ದಲಿತರು, ಆದಿವಾಸಿಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ತುಮಕೂರು- ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ ) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಅಶೋಕ ರಸ್ತೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿ ಮುಂಭಾಗ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ತೀವ್ರವಾಗಿ ಖಂಡಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಭಾರತದ ಇತಿಹಾಸದಲ್ಲಿ ಶತ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ ಮತ್ತು ಶೋಷಣೆಗಳಿಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯದಿಂದ ಮುಕ್ತವಾಗಿಲ್ಲ. ಬದಲಾಗಿ ಇಂದಿಗೂ ಸಹ ಅವುಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಗಾಗಿ ಗೆದ್ದಿದೆ ಎಂಬುದು ಸುಳ್ಳು. ಚುನಾವಣೆಗೆ 30 ದಿನಕ್ಕಿಂತ ಮುಂಚೆ ಸಾರ್ವಜನಿಕರ ತೆರಿಗೆ ಹಣವನ್ನು ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದಿದೆ ಎಂದು ದೂರಿದರು.

ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಿ ಬಿಜೆಪಿ ಗೆದ್ದಿದೆ ಎಂದು ಅವರು ಆರೋಪಿಸಿದ ಅವರು, ಅಭೂತಪೂರ್ವವಾಗಿ ಗೆದ್ದಿದೆ ಎಂದು ಬೀಗುತ್ತಿರುವ ಕೇಂದ್ರ ಸರ್ಕಾರದ ನಡೆ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಕಾನೂನಿನ ವಿರೋಧಿ ಎಂದರು.

ಕರ್ನಾಟಕದಲ್ಲೂ ಸಹ ರೈತರ ಅಪ್ಪಣೆಯಿಲ್ಲದೆ ದೌರ್ಜನ್ಯದಿಂದ ಭೂಸ್ವಾಧೀನ ಮಾಡಲಾಗುತ್ತಿದೆ. ಇದು ರೈತ ವಿರೋಧಿ ಎಂದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರೈತರ ಒಪ್ಪಿಗೆ ಪಡೆದು ಭೂ ಸ್ವಾಧೀನ ಮಾಡಬೇಕು. ಬಲವಂತದಿಂದ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ವಿರೋಧಿಸುತ್ತದೆ ಎಂದರು.

ನಮ್ಮ ನಾಡಿನ ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳಿಗೆ ಪ್ರಗತಿ, ವಿರೋಧಿಯಾದ ಶ್ರೇಣಿಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯ ಆಚರಣೆಗೆ ಕೋಮುವಾದಿ ಹಾಗೂ ಮತೀಯ ಮೂಲಭೂತವಾದಿ, ಫ್ಯಾಸಿಸ್ಟ್ ನೀತಿಗಳೇ ಮುಖ್ಯ ಕಾರಣ. ಇವುಗಳ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಜಾತಿ ವಿನಾಶ ಮಾಡುವ ಮತ್ತು ಸಮ ಸಮಾಜ ನಿರ್ಮಾಣದ ಮೂಲಕ ಎಲ್ಲಾ ದೌರ್ಜನ್ಯಗಳನ್ನು ತಡೆಯಲು ಮುಂದಾಗಬೇಕಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮಂಡಳಿ ಸದಸ್ಯರಾದ ಕಂಬೇಗೌಡ, ಜಿಲ್ಲಾ ಖಜಾಂಚಿ ಅಶ್ವಥನಾರಾಯಣ್, ಜಿಲ್ಲಾ ಕಾರ್ಯದರ್ಶಿ, ಮಂಡಳಿ ಸದಸ್ಯ ರಾಜೇಶ್, ಚಾಮುಂಡಿ ಡೆಕಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಾಫರ್, ಜಿಲ್ಲಾ ಮಂಡಳಿ ಸದಸ್ಯರಾದ ನಾಗರಾಜ್, ಹಾಗಲವಾಡಿ ನಾಗರಾಜ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *