ತುಮಕೂರು : ಸಂಜೆ 4 ಗಂಟೆಗೆ ತುಮಕೂರಿನಲ್ಲಿ ಜೋರು ಮಳೆ ಸುರಿದಿದ್ದರಿಂದ ರಸ್ತೆಗಳೆಲ್ಲಾ ಹಳ್ಳಗಳಾಗಿದ್ದರಿಂದ ಶಾಲಾ ಮಕ್ಕಳು, ವಾಹನ ಸವಾರರು ತೆರಳಲು ಪರದಾಡುವಂತಹ ಸ್ಥಿತಿ ಉಂಟಾಯಿತು.
ಶುಕ್ರವಾರ ಸಂಜೆ 4ಗಂಟೆಗೆ ಪ್ರಾರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಸುರಿಯಿತು. ಸಂಜೆ 4ಗಂಟೆಗೆ ಶಾಲಾ-ಕಾಲೇಜಿಗಳು ಬಿಡುವ ವೇಳೆಯಾಗಿದ್ದು, ಸೈಕಲ್ ಮತ್ತು ನಡೆದು ಹೋಗುವ ಮಕ್ಕಳು ಮಳೆಗೆ ಸಿಕ್ಕಿಕೊಂಡವು, ಮಳೆ ಬಿಟ್ಟ ನಂತರವೂ ರಸ್ತೆಗಳಲ್ಲಿ ನೀರು ಹಳ್ಳದಂತೆ ಹರಿಯುತ್ತಿದ್ದರಿಂದ ಮಕ್ಕಳು, ವಾಹನ ಸವಾರರು ತುಂಬಾ ಪರದಾಡುವಂತಾಯಿತು.

ಕೋತಿ ತೋಪಿನ ಸರ್ವೋದಯ ಕಾಲೇಜು ಮುಂಭಾಗದಲ್ಲಿ ನೀರು ಹಳ್ಳದಂತೆ ಹರಿಯುತ್ತಿದ್ದರಿಂದ ಶಾಲಾ ಮಕ್ಕಳು ತೆರಳಲು ತುಂಬಾ ತೊಂದರೆ ಪಟ್ಟಿದಲ್ಲದೆ, ಸೈಕಲ್‍ನಲ್ಲಿ ತೆರಳುತ್ತಿದ್ದ ಮಕ್ಕಳು ಬ್ಯಾಗ್ ಹೊತ್ತುಕೊಂಡು ಮತ್ತು ಸೈಕಲ್ ಎರಡನ್ನೂ ತಳ್ಳಿಕೊಂಡು ಹೋಗಲು ಪರದಾಡುವಂತಾಯಿತಲ್ಲದೆ, ದೊಡ್ಡ ವಾಹನಗಳು ಚಲಿಸಿದಾಗ ಮಕ್ಕಳ ಬಟ್ಟೆಗಳಿಗೆಲ್ಲಾ ನೀರು ಸಿಡಿದು ನೆನೆದು ಮುದ್ದೆಯಾದವು, ಇದರಿಂದ ಮಕ್ಕಳು ಮತ್ತಷ್ಟು ಪೇಚಿಗೆ ಸಿಲುಕಿಕೊಂಡವು.

ಕೋತಿ ತೋಪಿನಿಂದ ಸರ್ವೋದಯ ಕಾಲೇಜು ತನಕ ಮಳೆ ಬಂದಾಗ ದೊಡ್ಡ ಹಳ್ಳದಂತೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ ಅದಕ್ಕೊಂದು ಪರಿಹಾರವನ್ನು ಇದೂವರೆಗೂ ಮಾಹಾನಗರ ಪಾಲಿಕೆ ಮಾಡಿಲ್ಲ, ರಸ್ತೆಯಲ್ಲಿ ಬಿದ್ದ ನೀರು ಸರಾಗವಾಗಿ ಚರಂಡಿಗೆ ಹೋಗುವ ವ್ಯವಸ್ಥೆ ಮಾಡಿಲ್ಲದಿರುವುದೇ ಈ ರೀತಿ ರಸ್ತೆಯಲ್ಲಿ ನೀರು ಹರಿಯಲು ಕಾರಣವಾಗಿದೆ.

ಬಿ.ಹೆಚ್.ರಸ್ತೆಯಲ್ಲೂ ಹಳ್ಳದಂತೆ ನೀರು ಹರಿದಿದ್ದು, ವಾಹನಗಳು ಚಲಿಸಲು ಪರದಾಡುವಂತಾಯಿತು.