ತುಮಕೂರು:ಕಳೆದ 1183 ದಿನಗಳಿಂದ ಕೆ.ಐ.ಎ.ಡಿ.ಬಿ.ಗೆ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ, ದೇವನಹಳ್ಳಿ ಬಳಿ ಶಾಂತಿಯುತ ಪ್ರತಿಭಟನೆ ನಡೆಸುತಿದ್ದ ರೈತರನ್ನು ಪೊಲೀಸ್ ಬಲ ಬಳಸಿ ಒಕ್ಕಲೆಬ್ಬಿಸಿರುವ ಪೊಲೀಸರ ಕ್ರಮ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ನೇತೃತ್ವದಲ್ಲಿ ವಿವಿಧ ರೈತ, ಪ್ರಗತಿಪರ, ದಲಿತಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ರೈತರು,ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರು, ಸರಕಾರ ಕೂಡಲೇ ರೈತರನ್ನು ಬಂಧಿಸಿರುವ ಡಿಸಿಪಿಯನ್ನು ಸೇವೆಯಿಂದ ಅಮಾನತ್ತು ಪಡಿಸಬೇಕು.ಶೇ90ರಷ್ಟು ವಿರೋಧವಿರುವ ಚನ್ನರಾಯಪಟ್ಟಣ ಭಾಗದ ಭೂಮಿಯನ್ನು ಕೆ.ಐ.ಎ.ಡಿ.ಬಿಗೆ ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು.ಬಂಧಿತ ರೈತರು, ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ ಹೋರಾಟ-ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು,
ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಿ ಹೋರಾಟಗಾರರನ್ನು ಬಂಧಿಸಿದ್ದಾರೆ. ಸರಕಾರದ ಈ ಕ್ರಮವನ್ನು ನಾವು ನಮ್ಮ ಸಂಘಟನೆಗಳಿಂದ ಖಂಡಿಸುತ್ತೇವೆ.ಸರಕಾರ ಮುಂದಿನ 24 ಗಂಟೆಯೊಳಗೆ ಭೂಸ್ವಾಧೀನ ನೊಟೀಷ್ ರದ್ದು ಪಡಿಸದಿದ್ದರೆ ಹೋರಾಟವನ್ನು ರಾಜ್ಯದಾದ್ಯಂತ ವಿಸ್ತರಿಸುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಸುತ್ತಮುತ್ತಲ ಸುಮಾರು 13 ಹಳ್ಳಿಗಳ 1777 ಎಕರೆ ಫಲವತ್ತಾದ ಭೂಮಿಯನ್ನು ಭೂಸ್ವಾದೀನ ಅಧಿನಿಯಮಕ್ಕೆ ವಿರುದ್ದವಾಗಿ ಭೂಸ್ವಾದೀನ ಮಾಡಲು ಮುಂದಾಗಿದೆ.ರೈತರ ಫಲವತ್ತಾದ ಭೂಮಿಯನ್ನು ಬಂಡವಾಳಗಾರಿಗೆ ನೀಡುವ ಸರಕಾರದ ಕ್ರಮವನ್ನು ವಿರೋಧಿಸಿ ಸುಮಾರು ಮೂರುವರೆ ವರ್ಷಗಳಿಂದ ರೈತರು ಪ್ರತಿಭಟನೆಟ ನಡೆಸುತ್ತಿದ್ದಾರೆ.ಅಂದು ವಿರೋಧಪಕ್ಷದಲ್ಲಿದ್ದ ಸಿದ್ದರಾಮಯ್ಯ, ಈ ಭಾಗದ ಜಮೀನು ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರಿಗೆ ಮಾತು ಕೊಟ್ಟವರು, ಈಗ ತಾವೇ ಮುಖ್ಯಮಂತ್ರಿಯಾಗಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿಗಳ ಮೇಲಿದ್ದ ರೈತರ ಭರವಸೆಗೆ ಕೊಡಲಿ ಪೆಟ್ಟು ಬಿದ್ದಿದೆ.ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ರೈತರಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕ ಕೆ.ದೊರೆರಾಜು ಮಾತನಾಡಿ,ರೈತರ ಮೇಲೆ ದಬ್ಬಾಳಿಕೆ ನಡೆಸಿರುವ ಸರಕಾರದ ಕ್ರಮ ಖಂಡನೀಯ.ಭೂಮಿ ಅಂದರೆ ಅದು ಕೇವಲ ಮಣ್ಣಲ್ಲ. ಜನರ ಬದುಕು.ತಮ್ಮ ಬದುಕಿಗಾಗಿ ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸುತಿದ್ದ ರೈತರ ಮೇಲೆ ಪೊಲೀಸ್ ದರ್ಪ ತೋರುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರಕಾರ ತಮ್ಮ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿದೆ ಎಂದರು.
ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿ,ಸರಕಾರ ಹೇಗಾದರೂ ಮಾಡಿ,ಭೂಮಿ ಯನ್ನು ಪಡೆದೇ ತೀರುತ್ತೇವೆ ಎಂಬಂತೆ ಪುಂಡಾಟಿಕೆ ನಡೆಸಿರುವುದು ಸರಿಯಲ್ಲ.ಸಿದ್ದರಾಮಯ್ಯ ನವರ ಸರಕಾರದಲ್ಲಿ ಸಾಮಾಜಿಕ ನ್ಯಾಯವೆಂಬುದು ಮರೀಚಿಕೆಯಾಗಿದೆ.ಅವರು ತೊಟ್ಟಿರುವುದು ಸಮಾಜವಾದಿಯ ಮುಖವಾಡವಷ್ಟೇ ಎಂಬುದು ಸಾಭೀತಾಗಿದೆ.ಅಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು.ಅದೇ ದಿನ ಸಿದ್ದರಾಮಯ್ಯ ಸರಕಾರ ರೈತರ ಭೂಮಿ ಕಸಿಯಲು ತುರ್ತು ಪರಿಸ್ಥಿತಿ ಹೇರಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನನ್ನು ಉದ್ದೇಶಿಸಿ, ರೈತ ಸಂಘದ ಅಜ್ಜಪ್ಪ,ದಸಂಸದ ಪಿ.ಎನ್.ರಾಜಯ್ಯ, ಎಐಕೆಕೆಎಸ್‍ನ ಎಸ್.ಎನ್.ಸ್ವಾಮಿ, ಪ್ರಾಂತರೈತರ ಸಂಘದ ಬಿ.ಉಮೇಶ್, ಸುಬ್ಬಣ್ಣ,ರಾಮಕೃಷ್ಣಪ್ಪ, ಲಕ್ಷ್ಮಣಗೌಡ ಮಾತನಾಡಿದರು.ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತರ ಸಂಘದ ಗುಬ್ಬಿ ತಾಲೂಕು ಅಧ್ಯಕ್ಷ ಲೋಕೇಶ್, ದೊಡ್ಡ ನಂಜಪ್ಪ, ಗೋರಮಾರದ ಹಳ್ಳಿ ಮಂಜುನಾಥ್,ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕ ನಾಗರತ್ನಮ್ಮ ಸೇರಿದಂತೆ,ಮಹಿಳಾ,ವಿದ್ಯಾರ್ಥಿ ಸಂಘಟನೆ, ಕೂಲಿ ಕಾರ್ಮಿಕರ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು.