ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಅಂಗವಾಗಿ ಈ ತಿಂಗಳ 17ರಂದು ಬುಧವಾರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ನಗರದಲ್ಲಿ ವಿವಿಧ ಸಮಾಜ ಸೇವಾ ಹಾಗೂ ಆರೋಗ್ಯ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶ್ವ ನಾಯಕ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ವಿವಿಧ ದೇಶಗಳಲ್ಲೂ ಆಚರಣೆ ಮಾಡಲಾಗುತ್ತಿದೆ. ಹಬ್ಬದ ರೀತಿಯಲ್ಲಿ ಮೋದಿಯವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಬೆಳಿಗ್ಗೆ 9.30ಕ್ಕೆ ನಗರದ ಸಂಸದರ ಕಚೇರಿ ಆವರಣದಲ್ಲಿ ಬೃಹತ್ ಉಚಿತ ಬೃಹತ್ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ತಜ್ಞ ವೈದ್ಯರ ತಂಡ ಶಿಬಿರಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಲಿದೆ. ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸುವವರು ತಪ್ಪದೆ ತಮ್ಮ ಬಿಪಿಎಲ್ ಕಾರ್ಡ್ ಹಾಗೂ ಹಳೆಯ ವೈದ್ಯರ ಚೀಟಿ ತರಬೇಕು.
ಇದಕ್ಕೂ ಮುನ್ನ ಬೆಳಿಗ್ಗೆ 8.30ಕ್ಕೆ ಸಚಿವ ವಿ.ಸೋಮಣ್ಣನವರು ಕ್ಯಾತ್ಸಂದ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವರು. ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧ ಶಾಲೆಗಳ 40 ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 75 ಮಂದಿ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ನಗರದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುವುದು.
ಮೈತ್ರಿ ಪಕ್ಷವಾದ ಬಿಜೆಪಿ ಹಾಗೂ ಜೆಡಿಎಸ್‍ನ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಎರಡೂ ಪಕ್ಷಗಳ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವಾಕಾರ್ಯಗಳ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.