ತುಮಕೂರು : “ರಾಜ್ಯದಲ್ಲಿ ಸ್ಪಷ್ಟವಾದ ಭಾಷಾ ನೀತಿ, ಜಲ, ಗಡಿ, ರಾಜನೀತಿ ಇಲ್ಲವಾಗಿದೆ. ಒಂದು ರಾಜ್ಯಕ್ಕೆ, ದೇಶಕ್ಕೆ ರಾಜನೀತಿ ಅತ್ಯಗತ್ಯ ಎಂದು ನಾರ್ವೆ ಕರ್ನಾಟಕ ಸಂಘಟನೆ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ ಪ್ರತಿಪಾದಿಸಿದರು.
ನಗರದ ಗಾಜಿನಮನೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ‘ಕನ್ನಡ ಭಾಷಾಮತ್ತು ಶಿಕ್ಷಣ- ಆತಂಕಗಳು ಮತ್ತು ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ನಮ್ಮ ಕಾಲಕ್ಕೆ ಬೇಕಾದ ಭಾಷಾ ನೀತಿ’ ಕುರಿತು ವಿಚಾರ ಮಂಡಿಸಿ ಮಾತನಾಡಿದರು.
ರಾಜಕೀಯ ಕಾರಣಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ನಮ್ಮ ರಾಜ್ಯದ ಅಸ್ಮಿತೆಯನ್ನು ಬಲಿಕೊಟ್ಟು ಭಾರತದ ಹೆಸರು ಮುಂದಿಟ್ಟುಕೊಂಡು ಒಕ್ಕೂಟ ವ್ಯವಸ್ಥೆ ಹಾಳು ಮಾಡುತ್ತಿರುವ ಬಗ್ಗೆ ಕನ್ನಡಿಗರು ಪ್ರತಿರೋಧ ತೋರಬೇಕಿದೆ’ ಎಂದು ಎಚ್ಚರಿಸುವ ಮಾತುಗಳನ್ನಾಡಿದರು. ಹಿಂದಿ ಹೇರಿಕೆಯನ್ನು ವಿರೋಧಿಸಬೇಕು. ದ್ವಿಭಾಷಾ ನೀತಿ ಪಾಲನೆಯಾಗಬೇಕು. ಉತ್ತರ ಭಾರತದಿಂದ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ವಲಸೆ ಬರುತ್ತಿದ್ದಾರೆ, ಉತ್ತರ ರಾಜ್ಯಗಳ ಜನರ ಬಡತನ ನಿವಾರಿಸುವ ಹೊಣೆ ನಮ್ಮದಲ್ಲ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿಂತಕ ಕೆ.ದೊರೈರಾಜ್ ಶಿಕ್ಷಣ ವ್ಯವಸ್ಥೆ ದಾರಿ ತಪ್ಪಿದ್ದು, ಅಸಮಾನ ಸಮಾಜ ನಿರ್ಮಾಣವಾಗುತ್ತಿದೆ ಎಂದು ವಿಷಾದಿಸಿದರು.ಅಗತ್ಯ ಇರುವವರಿಗೆ ಶಿಕ್ಷಣ ಸಿಗದಾಗಿದ್ದು, ಹಣ ಇದ್ದವರಿಗೆ ಶಿಕ್ಷಣ ಎಂಬ ವಾತಾವರಣ ನಿರ್ಮಾಣವಾಗಿದೆ. ಎಲ್ಲರಿಗೂ ಸಮಾನವಾಗಿ ಸಾರ್ವತ್ರಿಕ ಶಿಕ್ಷಣ ಕೊಡಲು ಸಾಧ್ಯವಾಗಿಲ್ಲ. ಸಾರ್ವತ್ರಿಕ ಶಿಕ್ಷಣ ನೀತಿ ಇಲ್ಲದೆ ಮಾತೃಭಾಷಾ ಶಿಕ್ಷಣಕ್ಕೆ ಧಕ್ಕೆಯಾಗಿದೆ. ಸಮಾನ ಶಿಕ್ಷಣ ನೀತಿ ರೂಪುಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಭಾಷಾ ನೀತಿ ಜಾರಿಯಾಗುವುದನ್ನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳು ತಡೆಯುತ್ತಿದ್ದಾರೆ. ಉದ್ಯಮಿಗಳ ಕೈಗೆ ಶಿಕ್ಷಣ ಕ್ಷೇತ್ರ ಸಿಲುಕಿ ನಲುಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಆಗ್ರಹಿಸಿದರು.
‘ಉನ್ನತ ಶಿಕ್ಷಣ ಮತ್ತು ಕನ್ನಡ ಮಾಧ್ಯಮ’ ಕುರಿತು ವಿಚಾರ ಮಂಡಿಸಿದ ಲೇಖಕ ಕೆ.ಪಿ. ನಟರಾಜ್, ‘ಮಾತೃ ಭಾಷಾ ಶಿಕ್ಷಣ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ ನಂತರದ ದಿನಗಳಲ್ಲಿ ಈ ಸಮಸ್ಯೆಯನ್ನು ಸರಿಪಡಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮನೋಭಾವನೆ ತೋರುತ್ತಾ ಬಂದಿದ್ದಾರೆ’ ಎಂದು ವಿಷಾದಿಸಿದರು. ಕನ್ನಡಿಗರೂ ಸಹ ನಿರ್ಲಿಪ್ತ ಸರ್ಕಾರಿ ಶಾಲೆಗಳನ್ನು, ಮುಚ್ಚುವಂತೆ ಮಾಡಿದೆ, ‘ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಮುಂದೆ ನಿಂತು ಮುಚ್ಚಿಸುತ್ತಿರುವುದು ಆತಂಕಕಾರಿ ವಿಚಾರ. ಕರ್ನಾಟಕ ಪಬ್ಲಿಕ್ ಶಾಲೆ, ವಸತಿ ಶಾಲೆಗಳನ್ನು ಸ್ಥಾಪಿಸಿ ಇಂಗ್ಲೀಷ್ ಶಿಕ್ಷಣ ನೀಡುವ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ದೊಡ್ಡ ಬೆದರಿಕೆಯಾಗಿದೆ. ಕನ್ನಡ ಶಾಲೆಗಳ ಮೇಲೆ ಘೋರ ಅನ್ಯಾಯ ನಡೆಯುತ್ತಿದ್ದರೂ ಸಮಾಜದಿಂದ ಸರಿಯಾದ ಪ್ರತಿರೋಧ ಇಲ್ಲವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 1ರಿಂದ 10ನೇ ತರಗತಿ ವರೆಗೆ ಕನ್ನಡ ಶಾಲೆಗಳಲ್ಲಿ ಸುಮಾರು 5ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ, ಇಂಗ್ಲೀಷ್ ಶಾಲೆಗಳಲ್ಲಿ 2.50 – 3 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಭಾಷಾ ನೀತಿ, ಉದ್ಯೋಗ ನೀತಿಗಳಿಲ್ಲದೆ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ 5 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಮಣ್ಣುಪಾಲು ಮಾಡಲಾಗುತ್ತಿದೆ, ವೃತ್ತಿಪರ ಕೋರ್ಸ್‍ಗಳು ಸೇರಿದಂತೆ ಉನ್ನತ ಶೀಕ್ಷಣದಲ್ಲಿ ಕನ್ನಡ ಜಾರಿಯಾಗದಿದ್ದರ ಕನ್ನಡ ಉಳಿಸುವುದು ಕಷ್ಟ ಎಂದು ಹೇಳಿದರು.
ಪ್ರಾಧ್ಯಾಪಕ ಮಲ್ಲಿಕಾರ್ಜುನ ಮೇಟಿ, ‘ಜ್ಞಾನ ಬಗ್ಗೆ ಇಲ್ಲದವರು ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಇದ್ದಾರೆ. ಇಂತಹವರಿಂದ ಜ್ಞಾನ ಆಧಾರಿತ ಪಠ್ಯ ರೂಪುಗೊಳ್ಳಲು ಸಾಧ್ಯವೆ? ಎಂದು ಪ್ರಶ್ನಿಸಿದರು.
ಕನ್ನಡ ನಾಮಫಲಕ ವಿಚಾರ ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳ ಹೋರಾಟಗಾರರು ದಾಳಿ ಮಾಡುತ್ತಿರುವುದು ದ್ವೇಷವನ್ನು ಮತ್ತಷ್ಟು ಹೆಚ್ಚುತ್ತದೆ, ಇದರಿಂದ ಪ್ರೀತಿ ಹುಟ್ಟುವುದಿಲ್ಲ ಎಂದು ಗೋಷ್ಠಿ ಉದ್ಘಾಟನೆ ಮಾಡಿದ ತುಮಕೂರು ವಿಶ್ವವಿದ್ಯಾಲಯ ಕುಲಪತಿ ವೆಂಕಟೇಶ್ವರಲು ಹೇಳಿದರು.
ಕನ್ನಡ ಉಳಿಸಲು ಪ್ರೀತಿಯ ಮನಸ್ಸಿನಿಂದ ಕೆಲಸ ಮಾಡಬೇಕು. ಪ್ರೀತಿ ಮೂಡುವಂತೆ ಮಾಡಿದರೆ ಅವರೇ ಕನ್ನಡ ಫಲಕಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದರು.
ಜಿಲ್ಲಾ ಲೇಖಕಿರಯ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ನಿವೃತ್ತ ಉಪನಿರ್ದೇಶಕ ಟಿ.ಎಸ್.ಅಂಜನಪ್ಪ, ಮುಖ್ಯ ಶಿಕ್ಷಕ ಎಸ್.ಕೃಷಪ್ಪ, ನಟರಾಜಪ್ಪ, ಗುರುಮೂರ್ತಿ ಉಪಸ್ಥಿತರಿದ್ದರು.