ತುಮಕೂರು: ಕರಕುಶಲತೆಗೆ ವಿಶ್ವಕರ್ಮ ಸಮಾಜ ಹೆಸರುವಾಸಿಯಾಗಿದ್ದು, ಜಿಲ್ಲೆಯ ಕೌಶಲ್ಯಾಭಿವೃದ್ಧಿ ಕೇಂದ್ರವೊಂದಕ್ಕೆ ವಿಶ್ವಕರ್ಮ ಕೌಶಲ್ಯಾಭಿವೃದ್ಧಿ ಕೇಂದ್ರವೆಂದು ಹೆಸರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭರವಸೆ ನೀಡಿದರು.
ಅವರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ಮನವಿಗೆ ಸ್ಪಂದಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ವಸಂತಾ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ತೆರೆಯಲು ಕ್ರಮವಹಿಸಲಾಗುತ್ತಿದ್ದು, ಈಗಾಗಲೇ ಸ್ಮಾರ್ಟ್‍ಸಿಟಿ ಗ್ರಂಥಾಲಯದ ಮೇಲ್ಭಾಗ ಇನ್‍ಕ್ಯೂಬೇಷನ್ ಸೆಂಟರ್ ಸ್ಥಾಪನೆಯಾಗಿದೆ. ಸಮಾಜ ಲಿಖಿತ ಮನವಿ ಸಲ್ಲಿಸಿದ್ದಲ್ಲಿ ಯಾವುದಾದರೂ ಒಂದು ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ವಿಶ್ವಕರ್ಮರ ಹೆಸರಿಡಲು ಪ್ರಯತ್ನಿಸುವುದಾಗಿ ತಿಳಿಸಿ, ಕೈದಾಳದ ಅಮರಶಿಲ್ಪಿ ಜಕಣಾಚಾರಿ ಭವನ ಸದ್ಬಳಕೆಗೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಆಧುನಿಕ ಯಂತ್ರೋಪಕರಣ ಅನ್ವೇಷಣೆಯ ಪೂರ್ವದಲ್ಲೆ ಯುದ್ದದ ಶಸ್ತ್ರಾಸ್ತ್ರಗಳು, ಅರಮನೆಗಳು, ಕೃಷಿ ಪರಿಕರಗಳು, ಆಭರಣಗಳು, ಶಿಲಾಮೂರ್ತಿಗಳನ್ನು ವಿಶ್ವಕರ್ಮ ಸಮಾಜದವರೇ ಕೈಯಲ್ಲಿ ನಿರ್ಮಿಸುತ್ತಾ ಬಂದಿದ್ದು, ಇಡೀ ವಿಶ್ವಕ್ಕೆ ವಾಸ್ತುಶಿಲ್ಪ ವಿಶ್ವಕರ್ಮ ಸಮಾಜದ ಕೊಡುಗೆಯೆನಿಸಿದೆ. ಬ್ರಹ್ಮನ ವಂಶಜ ಶ್ರೀ ವಿಶ್ವಕರ್ಮರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸುತ್ತಿದ್ದು, ಜಗತ್ ಸೃಷ್ಟಿಕರ್ತನ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕಿದೆ ಎಂದರು.
ಉಪವಿಭಾಗಾಧಿಕಾರಿ ಗೌರವಕುಮಾರ್‍ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ ಕಲೆಗೆ ಇಡೀ ಜಗತ್ತಿನಾದ್ಯಂತ ಬೆಲೆ ಇದೆ.ಅಂತಹ ಕಲೆಯನ್ನು ಮೈಗೂಡಿಸಿಕೊಂಡ ವಿಶ್ವಕರ್ಮ ಸಮುದಾಯ ತಮ್ಮ ಪ್ರಾಚೀನ ಹಿರಿಮೆಯೊಂದಿಗೆ ಆಧುನಿಕ ಶಿಕ್ಷಣ, ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕಿದೆ ಎಂದು ಕರೆಕೊಟ್ಟರು.
ಜಿಲ್ಲಾ ವಿಶ್ವಕರ್ಮ ಸೇವಾಸಮಿತಿ ಅಧ್ಯಕ್ಷ ಎಚ್.ಪಿ.ನಾಗರಾಜಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದಲೂ ಕಡಿಮೆ ಅನುದಾನದಿಂದ ಹೆಚ್ಚಿನ ಸೌಲಭ್ಯಗಳು ಸಿಗುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಜಾರಿಯಾಗುತ್ತಿರುವ ಪಿಎಂ ವಿಶ್ವಕರ್ಮ ಯೋಜನೆಯಡಿ ಹೆಚ್ಚಿನ ಅನುದಾನ ಕಲ್ಪಿಸಿದರೆ ಮಾತ್ರ ಅದರ ಪ್ರಯೋಜನ ಪಡೆಯಲು ಸಾಧ್ಯ ಎಂದು ಹೇಳಿ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ವಿಶ್ವಕರ್ಮ ಹೆಸರು, ಸಮುದಾಯ ಭವನಕ್ಕೆ ಅಗತ್ಯ ಜಾಗ ಮೀಸಲಿರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮುಖ್ಯ ಭಾಷಣ ಮಾಡಿ ಅಮರಶಿಲ್ಪಿ ಜಕಣಾಚಾರಿ ಅವರ ಜನ್ಮಸ್ಥಳಹೊಂದಿರುವ ತುಮಕೂರು ಜಿಲ್ಲೆ ಕಲೆಗೆ ಹೆಸರುವಾಸಿಯಾದ ಜಿಲ್ಲೆ. ಜಿಲ್ಲೆಯ ವಿದ್ವಾಂಸ ಟಿ.ವಿ.ಮುತ್ತಾಚಾರ್ಯರು ಸಮಾಜದ ಸಂಸ್ಕøತಿ, ಪರಂಪರೆಯನ್ನು ತಮ್ಮ ಅಮೂಲ್ಯ ಕೃತಿಯಲ್ಲಿ ದಾಖಲಿಸಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿಯವರು ಪಿಎಂ ವಿಶ್ವಕರ್ಮ ಯೋಜನೆಯನ್ನು ಇಂದಿನಿಂದ ಜಾರಿಗೊಳಿಸಿದ್ದು, 18 ಪ್ರಕಾರದ ಕುಶಲಕರ್ಮಿಗಳಿಗೆ ನೆರವಾಗುತ್ತಿರುವುದು ಮಹತ್ವದ ಸಂಗತಿ ಜೊತೆಗೆ ವಿಶ್ವಕರ್ಮ ಹೆಸರಿಗೆ ದೊರೆತ ಮನ್ನಣೆಯೆನಿಸಿದೆ ಎಂದರು.
ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ವಿ.ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಮಾತನಾಡಿ ವಿಶ್ವಕರ್ಮರು ಶ್ರಮಸಂಸ್ಕøತಿಯ ಸಮುದಾಯವಾಗಿದ್ದು, ವೇದ, ಉಪನಿಶತ್‍ನಲ್ಲೂ ವಿಶ್ವಕರ್ಮರ ಉಲ್ಲೇಖವಿದೆ. ಈಶನೇ ವಿಶ್ವಕರ್ಮನಾಗಿದ್ದು, ವಿಶ್ವೇಶ್ವರನಾಗಿ ಪೂಜಿಸಲಾಗುತ್ತಿದೆ. ಜಗತ್ ಸೃಷ್ಟಿಕರ್ತ ವಿಶ್ವಕರ್ಮ ಎಂದು ಬಣ್ಣಿಸಿದರು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ್, ಬಿ.ವಿ. ಗಂಗರಾಜಚಾರ್, ಟಿ.ಎ.ಸುಧೀರ್, ಡಮರುಗೇಶ್, ಹರೀಶ್ ಆಚಾರ್ಯ, ಶಶಿಧರ್, ಚೇತನ್, ಉಮೇಶ್, ಚಂದ್ರಾಚಾರ್, ಬಿ.ಪಿ.ರಾಜು, ವಿನಯ್‍ಕುಮಾರ್, ಲಕ್ಷ್ಮೀನಾರಾಯಣ್, ಅಶ್ವತ್ಥನಾರಾಯಣಚಾರ್, ಭಾಸ್ಕರ್ ಸೇರಿದಂತೆ ವಿಶ್ವಕರ್ಮ ಯಜ್ಞಮಹೋತ್ಸವ, ದೇವಾಲಯ ಸಮಿತಿ, ಚಿನ್ನಬೆಳ್ಳಿಕೆಲಸಗಾರರ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಪಾಲ್ಗೊಂಡರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
(ಫೋಟೋ: ಜಿಲ್ಲಾಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಡಿಸಿ ಕೆ.ಶ್ರೀನಿವಾಸ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎಸಿ ಗೌರವ್‍ಕುಮಾರ್‍ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಹೆಬ್ಬೂರು ನಾಗರಾಜಚಾರ್, ಡಾ.ಕೆ.ವಿ.ಕೃಷ್ಣಮೂರ್ತಿ, ಕನ್ನಡ ಸಂಸ್ಕøತಿ ಇಲಾಖೆಯ ರವಿಕುಮಾರ್, ಸುರೇಶ್ ಸೇರಿ ಸಮಾಜದ ಇತರ ಮುಖಂಡರಿದ್ದರು.