ತುಮಕೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ಎದುರಿಸಿ, ಆಯ್ಕೆಯಾಗಿರುವ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿ ಇಂದು ಆಯ್ಕೆಯಾಗಿರುವ ಅಭ್ಯರ್ಥಿಗಳು ತುಮಕೂರು ವಿವಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕದ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2021ರಲ್ಲಿ ಅರ್ಜಿ ಕರೆದಿದ್ದು,2022ರ ಮಾರ್ಚ್ 12 ರಿಂದ 16ರವರೆಗೆ ನಿಪಕ್ಷಪಾತವಾದ ಪರೀಕ್ಷೆ ನಡೆದಿದ್ದು,2023ರ ಮಾರ್ಚ್ 07ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, 2023ರ ಜೂನ್ 12 ರಂದು ಅಂತಿಮ ಪರಿಷ್ಕøತ ಪಟ್ಟಿಯನ್ನು ಸರಕಾರಕ್ಕೆ ಪ್ರಾಧಿಕಾರ ನೀಡಿದೆ. ಆದರೆ ಕೆಲ ಅಭ್ಯರ್ಥಿಗಳು ಹೈಕೋರ್ಟು ಮೆಟ್ಟಿಲು ಹತ್ತಿದ್ದರ ಪರಿಣಾಮ ಸಿ.ಆಸುಇ/03/ಹೈ ಕ.ಕೋ/2019ಕ್ಕೆ ಕೆಲವು ವಿಷಯಗಳಿಗೆ ಮಾತ್ರ ಕೆ.ಎ.ಟಿ ತಡೆಯಾಜ್ಞೆ ನೀಡಿ ದಿನಾಂಕ 01-03-2023ರಂದು ಆದೇಶ ಹೊರಡಿಸಿದೆ.
ಸರಕಾರದ ಈ ಕ್ರಮದಿಂದ ಸಾವಿರಾರು ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗತ್ತಿದ್ದು,ಸರಕಾರ ಉದ್ಯೋಗಕ್ಕಾಗಿ ತಾವು ಮಾಡುತ್ತಿದ್ದ ಖಾಸಗಿ ಉದ್ಯೋಗವನ್ನು ಬಿಟ್ಟು, ಪರೀಕ್ಷೆ,ದಾಖಲಾತಿಗಳ ಪರಿಶೀಲನೆ ಎಂದು ಅಲೆದು ಸುಸ್ತಾಗಿರುವ ಅಭ್ಯರ್ಥಿಗಳಿಗೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರಕಾರ ಕೂಡಲೇ ಸದರಿ ವಿಚಾರದಲ್ಲಿ ಪರಿಶೀಲನೆ ನಡೆಸಿ,ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ,ಆದೇಶ ಪ್ರತಿ ನೀಡಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರನ್ನು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿರುವ ರಮೇಶ್,ಖಾಲಿದ್ ಖಾನಂ,ಸವಿತಾ, ಮಧುಸೂಧನ್, ಗಾಧಿಲಿಂಗಪ್ಪ,ಗೌತಮ್, ಸತೀಶ್, ಓಂಕಾರ್, ಚಂದನ್, ಅರುಣ್ ಕುಮಾರು ಅವರುಗಳು ಭಾಗವಹಿಸಿದ್ದರು.