ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಾಥಮಿಕ ಶಿಕ್ಷಣವೇ ಬುನಾದಿ-ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ.ಪಿ.ಎನ್.

ತುಮಕೂರು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಶಿಕ್ಷಣದ ಬುನಾದಿ ಬಹುಮುಖ್ಯವಾಗಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಭಾಷೆ, ಬರವಣಿಗೆ, ಕೌಶಲ್ಯತೆ, ಸಾಮಾನ್ಯ ಜ್ಞಾನವನ್ನು ಈ ಹಂತದಲ್ಲೇ ಪಡೆದುಕೊಂಡಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಬಹುದೆಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ.ಪಿ.ಎನ್. ಹೇಳಿದರು.

ಅವರು ಫೆಬ್ರವರಿ 8ರಂದು ಗುಬ್ಬಿ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಜ್ಞಾನಮಲ್ಲಿಕಾ-ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ‘ಮಕ್ಕಳೊಡನೆ ಮಾತು ಕತೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಗ್ರಾಮೀಣ ಭಾಗದ ವಿದ್ಯಾಥಿಗಳಲ್ಲಿ ಬದ್ಧತೆ, ಕೌಶಲ್ಯ, ವ್ಯವಹಾರಿಕ ಜ್ಞಾನ, ಹಿರಿ-ಕಿರಿಯರಿಗೆ ಗೌರವ ಕೊಡುವುದನ್ನು ಕಲಿಸುವುದು ಗ್ರಾಮೀಣ ಪ್ರದೇಶದ ಪಾಠ ಶಾಲೆಗಳೆಂದರೆ ಹಳ್ಳಿಗಳು, ಪ್ರಾಥಮಿಕ ಹಂತದ ಶಿಕ್ಷಣದ ಬೂನಾದಿ ಬಹುಮುಖ್ಯವಾದದ್ದು, ಪ್ರಾಥಮಿಕ ಶಿಕ್ಷಣದ ಬೂನಾದಿ ಬಿಗಿಯಾಗಿದ್ದರೆ ಜ್ಞಾನದ ಸೌಧಗಳನ್ನು ಸುಲಭವಾಗಿ ಕಟ್ಟಬಹುದು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮೈಸೂರು ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಅವರು ಸಮ ಸಮಾಜದ ಕನಸ್ಸನ್ನು ಕಂಡವರು, ಒಬ್ಬರು ಸಂವಿಧಾನ ನೀಡಿದರೆ, ಮತ್ತೊಬ್ಬರು ಆಗಿನ ಕಾಲಕ್ಕೆ ಮೀಸಲಾತಿಯ ಮೂಲಕ ಶಿಕ್ಷಣ ನೀಡಿದಂತಹ ಮಹಾನುಭಾವರು.

ಅಂಬೇಡ್ಕರ್ ಅವರು ಇಡೀ ಪ್ರಪಂಚದಲ್ಲಿ ಹೆಚ್ಚು ಶಿಕ್ಷಣದ ಜ್ಞಾನ ಪಡೆದವರಲ್ಲಿ ಒಬ್ಬರು ಎಂಬುದನ್ನು ಜಗತ್ತಿನ ಶಿಕ್ಷಣ ತಜ್ಞರುಗಳು ಹೇಳಿದ್ದಾರೆ, ಅವರನ್ನು ಜ್ಞಾನದ ಸೂರ್ಯ ಎಂದು ಕರೆಯಲಾಗುತ್ತಿದ್ದು, ಭಾರತದ ವೈವಿಧ್ಯಮಯ ಸಂಸ್ಕøತಿ, ಜಾತಿ, ಜನಾಂಗ, ಧರ್ಮ, ವೈವಿಧ್ಯತೆಯಿರುವ ಭಾರತಕ್ಕೆ ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನ ಸಮಿತಿ ನೇತೃತ್ವದಲ್ಲಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚನೆ ಮಾಡಿ ಕೊಟ್ಟವರು, ಇಂತಹ ಅಂಬೇಡ್ಕರ್‍ರವರನ್ನು ನಾವು ಮಾದರಿಯನ್ನಾಗಿಟ್ಟುಕೊಳ್ಳಬೇಕು, ಸಮಾಜದಲ್ಲಿ ಶೋಷಣೆಯನ್ನು ಎದುರಿಸಿದಂತಹವರು, ಇವತ್ತು ಅವರನ್ನು ಪೂಜ್ಯಭಾವನೆಯಿಂದ ಕಾಣುತ್ತಿದ್ದೇವೆ ಎಂದರೆ ಅವರು ಪಡೆದುಕೊಂಡ ಜ್ಞಾನದಿಂದ, ಅಂಬೇಡ್ಕರ್ ಇಂತಹ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದು ಅವರಲ್ಲಿದ್ದ ಬದ್ಧತೆ ಮತ್ತು ಕಾಳಜಿಯಾಗಿತ್ತು ಎಂದು ಹೇಳಿದರು.

ನಾವು ಆ ರೀತಿ ಸಾಧನೆ ಮಾಡಲು ಸಾಧ್ಯವೇ ಅಂತ ಅಂದುಕೊಳ್ಳುತ್ತೇವೆ, ಈ ರೀತಿ ಪ್ರಶ್ನೆಗಳನ್ನು ಮಾಡಿಕೊಂಡಾಗ ಮುಂದಿನ ದಾರಿ ಗೊತ್ತಾಗುತ್ತದೆ, ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಶಿಕ್ಷಕರು ವಿವಿಧ ಚಟುವಟಿಕೆಗಳಾದ ಪಠ್ಯ ಪುಸ್ತಕ ಬೋಧನೆ, ಟೀಚಿಂಗ್ ಗೈಡ್ಸ್ ಮೂಲಕ ಬೋಧನೆ, ಸ್ಮಾರ್ಟ್ ಕ್ಲಾಸ್ ಬೋಧನೆ, ವಿಜ್ಞಾನದ ಮಾದರಿಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸುವುದು ನಾಟಕ, ಕರಕುಶಲ ವಸ್ತುಗಳ ತಯಾರಿಕೆ, ಫೆಸ್ಟ್ ಕಾರ್ಯಕ್ರಮಗಳನ್ನು ಆಯಾ ಪಠ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದಲೇ ಮಾಡಿಸುವುದರಿಂದ ನಿಮ್ಮ ಭೌದ್ದಿಕ ಬೆಳವಣಿಗೆಯನ್ನು ಬೆಳಸುತ್ತಾರೆ, ಈ ಹಿನ್ನಲೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಬಹುಮುಖ್ಯವಾದದ್ದು ಎಂದು ಹೇಳಿದರು.

ಶಾಲೆಗಳಲ್ಲಿ ಮಕ್ಕಳಿಗೆ ವೇದಿಕೆ ಕಾರ್ಯಕ್ರಮಗಳನ್ನು ಕಲ್ಪಿಸುವುದರಿಂದ ಧೈರ್ಯದ ಜೊತೆಗೆ ಭಾಷೆಯನ್ನು ಸಂಭೋದಿಸುವ, ಮಾತನಾಡುವ ಕೌಶಲ್ಯ ಮಕ್ಕಳಲ್ಲಿ ಬೆಳವಣಿಗೆಯಾಗುತ್ತದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ಸಹಕಾರಿಯಾಗುತ್ತದೆ, ಅದೇ ರೀತಿ ಮಕ್ಕಳಲ್ಲಿ ಕಂಠಪಾಠ, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ ಏರ್ಪಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣದ ಶಿಕ್ಷಕರುಗಳನ್ನು ವಿದ್ಯಾರ್ಥಿಗಳು ಹೆಚ್ಚು ಪ್ರೀತಿಸುವುದಲ್ಲದೆ, ನೆನಪಿಟ್ಟುಕೊಂಡಿರುತ್ತಾರೆ.ಯಾವುದೇ ಪಠ್ಯವಾಗಲಿ ಚೆನ್ನಾಗಿ ಓದಲಿಕ್ಕೆ, ಬರೆಯಲಿಕ್ಕೆ ಬರಬೇಕು, ಓದುವಾಗ ಏರಿಳಿತಗಳನ್ನಿಟ್ಟುಕೊಂಡು ಓದಿದಾಗ ಪಠ್ಯದ ಸಾರಾಂಶ ಅರ್ಥವಾಗಿ ನೆನಪಿನಲ್ಲಿ ಉಳಿಯಲಿದೆ, ಪದಗಳನ್ನು ಯಾವ ರೀತಿ ಉಚ್ಛಾರ ಮಾಡಬೇಕು, ಆ ಪದಗಳನ್ನು ಆಯಾ ಭಾಷೆಯ ವ್ಯಾಕರಣಕ್ಕನುಗುಣವಾಗಿ ಉಚ್ಛರಿಸಿ ಸ್ಪಷ್ಟವಾಗಿ ಬರೆಯುವುದನ್ನು ಪ್ರಾಥಮಿಕ ಹಂತದಲ್ಲಿ ಕಲಿತಾಗ ಮುಂದಿನ ಶಿಕ್ಷಣವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಈಗ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಇಂಗ್ಲೀಷ್ ಭಾಷೆಯೇ ಹೆಚ್ಚು ಪ್ರಧಾನವಾಗುತ್ತಿರುವ ಕಾಲದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಲು, ಇತರೆ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾಗಿರುವುದರಿಂದ ಇಂಗ್ಲೀಷ್ ಜಾÐನದ ಅರಿವು ಬಹುಮುಖ್ಯವಾಗಿರುವುದರಿಂದ ಮಾತೃಭಾಷೆಯ ಜ್ಞಾನದ ಜೊತೆಜೊತೆÉಗೆ ಇಂಗ್ಲೀಷ್ ಭಾಷೆಯ ಜ್ಞಾನವನ್ನು ಪಡೆದುಕೊಳ್ಳಬೇಕಾದದ್ದು ಇಂದು ಹೆಚ್ಚು ಪ್ರಸ್ತುತ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಚ್ಛಿಕ ವಿಷಯದೊಂದಿಗೆ ಸಾಮಾನ್ಯ ಜ್ಞಾನ, ತಂತ್ರಜ್ಞಾನದ ವಿಷಯಗಳನ್ನು ಒಳಗೊಂಡಿರುವುದರಿಂದ ವಿದ್ಯಾರ್ಥಿಗಳು ಜ್ಞಾನ ಭಂಡಾರಗಳಾಗಿರುವ ಗ್ರಂಥಾಲಯದ ಪುಸ್ತಕಗಳನ್ನು, ಪಠೇತರ ಪುಸ್ತಕಗಳನ್ನು, ದಿನಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ತಿಳಿದುಕೊಂಡ ವಿಷಯಗಳನ್ನು ವಿಶ್ಲೇಷಣೆ ಮಾಡಿಕೊಳ್ಳಬೇಕು, ಇದರಿಂದ ಜ್ಞಾನಾರ್ಜನೆಯಾಗುವುದರಿಂದ ಒಂದಲ್ಲ ಒಂದು ದಿನ ಅವಕಾಶದ ಬಾಗಿಲು ತೆರೆದುಕೊಳ್ಳಲಿದೆ. ವಿದ್ಯಾರ್ಥಿಗಳಲ್ಲಿ ಓದಿನ ಒಲವು ಮತ್ತು ಬದ್ಧತೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಂಡಿತ ಸಿಗಲಿದೆ ಎಂದು ಹೇಳಿದರು.

ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದು, ಬರೆಯುವುದು ಈ ಎರಡು ಆದ ಮೇಲೆ ಮನನ ಮಾಡಿಕೊಳ್ಳುವುದು, ಮೆಲಕು ಹಾಕುವುದು ಬಹುಮುಖ್ಯವಾದದ್ದು, 3 ಗಂಟೆಗಳಲ್ಲಿ ನಾವು ಪರೀಕ್ಷೆ ಬರೆಯುವುದರಿಂದ ಅಲ್ಲಿಯ ಪ್ರಶ್ನೆಗಳಿಗೆ ನಿಖರ ಮತ್ತು ತಪ್ಪಿಲ್ಲದೆ, ಅಂದವಾಗಿ ಬರೆಯುವುದು ಬಹುಮುಖ್ಯ, ಅಂದವಾದ ಬರವಣಿಗೆಯೇ ಕೆಲವೊಮ್ಮೆ ನಿಮಗೆ ಯಶಸ್ಸನ್ನು ತಂದು ಕೊಡಲಿದೆ ಎಂದು ಹೇಳಿದರು.

ಸಾಧನೆ ಎಂಬುದು ಸೋಮಾರಿಗಳ ಸ್ವತ್ತಲ್ಲ, ಸಾಧಕನ ಸ್ವತ್ತು, ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ ಆದ್ದರಿಂದ ಕಲಿಯಬೇಕು, ಕಲಿತ್ತಿದ್ದನ್ನು ಕಲಿಸಬೇಕು, ದೇಶದಲ್ಲಿ ಅಪಾರವಾದ ಜ್ಞಾನದ ಸಂಪತ್ತಿದ್ದು, ಆ ಸಂಪತ್ತು ಜ್ಞಾನದಿಂದ ಹೊರ ಹೊಮ್ಮುತ್ತದೆ, ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯನ್ನು ಇಟ್ಟುಕೊಳ್ಳಬಾರದು, ನಮ್ಮ ಮೊದಲ ಶತೃವೆ ಕೀಳರಿಮೆಯಾಗಿದ್ದು, ಇನ್ನೊಬ್ಬರೊಂದಿಗೆ ಹೋಲಿಕೆಯನ್ನು ಮಾಡಿಕೊಳ್ಳದೆ ತಮ್ಮದೆಯಾದ ಒಂದು ಅಸ್ತಿತ್ವ ಗುರುತಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಸಮಾರಂಭದಲ್ಲಿ ಪ್ರಾಸ್ತವಿಕವಾಗಿ ಪತ್ರಕರ್ತ ವೆಂಕಟಾಚಲ.ಹೆಚ್.ವಿ. ಮಾತನಾಡಿದರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಶಾಲಾ ಎಸ್‍ಡಿಎಂಸಿ ಅಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್, ಮುಖ್ಯೋಪಾಧ್ಯಾಯರಾದ ಗಂಗಾಧರ, ವಕೀಲರಾದ ಕೆ.ಎಸ್.ರಾಘವೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *