ಏತ ನೀರಾವರಿ ತ್ವರಿತ ಪೂರ್ಣಗೊಳಿಸಲು ರೈತ ಸಂಘ ಒತ್ತಾಯ

ತುಮಕೂರು:ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿ ಬಿಕ್ಕೆಗುಡ್ಡ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಹಾಗಲವಾಡಿ ಏತನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಇಂದು ರೈತ ಮುಖಂಡರು ಹಾಗೂ ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ಹೇಮಾವತಿ ನಾಲಾವಲಯ ಮುಖ್ಯ ಇಂಜಿನಿಯರ್ ಪಣಿರಾಜು ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.

ಸಭೆಯಲ್ಲಿ ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಏತ ನೀರಾವರಿ ಯೋಜನೆಗಳ ಸಾಧಕ, ಭಾಧಕಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಧಿಕಾರಿಗಳ ಮಾಹಿತಿ ಮತ್ತು ರೈತ ಮುಖಂಡರ ಒತ್ತಾಯಗಳನ್ನು ಆಲಿಸಿದ ಮುಖ್ಯ ಇಂಜಿನಿಯರ್ ಅವರು,ಹೆಬ್ಬೂರು ಹೋಬಳಿ ಬಿಕ್ಕೆಗುಡ್ಡ ಏತ ನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸೆಪ್ಟಂಬರ್ ಅಂತ್ಯದೊಳಗೆ ಮುಗಿಸಿ, ಅಕ್ಟೋಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ,ನವೆಂಬರ್ 15 ರಿಂದ ನೀರು ಹರಿಸುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಹಾಗೆಯೇ ಚಿಕ್ಕನಾಯಕನಹಳ್ಳಿ ತಾಲೂಕು ಹಾಗಲವಾಡಿ ಏತನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳಿಸಿ,ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ನಡೆಸಿ, 2025ರ ಜನವರಿ 15 ರಂದು ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ರೈತ ಮುಖಂಡರಿಗೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರು, 2015ರಲ್ಲಿ ರೈತ ಸಂಘ ಹಾಗೂ ರೈತರ ಹೋರಾಟದ ಫಲವಾಗಿ ಬಿಕ್ಕೆಗುಡ್ ಮತ್ತು ಹಾಗಲವಾಡಿ ಏತ ನೀರಾವರಿ ಯೋಜನೆಗಳು ಆರಂಭಗೊಂಡರೂ ಇದುವರೆಗೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಕೆಲಸಗಳಾಗಿವೆ. ಆದರೆ ಪೂರ್ಣ ಪ್ರಮಾಣದ ಕಾಮಗಾರಿ ಮುಗಿಯದೆ ನೀರು ಹರಿಸಲು ಸಾಧ್ಯವಾಗಿಲ್ಲ.ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಮತ್ತು ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಈಗಾಗಲೇ ಯೋಜನೆಗೆ ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರವೂ ಇಲ್ಲ, ಇತ್ತ ನೀರು ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

ರೈತ ಮುಖಂಡರೇ ಮುತ್ತುವರ್ಜಿ ವಹಿಸಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತುಕತೆ ನಡೆಸಿ ಕೆಲವು ಕಡೆಗಳಲ್ಲಿ ಕಾಮಗಾರಿಗೆ ಭೂಮಿ ಬಿಡಿಸಿಕೊಟ್ಟಿದ್ದರೂ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಇದುವರೆಗೂ ಅವರಿಗೆ ಭೂಪರಿಹಾರ ದೊರೆತ್ತಿಲ್ಲ.ಅಲ್ಲದೆ ಬಿಕ್ಕೆಗುಡ್ಡ ಯೋಜನೆಯಲ್ಲಿ ಸರಕಾರದಿಂದ ಗುತ್ತಿಗೆದಾರರಿಗೆ ಬಾಕಿ ಬಂದಿಲ್ಲವೆಂಬ ಕಾರಣಕ್ಕೆ ಮುಖ್ಯ ನಾಲೆಯ 4 ಕಿ.ಮಿ. ಮತ್ತು ವಿತರಣಾ ನಾಲೆಯ 4 ಕಿ.ಮಿ.ಕಾಮಗಾರಿಗೆ ಅಗತ್ಯವಿರುವ ಪೈಪ್‍ಲೈನ್ ಕಾಮಗಾರಿ ನಿಂತಿದೆ.ಗುತ್ತಿಗೆದಾರರಿಗೆ 2 ಕೋಟಿ ಬಾಕಿ ಬರಬೇಕಿದೆ.ಹಾಗೆಯೇ ರೈತರಿಗೂ 2 ಕೋಟಿ ರೂ ಭೂ ಪರಿಹಾರ ಬಾಕಿ ಇದೆ.ಮುಖ್ಯ ಇಂಜಿನಿಯರ್ ಅವರು ತ್ವರಿತವಾಗಿ ಕಾಮಗಾರಿ ನಡೆಸಲು ಬಾಕಿ ಹಣ ಪಾವತಿಗೆ ಅಗತ್ಯ ಕ್ರಮ ಕೈಗೊಂಡರೆ, ಈ ಬಾರಿಯಾದರೂ ನೀರು ಹರಿಸಬಹುದು ಎಂದು ಒತ್ತಾಯಿಸಿದರು.

ಹಾಗಲವಾಡಿ ಯೋಜನೆ ಸಹ 3 ಹಂತದ ಕಾಮಗಾರಿಗಳು ನಡೆದಿದ್ದು, ಭೂಸ್ವಾಧೀನದ ವಿಳಂಬದಿಂದ ಅಲ್ಲಲ್ಲಿ ಕಾಮಗಾರಿ ನಿಂತಿದೆ.ಹಾಗಾಗಿ ಭೂ ಸ್ವಾಧೀನಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು.ರೈತರು ಕಳೆದ 9 ವರ್ಷಗಳಿಂದ ನಮಗೆ ಕುಡಿಯಲು ನೀರು ಬರುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುತಿದ್ದಾರೆ.ಅವರ ತಾಳ್ಮೆ ಪರೀಕ್ಷಿಸುವುದು ಬೇಡ.ಎಲ್ಲಾ ಅಡೆತಡೆಗಳನ್ನು ಮುಗಿಸಿ,ಈ ವರ್ಷ ಹೇಮಾವತಿ ಜಲಾಶಯದಲ್ಲಿ ಎತೇಚ್ಚವಾಗಿ ನೀರು ಇರುವುದರಿಂದ ಪ್ರಾಯೋಗಿಕವಾಗಿಯಾದರೂ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ರೈತ ಮುಖಂಡರ ಮನವಿಗೆ ಉತ್ತರಿಸಿದ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಪಣಿರಾಜು,ಬಿಕ್ಕೆಗುಡ್ಡ ಏತನೀರಾವರಿಗೆ ಸಂಬಂಧಿಸಿಂತೆ 2024ರ ಸೆಪ್ಟಂಬರ್ 15ರೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಸೆಪ್ಟಂಬರ್ 04ರಂದು ಆ ಭಾಗದ ರೈತರೊಂದಿಗೆ ಅದಾಲತ್ ನಡೆಸಿ, ಭೂಸ್ವಾಧೀನ ಮತ್ತು ಪರಿಹಾರ ಪೂರ್ಣಗೊಳಿಸಿ, ತಕ್ಷಣವೇ ಕೆಲಸ ಆರಂಭಿಸಿ,ಆಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್ 15 ರಂದು ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ. ಹಾಗೆಯೇ ಹಾಗಲವಾಡಿಗೆ ಸಂಬಂಧಿಸಿಂತೆ 2024ರ ಅಕ್ಟೋಬರ್ ಅಂತ್ಯದೊಳಗೆ ಭೂ ಸ್ವಾಧೀನ ಪ್ರಕ್ರಿಯೇ ಪೂರ್ಣಗೊಳಿಸಿ,ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳು ಕಾಮಗಾರಿ ಪೂರ್ಣಗಳಿಸಿ, 2025ರ ಜನವರಿ15 ರಂದು ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ.ಈ ಬಾರಿ ಪ್ರಾಯೋಗಿಕವಾಗಿಯಾದರೂ ನೀರು ಹರಿಸಿ, ರೈತರಲ್ಲಿ ಭರವಸೆ ಮೂಡಿಸಲಾಗುವುದು ಎಂದರು.

ಸಭೆಯಲ್ಲಿ ಹೇಮಾವತಿ ನಾಲಾವಲಯದ ಅಧೀಕ್ಷಕ ಇಂಜಿನಿಯರ್, ವಿಶೇಷ ಭೂಸ್ವಾಧೀನಾಧಿಕಾರಿಗಳು, ಹಾಗಲವಾಡಿ ಮತ್ತು ಬಿಕ್ಕೆಗುಡ್ಡ ಯೋಜನೆಗಳ ಎಇಇಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಗೌಡ,ಪ್ರಧಾನ ಕಾರ್ಯದರ್ಶಿ, ಮುಖಂಡರಾದ ಮುನಿಯಪ್ಪ, ತಮ್ಮಯಣ್ಣ,ಸದಾಶಿವಪ್ಪ, ಕೃಷ್ಣಜೆಟ್ಟಿ ಹಾಗಲವಾಡಿ,ಗುಬ್ಬಿ ರವೀಶ್,ಯತೀಶ್, ಸುರೇಶ್, ಭದ್ರಯ್ಯ, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *