ಸುಧಾರಿಸಿದ ದ್ವಿತೀಯ ಪಿಯುಸಿ ಫಲಿತಾಂಶ, ಲಕ್ಷ್ಮಿಗೆ 4ನೇ ರ್ಯಾಂಕ್, ಜಿಲ್ಲೆಗೆ ಪ್ರಥಮ

ತುಮಕೂರು : ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡು ಬಂದಿದ್ದು, ಕಳೆದ ವರ್ಷ 24ನೇ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ ಈ ವರ್ಷ 18ನೇ ಸ್ಥಾನಕ್ಕೇರಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ: ಬಾಲಗುರುಮೂರ್ತಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಾಂಶುಪಾಲರು, ಉಪನ್ಯಾಸಕರ ಶ್ರಮ ಹಾಗು ಇಲಾಖೆಯ ಕಾರ್ಯವೈಖರಿಯಿಂದ ಈ ವರ್ಷ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು. ಇಂಗ್ಲಿಷ್ ಭಾಷೆಯ ಕ್ಲಿಷ್ಟತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಈ ಶೈಕ್ಷಣಿಕ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಮಾರು 6 ಶನಿವಾರಗಳಂದು ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರಿಂದ ನೋಡಲ್ ಕೇಂದ್ರಗಳಲ್ಲಿ ವಿಶೇಷ ತರಗತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಒಟ್ಟಾರೆ ಕಲಾ ವಿಭಾಗದಲ್ಲಿ 4318 ವಿದ್ಯಾರ್ಥಿಗಳಿಗೆ 2476, ವಿಜ್ಞಾನ ವಿಭಾಗದಲ್ಲಿ 10051 ವಿದ್ಯಾರ್ಥಿಗಳಿಗೆ 7784 ಹಾಗು ವಾಣಿಜ್ಯ ವಿಭಾಗದಲ್ಲಿ 8587 ವಿದ್ಯಾರ್ಥಿಗಳಿಗೆ 6274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ 22,956 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಅದರಲ್ಲಿ 16,534 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರು
ಕಲಾ ವಿಭಾಗದಲ್ಲಿ ತುಮಕೂರು ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅದಿತಿ ಎಚ್. 584 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ, ತಿಪಟೂರು ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಗಣೇಶ್ 580 ಅಂಕಗಳು ದ್ವಿತೀಯ ಸ್ಥಾನ ಹಾಗೂ ಚೇತನ್ ಬಿ.ಆರ್. 579 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿರುವ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಶ್ರೀ ಲಕ್ಷ್ಮಿ ಆರ್. 596 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಎಸ್.ಎನ್. ಲಕ್ಷ್ಮಿ 593 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಎಚ್. ಎನ್. ಭುವನ್ ಹಾಗು ಜಮುನಾ ಎಸ್.ಜೆ. 592 ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಚಿಕ್ಕನಾಯಕನಹಳ್ಳಿ ವಿದ್ಯಾ ವಾರಿಧಿ ಪದವಿ ಪೂರ್ವ ಕಾಲೇಜಿನ ಆದಿತ್ಯ ಎಚ್.ಎಸ್. 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದು, ಶಾರದಂಬ ಪದವಿ ಪೂರ್ವ ಕಾಲೇಜಿನ ಕೀರ್ತನಾ ಎಂ.ಎನ್. ಹಾಗು ವಿಧ್ಯಾನಿಧಿ ಕಾಲೇಜಿನ ಶಿವಾನಿ ಎಸ್ ರೈ 593 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ತಿಪಟೂರಿನ ಎಸ್.ಎಸ್. ಪದವಿ ಪೂರ್ವ ಕಾಲೇಜಿನ ಹರ್‍ಪ್ರೀತ್ ಎ. ಹಾಗು ವಿಧ್ಯಾನಿಧಿ ಕಾಲೇಜಿನ ನಿತೀಶ್ ಕೆ.ಪಿ. 591 ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರಲು ಜಿಲ್ಲಾ ಉಪನಿರ್ದೇಶಕರ ಶಿಸ್ತುಬದ್ಧ ಆಡಳಿತವೇ ಕಾರಣ ಎಂದು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

ಉಪನಿರ್ದೇಶಕರ ಕಾರ್ಯಶೀಲತೆ, ದಕ್ಷ ಆಡಳಿತ ಮತ್ತು ಶಿಸ್ತುಬದ್ಧ ಶೈಕ್ಷಣಿಕ ಚಟುವಟಿಕೆ ಹಾಗು ಜಿಲ್ಲೆಯ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಶ್ರಮದಿಂದ ತುಮಕೂರು ಜಿಲ್ಲೆಗೆ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್. ಮಹಾಲಿಂಗೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *