ತುಮಕೂರು: ಜಿಎಂಎಸ್ ಹೇಗೆ ಬದುಕಿದ್ದರು ಎಂದರೆ ಅವರೊಬ್ಬ ರೋಲ್ ಮಾಡಲ್ ಆಗಿದ್ದರು. ಒಬ್ಬ ಅಧ್ಯಾಪಕರಾಗಿ ಹೇಗಿರಬೇಕು, ಒಬ್ಬ ಹೋರಾಟಗಾರರಾಗಿ ಹೇಗಿರಬೇಕು. ಗೆಳೆಯನಾಗಿ ಹೇಗಿರಬೇಕು. ಹಿರಿಯನಾಗಿ ಹೇಗಿರಬೇಕು. ಕುಟುಂಬದ ಹಿರಿಯನಾಗಿ ಹೇಗಿರಬೇಕು ಈ ಎಲ್ಲಾ ಪಾತ್ರಗಳಲ್ಲಿ ಜಿಎಂಎಸ್ ನೂರಕ್ಕೆ ನೂರು ಅಂಕ ಪಡೆದು ರ್ಯಾಂಕ್ ಪಡೆದವರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.
ಸಮತಾ ಬಳಗದ ವತಿಯಿಂದ ತುಮಕೂರು ನಗರದ ಐಎಂಎ ಭವನದಲ್ಲಿ ಹಮ್ಮಿಕೊಂಡಿದ್ದ ಜಿಎಂಎಸ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಬಹಳ ಕಷ್ಟ. ಕೆಟ್ಟವರಾಗುವುದು ಸುಲಭ, ಸತ್ಯ ಹೇಳುವುದು ಕಷ್ಟ. ಸುಳ್ಳು ಹೇಳುವುದು ಸುಲಭ. ಮೋಸ ಮಾಡುವುದು ಸುಲಭ. ಅದರಲ್ಲೂ ಯಾರಿಗೂ ವಂಚನೆ ಮಾಡದೆ ಬದುಕುವುದು ಕಷ್ಟ. ನಮ್ಮ ಆತ್ಮಸಾಕ್ಷಿಗೆ ಅದನ್ನು ಹೇಳುತ್ತಾ ಬದುಕುವುದು ಅದರಂತೆ ನಡೆದುಕೊಳ್ಳುವುದು ಬಹಳ ಕಷ್ಟದ ಕೆಲಸ
ತನ್ನ ಸಚ್ಚಾರಿತ್ರ್ಯವನ್ನು, ತನ್ನ ಪ್ರಾಮಾಣಿಕತೆಯನ್ನು, ತನ್ನ ಸರಳತೆಯನ್ನು, ತನ್ನ ಬದ್ದತೆಯನ್ನು, ತನ್ನ ಕಾಯಕ ನಿಷ್ಠೆಯನ್ನು ಯಾವುದನ್ನು ಬಿಟ್ಟುಕೊಡದೆ ಬದುಕುವುದು ಇದೆಯಲ್ಲ, ಇದೊಂದು ದೊಡ್ಡ ಬದುಕು. ಆ ರೀತಿ ಬದುಕಿದವರು ಜಿ.ಎಂ.ಶ್ರೀನಿವಾಸಯ್ಯ ಎಂದು ತಿಳಿಸಿದರು.

ಜಾತಿ ವ್ಯವಸ್ಥೆಗೆ 5 ಸಾವಿರ ವರ್ಷ ಅಂತ ಹೇಳುತ್ತೇವೆ. ಜಿಎಂಎಸ್ ಹೇಳುವಂತೆ ನಮ್ಮ ಹಳ್ಳಿಯಲ್ಲಿ ಜಾತಿಯತೆಯ ಅನುಭವವಾಗಿಲ್ಲ. ನಾನು ಕಾಲೇಜಿಗೆ ಸೇರಲಿಕ್ಕೆ ಹೋದಾಗ, ಮಹರಾಜ ಕಾಲೇಜಿಗೆ ಹೋದಾಗ ಜಾತಿಯತೆ ಎದುರಾಗುತ್ತದೆ. ಈಗಲೂ ಜಾತೀಯತೆ ಭೀಕರವಾಗಿ ಬೆಳೆದಿದೆ. ಹಳ್ಳಿಯಲ್ಲಿ ಜಾತೀಯತೆಯನ್ನು ಒಂದು ರಿಚುಯಲ್ ಆಗಿ ನೋಡುತ್ತಾರೆ. ಅದರಲ್ಲಿ ಎಲ್ಲೋ ಒಂದು ಕಡೆ ಮಾನವೀಯ ಸ್ಪರ್ಶ ಇರುತ್ತದೆ. ಆದರೆ ಇಂದು ಯುನಿವರ್ಸಿಟಿಗಳಲ್ಲಿ ಜಾತಿಯತೆ ಇದೆ. ದೊಡ್ಡ ದೊಡ್ಡ ಕಚೇರಿಗಳಲ್ಲಿದೆ. ಅದನ್ನು ಅನುಭವಿಸಿದವರು ಜಿಎಂಎಸ್. ಅವರಿಗೆ ಅದು ಕಂಡಿದೆ ಎಂದರು.
ಬಡತನ ಕಷ್ಟ. ಗ್ರಾಮೀಣ ಪ್ರದೇಶದಿಂದ ಬರುವುದು ಇನ್ನೂ ಕಷ್ಟ. ಹಿಂದುಳಿದ ಜಾತಿಯಲ್ಲಿ ಬರುವುದು ಅತಿ ಕಷ್ಟ. ಜಾತಿ ಮತ್ತು ವರ್ಗ ಇದೆಲ್ಲವನ್ನು ಅನುಭವಿಸುತ್ತಾ, ಒಂದು ಯುನಿವರ್ಸಿಟಿಯ ಪ್ರೊಫೆಸರ್ ಆಗಿ ಬರುವುದು ಇದೆಯಲ್ಲ ಅದು ಬಹಳ ಕಷ್ಟದ ಕೆಲಸ ಎಂದು ಹೇಳಿದರು.
ಸುದೀರ್ಘ ಕಾಲ ಬದುಕಿದ್ದು ಬಹಳ ಒಳ್ಳೆಯವರಾಗಿ ಬಹಳ ಸಜ್ಜನರು, ಪ್ರಾಮಾಣಿಕರು ಸಚ್ಚಾರಿತ್ರ್ಯವುಳ್ಳವರಾಗಿ ಹೆಸರು ಪಡೆಯುವುದು ಬಹಳ ಕಷ್ಟದ ಕೆಲಸ. ಅಂತ್ಯದವರೆಗೆ ಅದನ್ನು ಉಳಿಸಿಕೊಳ್ಳುವುದು ಇದೆಯಲ್ಲ ಕಷ್ಟ. ಜಿಎಂಎಸ್ ದೊಡ್ಡ ಸಾಧನೆ ಎಂದರೆ, ಎಲ್ಲಿಯೂ ಎಡವದೆ, ಬೀಳದೆ ದಣಿಯದೆ 92 ವರ್ಷ ಬದುಕಿದ್ದು ದೊಡ್ಡದು ಎಂದು ತಿಳಿಸಿದರು.
ನಾನು ಶಿವರಾಮ ಕಾರಂತರ ದೊಡ್ಡ ಅಭಿಮಾನಿ. ಅವರು ಕೊನೆಯ ದಿನಗಳಲ್ಲಿ ಅವರ ವಿಚಾರಗಳನ್ನು, ಆಚಾರಗಳನ್ನು ನೋಡಿದಾಗ ನನಗೆ ಬಹಳ ಬೇಸರವಾಯಿತು. ನಮ್ಮ ಒಳಗಡೆ ಕಾರಂತರಂಥ ಮೂರ್ತಿ ಇರುತ್ತದೆ. ಅದಕ್ಕೆ ಭಂಗವಾದರೆ ನನಗೆ ನೋವಾಗುತ್ತದೆ. ಕಾರಂತರು ಹಾಗೆ ನಡೆದುಕೊಳ್ಳಬಾರದಿತ್ತು ಎಂದರು.
ವಯಸ್ಸಾದಂತೆ ಸಿನಿಕತೆ ಬರುತ್ತದೆ. ಆದರೆ ಶ್ರೀನಿವಾಸಯ್ಯ ಅವರಿಗೆ ಅದು ಇರಲಿಲ್ಲ. ಜಿಎಂಎಸ್ ಮತ್ತು ದೊರೈರಾಜ್ ಅವರಿಬ್ಬರು ಜೋಡೆತ್ತಿನಂತಿದ್ದರು. ಉತ್ತಮ ಒಡನಾಟ ಅವರ ಮಧ್ಯೆ ಇತ್ತು. ಇವರಿಬ್ಬರು ತುಮಕೂರಿನ ಎರಡು ಸಾಕ್ಷಿಪ್ರಜ್ಞೆಗಳು ಆಗಿದ್ದರು. ಇವರು ಭ್ರಷ್ಟಾಚಾರ, ಅನೈತಿಕತೆ, ದ್ವೇಷ, ಕೋಮುವಾದ ನಮ್ಮ ಕಾಡುತ್ತಿವೆ. ಇದನ್ನು ವಿರೋಧಿಸಿ ಬೀದಿಗೆ ಬರುತ್ತಿದ್ದರು.
ಸಾಹಿತಿ ನಾಗರಾಜ ಶೆಟ್ಟಿಯವರು ಮಾತನಾಡಿ ಜಿ.ಎಂ.ಶ್ರೀನಿವಾಸಯ್ಯನವರು ಯಾರನ್ನು ಹೆಚ್ಚು ಅವಲಂಬಿಸಬಾರದು, ಯಾರ ಮೇಲೂ ಹೆಚ್ಚು ಹೊರೆಯಾಗಬಾರದು, ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು ಎಂದು ಹೇಳುತ್ತಿದ್ದರು, ಬದುಕಿನುದ್ದಕ್ಕೂ ಅವರು ಅದೇ ರೀತಿ ತೋರಿಸಿದವರು, ಅವರು ದೇವರನ್ನು ನಂಬುತ್ತಿರಲಿಲ್ಲ, ಆಗಂತ ಅವರ ಮನೆಯವರ ನಂಬಿಕೆಗಳಿಗೆ ಎಂದೂ ಅಡ್ಡಿ ಪಡಿಸಲಿಲ್ಲ, ಅವರ ಮಗ ಸೊಸೆ ದೇವರ ಭಕ್ತರಾಗಿದ್ದರು, ಅವರು ದೇವಸ್ಥಾನಕ್ಕೆ ಹೋದಾಗಲೇ ಅಪಘಾತದಲ್ಲಿ ಮೃತಪಟ್ಟರೂ ದೇವರನ್ನಾಗಲಿ, ವಿಧಿಯನ್ನಾಗಲಿ ಶಪಿಸಲಿಲ್ಲ, ಆದರೆ ಮಗ-ಸೊಸೆ ಸಾವು ಅವರ ಹೃದಯಕ್ಕೆ ಗಾಯ ಮಾಡಿತ್ತು, ಅದನ್ನು ಯಾರೊಂದಿಗೂ ಅವರು ಹಂಚಿಕೊಳ್ಳಲಿಲ್ಲ, ಅಷ್ಟು ವಿಶಾಲ ಹೃದಯ ಅವರದು ಎಂದು ಹೇಳಿದರು.
ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಪ್ರೊಫೆಸರ್ ಜಿ.ಎಂ.ಶ್ರೀನಿವಾಸಯ್ಯ ಅವರ ಬದುಕನ್ನು ನೋಡಿದರೆ ದೊಡ್ಡ ಆಲದ ಮರದ ಕೆಳಗೆ ಕೂತ ದೊಡ್ಡಗುರುವಿನ ಸ್ಥಾನದಲ್ಲಿದ್ದರು. ಅವರ ಜೊತೆ ಆ ಧ್ಯಾನಲೋಕದಲ್ಲಿ ನಾವೆಲ್ಲ ಇದ್ದೇವೆ. ಸಾವಿರಾರು ಜನ ಇದ್ದರು. ನನ್ನ ಪತ್ನಿಯ ಜೊತೆಗೂ ಅಷ್ಟೊಂದು ದೀರ್ಘವಾಗಿ ಬದುಕಲು ಆಗಿಲ್ಲ.ಆದರೆ ಪ್ರೊ.ಜೆಎಂಎಸ್ ಜೊತೆಯಲ್ಲಿ ಬದುಕಿದ್ದೇನೆ. ಮುಕ್ತವಾದ ಬದುಕು ಅವರದು ಬೌದ್ಧಿಕ ಸಂಪತ್ತು ಇದೆಯಲ್ಲ, ಅದು ಅವರಲ್ಲಿ ಪಾಠದಲ್ಲಿ ವ್ಯಕ್ತವಾಗುತ್ತಿತ್ತು. ಸದಾ ಅಧ್ಯಯನಶೀಲತೆಯಲ್ಲಿ ತೊಡಗಿಕೊಂಡಿದ್ದರು. ಅವರು ತುಂಬ ದೊಡ್ಡ ಜ್ಞಾನಿಗಳಾಗಿದ್ದರು. ಇದುವರೆಗೂ ಅಂಥವರನ್ನು ನೋಡಲು ಸಾಧ್ಯವಾಗಿಲ್ಲ. ನಿಷ್ಠ ಮತ್ತು ಅಧ್ಯಯನಶೀಲತೆ ಬಗ್ಗೆ ಅವರ ಜೊತೆ ಚರ್ಚೆ ಮಾಡುವಾಗ ವ್ಯಕ್ತವಾಗುತ್ತಿತ್ತು. ಈ ಜ್ಞಾನ ಎಲ್ಲರಿಗೂ ಸಿಗಬೇಕಾಗಿತ್ತು. ಪುಸ್ತಕ ಮನೆ ಮಾಡಿದ ಉದ್ದೇಶ ಇದೇ ಆಗಿತ್ತು.
ಪ್ರಾಸ್ತಾವಿಕ ಮಾತನಾಡಿದ ಚರಕ ಆಸ್ಪತ್ರೆಯ ಡಾ.ಬಸವರಾಜು ಮಾತನಾಡಿ ಪ್ರಾಮಾಣಿಕವಾಗಿ, ಸರಳವಾಗಿ, ಈ ಸಮಾಜದ ಹಿತವನ್ನು ಕಾಪಾಡುವಂತಹ, ಎಲ್ಲಾ ಜನರ ಸಮಾನತೆಯನ್ನು ಬಯಸುವಂತಹ ಮನಸ್ಸುಗಳು ಕ್ಷೀಣಿಸುತ್ತಿರುವ ಈ ಕ್ಷಣದಲ್ಲಿ ಇರುವ ಬೆರಳೆಣಿಕೆಯ ಅಂತಹ ವ್ಯಕ್ತಿತ್ವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹೆಚ್ಚು ಜನ ಇಂತಹ ದಾರಿಯಲ್ಲಿ ನಡೆಯಬೇಕಾಗುತ್ತದೆ. ಇಂತಹ ಜನಸಂಖ್ಯೆಯನ್ನು ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಜಿಎಂಎಸ್ ನಂಥ ಚೇತನಗಳು ದ್ವಿಗುಣಗೊಳ್ಳಬೇಕಾಗಿದೆ. ಅವರ ವ್ಯಕ್ತಿತ್ವ ಎಂತಹದೆಂದು ಎಲ್ಲರಿಗೂ ತಿಳಿದಿದೆ. ದೊರೈ, ಶ್ರೀನಿವಾ¸ಯ್ಯ ಮತ್ತು ರಾಮಚಂದ್ರ ಅವರು ಪುಸ್ತಕ ಮನೆ ಮಾಡಿಕೊಂಡು ಒಳ್ಳೆಯ ಪುಸ್ತಕಗಳನ್ನು ತರಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದರು.
ಇದೇ ಸಚಿದರ್ಭದಲ್ಲಿ ರಂಗಭೂಮಿ ಪ್ರಶಸ್ತಿ ಪಡೆದ ಸೈಯದ್ ಅಹ್ಮದ್ ಖಾನ್ ಅವರನ್ಮ್ನ ಸನ್ನಾನಿಸಲಾಯಿತು

ಈ ಸಂದರ್ಭದಲ್ಲಿ ಎಸ್.ಎ.ಖಾನ್, ಡಾ.ಅರುಂಧತಿ, ಡಾ.ರವಿಕುಮಾರ್ ನೀಹ, ಪತ್ರಕರ್ತ ಕುಚ್ಚಂಗಿ ಪ್ರಸನ್ನ, ನಟ ಎಸ್.ಹನುಮಂತೇಗೌಡ, ವೈ.ಕೆ.ಬಾಲಕೃಷ್ಣ, ಸುಪ್ರೀಂ ಸುಬ್ಬಣ್ಣ, ಸಿ.ಕೆ.ಉಮಾಪತಿ, ಗಂಗಲಕ್ಷ್ಮಿ, ಜಿಎಂಎಸ್ ಕುಟುಂಬದವರು ಮಾತನಾಡಿದರು. ಡಾ.ಬಸವರಾಜು ಸ್ವಾಗತಿಸಿ, ಸಮತಾ ಬಳಗದ ಹೆಚ್.ವಿ.ಮಂಜುನಾಥ್ ನಿರೂಪಿಸಿದರು.