ತುಮಕೂರು : ಪ್ರಸ್ತುತ ಸರ್ಕಾರದ ವತಿಯಿಂದ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಯನ್ನು ಪ್ರಾರಂಭಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ರೈತರು ಬೆಳೆ ಸಮೀಕ್ಷೆಯಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್‍ನಲ್ಲಿ ಯಾವ ಬೆಳೆ ನಮೂದಿಸಲಾಗಿದೆ ಎಂದು ಬೆಳೆ ದರ್ಶಕ ಮೊಬೈಲ್ ಆಪ್ ಬಳಸಿ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಜಮೀನಿನಲ್ಲಿ ತೆಂಗಿನ ಬೆಳೆ ಬೆಳೆದಿದ್ದು, ಒಂದು ವೇಳೆ ಬೆಳೆ ಸಮೀಕ್ಷೆಯಲ್ಲಿ ತೆಂಗಿನ ಬೆಳೆ ನಮೂದಾಗದೇ ಇದ್ದಲ್ಲಿ, ಅಂತಹ ರೈತರು ವಿವರಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಗಮನಕ್ಕೆ ತರಲು ಕೋರಿದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಈಗಾಗಲೇ ನಿಗದಿತ ವೇಳಾಪಟ್ಟಿಯಂತೆ ಮುಕ್ತಾಯಗೊಂಡಿರುತ್ತದೆ. ರೈತರಿಗೆ ಆಕ್ಷೇಪಣೆ ಸಲ್ಲಿಸಲೂ ಸಹ ಅವಕಾಶ ಮಾಡಿಕೊಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರತಿ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುತ್ತದೆ. ಬೆಳೆ ಸಮೀಕ್ಷೆ ಮಾಹಿತಿಯನ್ನು 2018 ರಿಂದಲೂ ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಬಳಸಲಾಗುತ್ತಿದ್ದು, ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಯಲ್ಲೂ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತುಮಕೂರು ದೂ. 9448253277, ಗುಬ್ಬಿ ದೂ. 9535781963, ಶಿರಾ ದೂ. 9844042356, ಕುಣಿಗಲ್ ದೂ. 9342959690, ತಿಪಟೂರು ದೂ. 9845014293, ಚಿಕ್ಕನಾಯಕನಹಳ್ಳಿ ದೂ. 9686056705, ಮಧುಗಿರಿ ದೂ. 9916378199, ತುರುವೇಕೆರೆ ದೂ. 9448416334, ಕೊರಟಗೆರೆ ದೂ. 9448001644, ಪಾವಗಡ ತಾಲ್ಲೂಕು ದೂ. 9448448970 ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.