇದಿನ್-ಎಂ.ಬಿ.ಪಾಟೀಲ್ ವಾಗ್ದಾಳಿ

ತುಮಕೂರು: ಬೆಲೆ ಏರಿಕೆ, ಜಿಎಸ್‍ಟಿ ಮತ್ತು ನಿರುದ್ಯೋಗವೆ ಬಿಜೆಪಿ ಸರ್ಕಾರದ ಅಚ್ಚೇದಿನ್ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರವು ಮಹಾನ್ ಭ್ರಷ್ಟ ಸರ್ಕಾರವಾಗಿದ್ದು, ಗುತ್ತಿಗೆದಾರರು ರಾಜ್ಯ ಸರ್ಕಾರಕ್ಕೆ 40 ಪರ್ಸೆಂಟ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದರು ಏನೂ ಮಾತನಾಡದ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳನ್ನು ಕಟ್ಟಿ ಹಾಕಲು ಇ.ಡಿ, ಸಿ.ಬಿ.ಐ ದಾಳಿ ಮಾಡಿ ಧಮನ ಮಾಡಲು ಹೊರಟಿರುವುದು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬೆಲೆ ಏರಿಕೆಯ ಜೊತೆಗೆ ದಿನ ನಿತ್ಯದ ಅಗತ್ಯ ವಸ್ತುಗಳ ಮೇಲೆ ಜಿ.ಎಸ್.ಟಿ ಹಾಕಿ ಜನರು ಬದುಕಲು, ಸಾಯಲು ಆಗದಂತಹ ಸ್ಥಿತಿ ತಂದಿತ್ತಿದ್ದಾರೆ, ಸತ್ತ ಮೇಲೂ ಚಿತಗಾರದಲ್ಲಿ ಸುಡುವುದಕ್ಕೂ ಶೇಕಡ 18 ಜಿ.ಎಸ್.ಟಿ.ಯನ್ನು ಕಟ್ಟಬೇಕು ಇದೇ ಮೋದಿ ಸರ್ಕಾರದ ಅಚ್ಚೆದಿನ್ ಎಂದ ಅವರು, ದೇಶದಲ್ಲಿ ಬಿಜೆಪಿಯು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದು, ನರೇಂದ್ರ ಮೋದಿ ಸರ್ಕಾರ ಜನರ ಬದುಕನ್ನು ಅದೋಗತಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಸರ್ಕಾರವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಪಕ್ಷವಾಗಿದ್ದು, ಸ್ವಾತಂತ್ರ್ಯ ಬಂದ ಮೇಲೆ ಈ ದೇಶದಲ್ಲಿ ಬಡತನ ಹೋಗಲಾಡಿಸಲು, ಶಿಕ್ಷಣ, ಆಹಾರದ ಕೊರತೆ ಮತ್ತು ಉದ್ಯೋಗ ಸೃಷ್ಠಿಯನ್ನು ಮಾಡಿತ್ತು, ಆದರೆ ಕೇವಲ 8 ವರ್ಷದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿರೀಕ್ಷೆಗೂ ಮೀರಿ ಸೃಷ್ಠಿಸಿ ದೇಶವನ್ನು ಅದೋಗತಿಗೆ ತಳ್ಳಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಸರ್ಕಾರವು ದೇಶದಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ ವರೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಏಮ್ಸ್‍ರವರೆಗೆ ಹಾಗೂ ಸೇತುವೆಗಳು, ವಿದ್ಯುತ್,ಅಣೆಕಟ್ಟುಗಳನ್ನು ನಿರ್ಮಿಸಿ ದೇಶವನ್ನು ಅಭಿವೃದ್ಧಿ ಮಾಡಿದರೆ, ಕೇಂದ್ರ ಸರ್ಕಾರವು ಎಲ್ಲಾ ಉದ್ದಿಮೆಗಳನ್ನು ಮಾರಾಟ ಮಾಡುತ್ತಾ ಇದೆ ಎಂದರು.

ರಾಜ್ಯದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರವು ನೀರಾವರಿಗೆ ಹೆಚ್ಚು ಆದ್ಯತೆಯನ್ನು ನೀಡಿತ್ತು, ಆದರೆ ಈಗಿನ ಬಿಜೆಪಿ ಸರ್ಕಾರವು ಕಮಿಷನ್ ಆಧಾರದ ಸರ್ಕಾರವಾಗಿ ಅಭಿವೃದ್ಧಿಯನ್ನು ಮರೆತ್ತಿದ್ದಾರೆ, ಹಿರಿಯ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಸರ್ಕಾರ ನಡೆಯುತ್ತಿಲ್ಲ, ಹಾಗೆ ತಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ ಅಂದರೆ ಸರ್ಕಾರ ಇಲ್ಲ ಎಂದರ್ಥ ಎಂದರು.

2023ರಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಜಾತಿ-ಧರ್ಮ ಬಿಟ್ಟು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರುಗಳಾದ ಎಸ್.ಷಪಿಅಹ್ಮದ್, ಆರ್,ನಾರಾಯಣ್, ಡಾ.ರಫೀಕ್‍ಅಹ್ಮದ್, ಕೆ.ಷಡಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ, ಮುರಳಿಧರ ಹಾಲಪ್ಪ, ರಾಯಸಂದ್ರ ರವಿಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು ಮುಂತಾದವರಿದ್ದರು.

Leave a Reply

Your email address will not be published. Required fields are marked *