ತುಮಕೂರು: ಜಿಲ್ಲಾಡಳಿತದ ನಿಷೇಧಾಜ್ಞೆ, ಪೊಲೀಸ್ ಕಾವಲು ಏನೇ ಮಾಡಿದರೂ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧದ ಹೋರಾಟ ನಿಲ್ಲುವುದಿಲ್ಲ. ಹೋರಾಟಗಾರರು ನಿಷೇಧಾಜ್ಞೆಗೆ ಕಚ್ಚೆಯನ್ನೂ ಕಟ್ಟುವುದಿಲ್ಲ. ನಿಷೇಧಾಜ್ಞೆ ಮುರಿದು ಶನಿವಾರ ಹೋರಾಟ ಮಾಡುತ್ತೇವೆ ಎಂದು ಶಾಸಕ ಬಿ.ಸುರೇಶ್‍ಗೌಡರು ಹೇಳಿದರು.
ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಎಕ್ಸ್‍ಪ್ರೆಸ್ ಕೆನಾಲ್ ವಿರುದ್ಧದ ಹೋರಾಟ ಯಾರೊಬ್ಬರ ಸ್ವಾರ್ಥಕ್ಕಾಗಿ ಅಲ್ಲ, ಜಿಲ್ಲೆಯ ಜನರ, ರೈತರ ಹಿತಕಾಪಾಡಲು, ಅದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಜಿಲ್ಲಾಡಳಿತದ ನಿಷೇಧಾಜ್ಞೆ ಉಲ್ಲಂಘಿಸಿ ಹೋರಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಜನರಿಗೆ ಮಾರಕವಾಗುವ ಎಕ್ಸ್‍ಪ್ರೆಸ್ ಕೆನಾಲ್ ಬೇಡ ಎಂದು ಸದನದಲ್ಲೂ ಸರ್ಕಾರವನ್ನು ಒತ್ತಾಯಿಸಿದ್ದೆವು, ಆದರೆ ವಿರೋಧದ ನಡುವೆಯೂ ಡಿ.ಕೆ.ಶಿವಕುಮಾರ್ ಹಟಕ್ಕೆ ಬಿದ್ದು ಯೋಜನೆಯ ಕಾಮಗಾರಿ ಮಾಡಿಸಲು ಹೊರಟಿರುವುದು ಸರಿಯಲ್ಲ. ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸರ ಕಾವಲಿಟ್ಟು ಹೋರಾಟ ತಡೆಯುವ ಪ್ರಯತ್ನ ಮಾಡುವುದು ಸರಿಯಾದ ಕ್ರಮವಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು, ರೈತರು, ಸಂಘಟನೆಗಳವರು ಇದೂವರೆಗೂ ಶಾಂತಿಯುತ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದೇವೆ. ಶನಿವಾರದ ಹೋರಾಟದಲ್ಲಿ ಏನೇ ಅಚಾತುರ್ಯ ಸಂಭವಿಸಿದರೂ ಅದಕ್ಕೆ ಸರ್ಕಾರವೇ ಹೊಣೆ ಎಂದರು.
ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡುಹೋಗುವುದಕ್ಕೆ ಯಾರ ತಕರಾರು ಇಲ್ಲ, ಆ ತಾಲ್ಲೂಕಿಗೆ ಹಂಚಿಕೆಯಾಗಿರುವ 3 ಟಿಎಂಸಿ ನೀರು ಹರಿಯುತ್ತಿದೆ. ಆದರೆ ಮೂಲ ಯೋಜನೆಗೆ ಧಕ್ಕೆ ತಂದು ಅಡ್ಡಮಾರ್ಗದಲ್ಲಿ ನೀರು ತೆಗೆದುಕೊಂಡು ಹೋಗುವ ಕ್ರಮವನ್ನು ವಿರೋಧಿಸುತ್ತೇವೆ. ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಹೋರಾಟದಲ್ಲಿ ಶನಿವಾರ ಸಾವಿರಾರು ಜನ ಭಾಗವಹಿಸುತ್ತಾರೆ. ಜಿಲ್ಲೆಯ ಪೊಲೀಸರು, ಅಧಿಕಾರಿಗಳಿಗೆ ಈ ಜಿಲ್ಲೆಯ ಅನ್ನದ ಋಣವಿದ್ದರೆ ನಮ್ಮ ಹೋರಾಟಕ್ಕೆ ಸಹಕರಿಸಿ ಎಂದು ಸುರೇಶ್‍ಗೌಡ ಹೇಳಿದರು.
ಇಲ್ಲವೇ, ಪೊಲೀಸರನ್ನು ಬಳಿಸಿಕೊಂಡು ದಬ್ಬಾಳಿಕೆಯಿಂದ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ, ಜಿಲ್ಲಾಡಳಿತವೊ, ರೈತರೊ ಎಂದು ನೋಡೇಬಿಡೋಣ ಎಂದು ಸವಾಲು ಹಾಕಿದರು.
ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹಾಜರಿದ್ದರು.