ಎಕ್ಸ್‍ಪ್ರೆಸ್ ಕೆನಾಲ್ ಅನಾಹುತಗಳ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿ-ಚುನಾಯಿತ ಪ್ರತಿನಿಧಿಗಳಿಗೆ ಒತ್ತಾಯ

ತುಮಕೂರು: ಜಿಲ್ಲೆಯ ಜನರಿಗೆ ಅನ್ಯಾಯವಾಗಲಿರುವ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕುರಿತು ಚರ್ಚೆ ನಡೆಸಲು ಈ ತಿಂಗಳ 4ರಂದು ಸರ್ಕಾರ ಕರೆದಿರುವ ಸಭೆಯಲ್ಲಿ ಭಾಗವಹಿಸುವ ಈ ಭಾಗದ ಚುನಾಯಿತ ಪ್ರತಿನಿಧಿಗಳು ಈ ಯೋಜನೆಯಿಂದ ಜಿಲ್ಲೆಯ ಜನರಿಗೆ ಆಗುವ ಅನ್ಯಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಹಾಗೂ ಲಿಂಕ್ ಕೆನಾಲ್ ಯೋಜನೆಯನ್ನು ರದ್ದುಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸಭೆ ನಿರ್ಣಯ ಕೈಗೊಂಡಿತು.

ಇದೇ 4ರಂದು ಸರ್ಕಾರ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಆ ಸಂಬಂಧ ಬುಧವಾರ ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದ ಸಮಿತಿಯ ಹೋರಾಟಗಾರರು, ಜಿಲ್ಲೆಯ ಪಾಲಿನ ಹೆಮಾವತಿ ನೀರಿಗೆ ಅನ್ಯಾಯವಾಗಲಿರುವ ಲಿಂಕ್ ಕೆನಾಲ್ ಯೋಜನೆ ಕೈಬಿಡುವಂತೆ ಸರ್ಕಾರದ ಮನವೊಲಿಸಬೇಕು ಎಂದು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಿಗೆ ಒತ್ತಾಯ ಮಾಡಿದರು.

ಸಭೆಯ ಅಧ್ಯಕ್ಷತೆವಹಿಸಿದ್ದ ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಲಿಂಕ್ ಕೆನಾಲ್ ವಿರುದ್ಧ ನಡೆದ ದೊಡ್ಡ ಹೋರಾಟದ ಫಲವಾಗಿ ಸರ್ಕಾರ ಈ ತಿಂಗಳ 4ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚರ್ಚೆ ನಡೆಸಲು ಇಲ್ಲಿನ ಜನಪ್ರತಿನಿಧಿಗಳ ಸಭೆ ಕರೆದಿದೆ. ಈ ಯೋಜನೆಯ ಮೂಲ ಕಾರಣಕರ್ತರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಭೆಯಲ್ಲಿ ಜಿಲ್ಲೆಯ ಪಾಲಿಗೆ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಸಭೆ ಕರೆದು ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಯ ಜನರಿಗೆ ಆಗುವ ಅನಾಹುತಗಳ ಬಗ್ಗೆ ತಿಳಿದು ಯೋಜನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ನಮ್ಮ ಹೋರಾಟದ ಬಗ್ಗೆ ಅಲ್ಲಿನ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ರೈತರು-ರೈತರ ನಡುವೆ ಎತ್ತಿಕಟ್ಟುವ ರಾಜಕಾರಣ ಮಾಡುತ್ತಿದ್ದಾರೆ. ಕುಣಿಗಲ್‍ಗೆ ಹೇಮಾವತಿ ನೀರು ಕೊಡಬಾರದು ಎಂದು ನಾವು ಯಾವಾಗಲೂ ಒತ್ತಾಯ ಮಾಡಿಲ್ಲ. ಆದರೆ ಲಿಂಕ್ ಕೆನಾಲ್ ಮೂಲಕ ಬೇಡ, ಹೇಮಾವತಿ ನಾಲೆಯನ್ನು ಅಗಲೀಕರಣ ಮಾಡಿ ನಾಲೆ ಮೂಲಕ ನೀರು ತೆಗೆದುಕೊಂಡುಹೋಗಲು ನಮ್ಮದು ಯಾವ ತಕರಾರೂ ಇಲ್ಲ ಎಂದು ಎ.ಗೋವಿಂದರಾಜು ಸ್ಪಷ್ಟಪಡಿಸಿದರು.

4ರಂದು ನಡೆಯುವ ಸಭೆಯ ಮೊದಲೇ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಇಲ್ಲಿನ ರೈತರು, ಸಾರ್ವಜನಿಕ ಸಂಘಸಂಸ್ಥೆಗಳ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕಾಗಿತ್ತು. ಆದರೆ ಆಡಳಿತ ಪಕ್ಷದ ಸಚಿವರಾಗಲಿ, ಶಾಸಕರಾಗಲಿ ಲಿಂಕ್ ಕೆನಾಲ್‍ನಿಂದ ಆಗುವ ಅನಾಹುತಗಳ ಬಗ್ಗೆ ಧ್ವನಿ ಮಾಡಿಲ್ಲ. ಆದರೆ, 4ರಂದು ನಡೆಯುವ ಸಭೆಯಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮೌನ ಮುರಿದು ಆಗಬಹುದಾದ ಆನ್ಯಾಯಗಳ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡದಿದ್ದರೆ ಅಪಾಯವಾಗುವುದು ಖಂಡಿತ. ಆದರೆ ಸರ್ಕಾರವು ಜಿಲ್ಲೆಯ ಜನರ ನೀರಿನ ವಿಚಾರದಲ್ಲಿ ಅನ್ಯಾಯವಾಗುವಂತಹ ತೀರ್ಮಾನಗಳನ್ನು ಕೈಗೊಂಡರೆ ಹೋರಾಟವನ್ನು ತೀವ್ರವಾಗಿ ಮುಂದುವರೆಸುವುದಂತೂ ಖಚಿತ ಎಂದು ಘೋಷಿಸಿದರು.

ಮತ್ತೊಬ್ಬ ಮುಖಂಡ ಗುಬ್ಬಿಯ ದಿಲೀಪ್‍ಕುಮಾರ್ ಮಾತನಾಡಿ, ಜಿಲ್ಲೆಯ ಪಾಲಿಗೆ ಮರಣಶಾಸನ ಆಗಿರುವ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ರೂವಾರಿ, ಈಗಿನ ಅಚಾತುರ್ಯಕ್ಕೆ ಕಾರಣವಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸಭೆ ಏರ್ಪಡಿಸಿರುವುದು ದುರಾದೃಷ್ಟಕರ. ಈ ಸಭೆಯಲ್ಲಿ ನಮಗೆ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸವಿಲ್ಲ. ಆದರೆ, ಸಭೆಯಲ್ಲಿ ಭಾಗವಹಿಸುವ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಕೆನಾಲ್ ಯೋಜನೆಯಿಂದ ಆಗುವ ಅನ್ಯಾಯಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಯೋಜನೆ ಮುಂದುವರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಕುಣಿಗಲ್‍ಗೆ ಹಾಲಿ ಇರುವ ಹೇಮಾವತಿ ನಾಲೆಯಲ್ಲಿ ಗುರುತ್ವಾಕರ್ಷಣೆ ಮೂಲಕ ಕುಣಿಗಲ್‍ಗೆ ನೀರು ಹರಿಸಲಿ, ಬೇಕಾದರೆ ನಾಲೆಯನ್ನು ಮತ್ತಷ್ಟು ಅಗಲ ಮಾಡಲಿ. ಆದರೆ, ಹತ್ತಾರು ಅಡಿ ಆಳದ ನಾಲೆಯಲ್ಲಿ ಪೈಪ್‍ಲೈನ್ ಮೂಲಕ ನೀರು ತೆಗೆದುಕೊಂಡುಹೋಗಲು ಬಿಡುವುದಿಲ್ಲ. ಈ ಬಗ್ಗೆ ಜಿಲ್ಲೆಯ ಸಚಿವರು, ಶಾಸಕರು ಸಭೆಯಲ್ಲಿ ಗಂಭೀರವಾಗಿ ಚರ್ಚೆ ಮಾಡಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಗೆ ಅನ್ಯಾಯವಾಗದ ರೀತಿಯಲ್ಲಿ ಈ ಅವೈಜ್ಞಾನಿಕ ಯೋಜನೆಗೆ ತಾತ್ವಿಕ ಅಂತ್ಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಮುಖಂಡರಾದ ಗುಬ್ಬಿಯ ಹೆಚ್.ಟಿ.ಭೈರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ರೈತ ಮುಖಂಡರಾದ ಅಜ್ಜಪ್ಪ, ಕಳ್ಳಿಪಾಳ್ಯ ಲೋಕೇಶ್, ವೆಂಕಟೇಗೌಡ, ಶಂಕರಪ್ಪ, ತಿರುಮಲೇಶ್ ಚೇಳೂರು, ಕೆ.ಪಿ.ಮಹೇಶ್, ಸಾಗರನಹಳ್ಳಿ ವಿಜಯಕುಮಾರ್, ನರಸಿಂಹಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *