ತುಮಕೂರು- ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಹಾಗೂ ನೇಮಕಾತಿಗೆ ವಯೋಮಿತಿ ಹೆಚ್ಚಿಸುವಂತೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಸಮಿತಿಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, ಶೀಘ್ರವಾಗಿ ಸರ್ಕಾರಿ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ವಯೋಮಿತಿ ಹೆಚ್ಚಿಸಬೇಕು. ಕೆಇಎ ಹಾಗೂ ಕೆಪಿಎಸ್ಸಿ ಶುಲ್ಕ ಕಡಿಮೆ ಮಾಡಬೇಕು ಎಂಬ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಮತ್ತು ಪೆÇಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್, ಪಿಎಸ್‍ಐ ಸೇರಿದಂತೆ ಹಲವು ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಿ ನೇಮಕಾತಿ ಆರಂಭಿಸುವಂತೆ ಸಮಿತಿಯ ಪ್ರತಿಭಟನಾನಿರತರು ಒತ್ತಾಯಿಸಿದರು.
ಹಲವು ವರ್ಷಗಳು ಕಳೆದರೂ ಈವರೆಗೆ ಯಾವುದೇ ನೇಮಕಾತಿ ಆಗದೇ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ನೇಮಕಾತಿಯಾಗದೇ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಏಳೆಂಟು ವರ್ಷಗಳಿಂದ ಎಫ್‍ಡಿಎ, ಎಸ್‍ಡಿಎ, ಪಶು ವೈದ್ಯರು, ಭೂ ಸರ್ವೇ ಸೇರಿದಂತೆ ಬಹುತೇಕ 40ಕ್ಕೂ ಅಧಿಕ ಇಲಾಖೆಗಳಲ್ಲಿ ಸುಮಾರು 2.80 ಲಕ್ಷ ಸಾವಿರ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡಿಲ್ಲ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿಯನ್ನು ಶೀಘ್ರವಾಗಿ ಆರಂಭಿಸುವ ಮೂಲಕ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಬಾರಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅನುವಾದದಲ್ಲಿ ಸಾಕಷ್ಟು ತಪ್ಪುಗಳಿದ್ದು, ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದರು. ಆದ್ದರಿಂದ ಈ ಪರೀಕ್ಷೆಯನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಅನೇಕ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಆಗದ ಕಾರಣ ಸಾವಿರಾರು ವಿದ್ಯಾರ್ಥಿಗಳು ವಯೋಮಿತಿ ಮೀರಿದೆ. ವಯೋಮಿತಿ ಕನಿಷ್ಠ 5 ವರ್ಷ ಸಡಿಲಿಕೆ ಮಾಡಿ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಪ್ರತಿಭಟನಾನಿರತರು ಸಚಿವ ಡಾ. ಜಿ. ಪರಮೇಶ್ವರ್ ರವರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸುನೀಲ್, ಅಪ್ಪು ಪಾಟೀಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.