ತುಮಕೂರು : ನನ್ನ ಬಾಲ್ಯದಲ್ಲಿ ನನಗೆ ಇಷ್ಟವಾದ ಆಹಾರಗಳಲ್ಲಿ ರಾಗಿಯಿಂದ ಮಾಡುತ್ತಿದ್ದ ರಾಗಿಕೀಲ್ಸ ಮತ್ತು ಹಸುವಿನ ಗಿಣ್ಣು ಹಾಲಿನಿಂದ ಮಾಡುತ್ತಿದ್ದ ಗಿಣ್ಣದ ಕೇಕ್.
ನನಗೆ ರಾಗಿ ಕೀಲ್ಸವೆಂದರೆ ತುಂಬಾ ಪ್ರೀತಿಯ ಆಹಾರ ಅದನ್ನು ತಿನ್ನುತ್ತಿದ್ದರೆ ಯಾವುದೂ ಬೇಕಿರಲಿಲ್ಲ, ಇದರ ಮುಂದೆ ಈಗ ಬೇಕರಿಗಳಲ್ಲಿ ಸಿಗುವ ಕೇಕ್‍ಗಳನ್ನು ನೀವಳಿಸಿ ಬಿಸಾಕಬೇಕು.
ಈ ರಾಗಿ ಕೀಲ್ಸವನ್ನು ನಮ್ಮೂರು ಪಂಚನಹಳ್ಳಿಯ ಕಡೂರು ತಾಲ್ಲೂಕು ಮತ್ತು ಅರಸೀಕೆರೆ ತಾಲ್ಲೂಕುಗಳಲ್ಲಿ ಬೇಸಿಗೆ ಪ್ರಾರಂಭವಾಗುವ ಮುನ್ನ ರಾಗಿಯ ಕಣ ಮುಗಿದು ಹೊಸ ರಾಗಿ ಮನೆಗೆ ಬಂದಾಗ ಈ ಕೀಲ್ಸವನ್ನು ಮಾಡುತ್ತಿದ್ದರು, ಈ ಕೀಲ್ಸ ಮಾಡಲು ಒಂದಿಡಿ ದಿನ ಅದರದೇ ಕೆಲಸ ಹಿಡಿಯುತ್ತಿತ್ತು. ಮೊದಲಿಗೆ ಹೊಸದಾಗಿ ತಂದ ರಾಗಿಯನ್ನು ಕ್ಲೀನ್ ಮಾಡಿ ನೆನಸಬೇಕು, ಆನಂತರ ಒಳಕಲ್ಲಿನಲ್ಲಿಯೇ ಹದವಾಗಿ ಹಾಲು ಬರುವಂತೆ ನೆನದ ರಾಗಿಯನ್ನು ರುಬ್ಬಬೇಕು, ಆನಂತರ ಆ ರಾಗಿ ಹಾಲಿಗೆ ಬೆಲ್ಲ, ಏಲಕ್ಕಿ, ಒಣಶುಂಟಿ, ತೆಂಗಿನ ಕಾಯಿ ಹಾಲು ಹಾಕಬೇಕು.
ತದ ನಂತರ ಈ ರಾಗಿ ಹಾಲನ್ನು ಚೆನ್ನಾಗಿ ಕಲಕಿ ಹದವಾದ ಉರಿಯಲ್ಲಿ ದೊಡ್ಡ, ಹಗಲವಾದ ಪಾತ್ರೆಯಲ್ಲಿ ಅಂಟುಬರುವ ತನಕ ಬೇಯಿಸಬೇಕು, ಆ ನಂತರ ಇದನ್ನು ರಾತ್ರಿ ದೊಡ್ಡ ದೊಡ್ಡ ತಟ್ಟೆಗಳಿಗೆ ಹಾಕಿ ಬಿಟ್ಟರೆ ಬೆಳಿಗ್ಗೆ ವೇಳೆಗೆ ರಾಗಿ ಕೀಲ್ಸ ರೆಡಿ.
ಈ ಕೀಲ್ಸವನ್ನು ತಟ್ಟೆಗಳಿಂದ ಕೇಕ್ ತರಹ ಕತ್ತರಿಸಿ ಕಾಯಿ ಹಾಲಿನೊಂದಿಗೆ ತಿನ್ನುತ್ತಿದ್ದರೆ ಸ್ವರ್ಗಕ್ಕೆ ಒಂದೇಗೇಣು, ಇಂತಹ ರಾಗಿ ಕೀಲ್ಸವನ್ನು ನಮ್ಮಮ್ಮ ತುಂಬಾ ಚೆನ್ನಾಗಿ ಮಾಡುತ್ತಿದ್ದರು, ಅವರಿಗೆ ವಯಸ್ಸಾದ ಮೇಲೆ ಈ ರಾಗಿ ಕೀಲ್ಸ ಎಂಬುದನ್ನು ಸುಮ್ಮನೆ ನೆನಸಿಕೊಳ್ಳುವುದಷ್ಟೇ ಆಗಿತ್ತು.
ಮೊನ್ನೆ ನವೆಂಬರ್ 29ರಂದು ಚಿಕ್ಕಬಳ್ಳಾಪುರದ ಗೆಳೆಯ ಡಾ||ರವಿ ಕೋಡಿಹಳ್ಳಿಯವರ ತಂದೆಯವರನ್ನು ನೋಡಲು ಹೋದಾಗ ತುಮಕೂರಿನಲ್ಲಿ ಪ್ರಜಾವಾಣಿ ವರದಿಗಾರರಗಿದ್ದ ಪ್ರಶಾಂತ್ ಡಿ.ಕುರ್ಕೆ ಅವರು ಈಗ ಚಿಕ್ಕಬಳ್ಳಾಪುರದ ಪ್ರಜಾವಾಣಿ ವರದಿಗಾರರಾಗಿದ್ದು, ನಾನು ಬರುವ ವಿಷಯ ತಿಳಿದು ಮನೆಗೆ ಬಂದು ಹೋಗಬೇಕೆಂದು ಪಟ್ಟು ಹಿಡಿದರು.
ಅವರ ಮನೆಗೆ ಹೋದಾಗ ತಟ್ಟೆಯಲ್ಲಿ ಕೇಕ್ ತರುತ್ತಿದ್ದಾರೆ ಎಂದು ತಿಳಿದುಕೊಂಡು ಬೇಡ ಎಂದೆ, ಇಲ್ಲಾ ಕೀಲ್ಸ ತಿನ್ನಿ ಎಂದಾಗ ಆಸೆ ಎರಡು ಪಟ್ಟಾಯಿತು, ತಟ್ಟೆಯಲ್ಲಿದ್ದ ಎರಡು ಪೀಸ್ ಕೀಲ್ಸ ತಿಂದರೂ ತೃಪ್ತಿಯಾಗಲಿಲ್ಲ, ಇನ್ನೂ ಕೇಳುವ ಆಸೆಯಿದ್ದರೂ ಕೇಳಲಿಲ್ಲ ಯಾಕೆಂದರೆ ಅವರು ಕೀಲ್ಸವನ್ನು ಎಷ್ಟು ಮಾಡಿದ್ದರೋ ಗೊತ್ತಿಲ್ಲ, ತುಮಕೂರಿಗೆ ಬಂದು ಪ್ರಶಾಂತ ಅವರಿಗೆ ಪೋನ್ ಮಾಡಿ ಕೀಲ್ಸ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದಾಗ ಅಯ್ಯೋ ಇನ್ನೂ ಒಂದು ತಟ್ಟೆ ಇತ್ತು ಕೇಳಿ ಹಾಕಿಸಿಕೊಳ್ಳುವುದಲ್ಲವೇ ಗುರುಗಳೇ ಅಂದಾಗ ಅವರ ಪ್ರೀತಿಗೆ ಅಭಾರಿಯಾದೆ.
ಈಗ ಕೀಲ್ಸ ತಿನ್ನಬೇಕೆಂದರೂ ಅಮ್ಮನನ್ನೇ ಆಶ್ರಯಿಸಬೇಕು, ಅಮ್ಮನಿಗೆ ವಯಸ್ಸಾಗಿದೆ, ಕೀಲ್ಸವೂ ಮರೆಯಾಗಿದೆ, ಒಳಕಲ್ಲು ಎಂದೋ ಮರೆಯಾಗಿ ಮಿಕ್ಸಿ, ಗ್ರೈಂಡರ್ ಬಂದು ಕುಳಿತಿವೆ, ಹೆಂಡತಿಗೆ ಹೇಳಿದರೆ ಅದೆಂತೆದ್ರಿ ಕೀಲ್ಸ ಬೇಕಾದಷ್ಟು ಕೇಕ್‍ಗಳು ಬೇಕರಿಗಳಲ್ಲಿ ಸಿಗುವಾಗ ಕೀಲ್ಸಬೇಕಂತೆ, ಅದೆಲ್ಲಾ ಮಾಡೋಕೆ ಬರೋಲ್ಲ ಎಂದಾಗ ಅಮ್ಮ ಅಮ್ಮನೇ, ಕೀಲ್ಸ ಕೀಲ್ಸನೇ ಯಾರಾದರೂ ಕೀಲ್ಸ ಮಾಡಿದರೆ ಮರೆಯದೇ ನನ್ನನ್ನು ಕರೆಯಿರಪ್ಪ.
ನಮ್ಮಮ್ಮ ಚೆನ್ನಾಗಿದ್ದಾಗ ನಮ್ಮ ಅಣ್ಣನವರು ಒಮ್ಮೆ ಬೆಳದಿಂಗಳ ಊಟಕ್ಕೆ ಕೀಲ್ಸ ಮಾಡಿಸಿದ್ದರು, ನಮ್ಮ ಮನೆಯಲ್ಲಿ ಕೀಲ್ಸ ಮಾಡಿದರೆ ನಮ್ಮ ಅಕ್ಕಪಕ್ಕದ ಮನೆಯವರಿಗೆಲ್ಲಾ ನೀಡುತ್ತಿದ್ದೆವು, ಅವರು ಬಹಳ ಆನಂದದಿಂದ ಕೀಲ್ಸ ಹೆಂಗ್ರಿ ಮಾಡೋದು ಅನ್ನುತ್ತಿದ್ದರು. ಈಗ ರಾಗಿ ಕೀಲ್ಸ ನೆನಪು ಮಾತ್ರ. ಪ್ರಶಾಂತ್.ಡಿ.ಕುರ್ಕೆ ಕೀಲ್ಸ ಕೊಟ್ಟು ಇದನ್ನು ಬರೆಯಲು ಪ್ರೇರಿಪಿಸಿದ್ದಕ್ಕೆ ಧನ್ಯವಾದಗಳು, ಇಲ್ಲದಿದ್ದರೆ ಕೀಲ್ಸ ಹಾಗೆ ಮರೆತು ಹೋಗುತ್ತಿತ್ತು.
-ವೆಂಕಟಾಚಲ.ಹೆಚ್.ವಿ.