ರಾಜ್ಯಪಾಲರ ನಡೆ ವಿರೋಧಿಸಿ ಅಹಿಂದ ಒಕ್ಕೂಟದಿಂದ ಆಗಸ್ಟ್ 27ರಂದು ರಾಜಭವನ ಚಲೋ

ತುಮಕೂರು:ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹುನ್ನಾರ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಆ.27 ರಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿದ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಅನಂತನಾಯಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಒಂದು ಸ್ಥಿರ ಸರಕಾರವನ್ನು ವಾಮ ಮಾರ್ಗದಿಂದ ಕಡೆವಿ,ಮಜಾ ತೆಗೆದುಕೊಳ್ಳಲು ಹೊರಟಿರುವ ಜೆಡಿಎಸ್-ಬಿಜೆಪಿ ಪಕ್ಷಗಳು,ಇದಕ್ಕೆ ರಾಜಭವನವನ್ನ ದುರುಪಯೋಗ ಪಡಿಸಿಕೊಂಡಿವೆ. ಹಾಗಾಗಿ ಶೋಷಿತ ಸಮುದಾಯಗಳ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರೆ ಯಬೇಕು.ಅವರಿಂದ ಮಾತ್ರ ಅಹಿಂದ ವರ್ಗಗಳ ಏಳಿಗೆ ಸಾಧ್ಯ ಎಂಬುದನ್ನು ಮನಗಂಡಿರುವ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆ.27ರ ರಾಜಭವನ ಚಲೋ ನಿರ್ಣಾಯಕ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.

ಮುಡಾ ಹಗರಣ ನಡೆದಿರುವುದು ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ, 1932ರಿಂದಲೂ ಸದರಿ ಭೂಮಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ನಡೆದಿವೆ.ಈ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಜೆಡಿಎಸ್-ಬಿಜೆಪಿ ಆರೋಪಿ ಎಂದು ಬಿಂಬಿಸುತ್ತಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ,ನಗರಾಭಿವೃದ್ದಿ ಸಚಿವರಾಗಲಿ,ಮುಡಾ ಅಧ್ಯಕ್ಷರಾಗಲಿ ಆಗಿರಲಿಲ್ಲ. ಪ್ರಕರಣದಲ್ಲಿ ಇವರ ತಪ್ಪು ಇಲ್ಲದಿದ್ದರೂ ಕ್ಲೀನ್ ಇಮೇಜ್ ಹೊಂದಿರುವ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು, ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿವೆ.ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.ಹಾಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಈ ಹೋರಾಟ ಅನಿವಾರ್ಯ. ರೈತರು,ಕಾರ್ಮಿಕರು,ದಲಿತರು,ಹಿಂದುಳಿದ ವರ್ಗಗಳ ಜನರು ಒಗ್ಗೂಡಿ ಜೆಡಿಎಸ್-ಬಿಜೆಪಿ ಕುತಂತ್ರವನ್ನು ಎದುರಿಸ ಬೇಕಾಗಿದೆ.ಆ.27ಕ್ಕೆ ರಾಜಭವನ ಮುತ್ತಿಗೆ ಹಾಕಿ ಗೋ ಬ್ಯಾಕ್ ಗೆಹಲೋಟ್ ಎಂಬ ಘೋಷಣೆ ಮೊಳಗಿಸಬೇಕಾಗಿದೆ ಎಂದು ಆನಂತನಾಯಕ್ ತಿಳಿಸಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ,ಮುಡಾ ಹಗರಣದಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲದಿದ್ದರೂ ಅವರನ್ನು ವಿನಾಕಾರಣ ಹಗರಣದಲ್ಲಿ ಸಿಲುಕಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ.ಸ್ವತಃ ಮುಖ್ಯಮಂತ್ರಿಗಳೇ ತನ್ನ ಮೇಲೆ ಬಂದಿರುವ ಹಗರಣದ ತನಿಖೆಗೆ ನಿವೃತ್ತ ನ್ಯಾಯಾಮೂರ್ತಿ ಪಿ.ಎನ್.ದೇಸಾಯಿ ಅವರನ್ನು ನೇಮಕ ಮಾಡಿದ್ದರೂ ಅವರಿಗೆ ತಮಲ್ಲಿರುವ ದಾಖಲೆ ಸಲ್ಲಿಸಿದೆ,ಇಡೀ ಶೋಷಿತ ಸಮುದಾಯಕ್ಕೆ ಅಪಮಾನವೆಸಗುತ್ತಿದೆ.ತಮ್ಮ ಕುಟುಂಬದ ಮೇಲಾಗಿರುವ ಹೊಲಸು ಸರಿ ಮಾಡಿಕೊಳ್ಳಲಾಗದೆ ಹೆಚ್.ಡಿ.ಕುಮಾರಸ್ವಾಮಿ,ಕ್ಲೀನ್ ಇಮೇಜ್ ಇರುವ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರ ದ್ವನಿಯಾಗಿ ಇಡೀ ತಳ ಸಮುದಾಯದ ಅವರ ಬೆನ್ನಿಗೆ ನಿಲ್ಲಲಿದೆ ಎಂದರು.

ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಮೈಲಪ್ಪ ಮಾತನಾಡಿ,ನೇರವಾಗಿ ಜನಾಧಿಕಾರ ಪಡೆಯಲು ಸಾಧ್ಯವಾಗದ ಜೆಡಿಎಸ್-ಬಿಜೆಪಿ ಪಕ್ಷಗಳು ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿವೆ ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಎಂತಹ ಹೋರಾಟಕ್ಕೂ ಸಮುದಾಯ ಸಿದ್ದವಿದೆ ಎಂದರು.

ಹಿಂದುಳಿದ ವರ್ಗಗಳ ಒಕ್ಕೂಟದ ಕೆಂಪರಾಜು ಮಾತನಾಡಿ,ಸಿದ್ದರಾಮಯ್ಯ ನಮ್ಮೆಲ್ಲರ ಮಹಾನಾಯಕ. ಅವರ ಘನತೆ ಗೌರವ ಉಳಿಸಲು ಎಂತಹ ಕಠಿಣ ತ್ಯಾಗಕ್ಕೂ ಸಿದ್ದವಿದ್ದೇವೆ.ಆಗಸ್ಟ್ 27ರಂದು ನಡೆಯುವ ರಾಜ್ಯಭವನ ಚಲೋಗೆ ತುಮಕೂರು ಜಿಲ್ಲೆಯಿಂದ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುತಿದ್ದೇವೆ. ಈ ಸಂಬಂಧ ಎಲ್ಲಾ ತಾಲ್ಲೂಕುಗಳ ಲ್ಲಿಯೂ ಸಭೆ ನಡೆದಿದೆ.ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಉಳಿಸಿ ಕೊಳ್ಳುವುದು ನಮ್ಮ ಆಶಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟಿ.ಇ.ರಘುರಾಮ್, ಆದರ್ಶ ಯಲ್ಲಪ್ಪ, ಈರಣ್ಣ, ಹೆಬ್ಬೂರು ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *