ತುಮಕೂರು:ಯುವಜನತೆಯೇ ದೇಶದ ಭವಿಷ್ಯ ಎಂದು ನಂಬಿದ್ದ ಮಾಜಿ ಪ್ರಧಾನಿ ದಿ.ರಾಜೀವಗಾಂಧಿ ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸುವ ಮೂಲಕ ಈ ದೇಶದ ಯುವಕರಿಗೆ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜೀವ್‍ಗಾಂಧಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಡು ಮಾತನಾಡುತಿದ್ದ ಅವರು,ಯುವಜನತೆಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ, ಮೋದಿ,ಮೋದಿ ಅಂತ ಹೋಗಿ,ದುಡಿಯಲು ಉದ್ಯೋಗವೂ ಇಲ್ಲದೆ,ಅಬ್ಬೆಪಾರಿಗಳಂತೆ ಅಲೆಯುವಂತಹ ಸ್ಥಿತಿ ತಂದುಕೊಂಡಿರುವುದು ದುರ್ದೈವದ ಸಂಗತಿ ಎಂದರು.
ಕಾಂಗ್ರೆಸ್ ಪಕ್ಷದ ಇಂದಿನ ಹೀನಾಯ ಸ್ಥಿತಿಗೆ ಕಾಂಗ್ರೆಸ್ ಪಕ್ಷದವರೇ ಕಾರಣ.ಪಕ್ಷದಲ್ಲಿ ಯುವಘಟಕಗಳಿಗೆ ಹೆಚ್ಚು ಒತ್ತು ನೀಡದ ಪರಿಣಾಮ ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ ಘಟಕಗಳು ನಾಮಕಾವಸ್ಥೆಗೆ ಅಸ್ಥಿತ್ವದಲ್ಲಿವೆ.ಬಿಜೆಪಿಯಲ್ಲಿ ಯುವಮೋರ್ಚಾ ಮತ್ತು ಎಬಿವಿಪಿಗೆ ಒತ್ತು ನೀಡುವಂತೆ, ಯುವಕರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು.ಆಗ ಮಾತ್ರ ಪಕ್ಷವನ್ನು ತಳಮಟ್ಟದಲ್ಲಿ ಬಲವಾಗಿ ಕಟ್ಟಲು ಸಾಧ್ಯ.ಈ ನಿಟ್ಟಿನಲ್ಲಿ ಎಲ್ಲಾ ನಾಯಕರು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದೆ ಎಂದು ಕೆಂಚಮಾರಯ್ಯ ನುಡಿದರು.
ಮಾಜಿ ಶಾಸಕರಾದ ಗಂಗಹನುಮಯ್ಯ ಮಾತನಾಡಿ,ಕಾಂಗ್ರೆಸ್ ಪಕ್ಷ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದು ರಾಜೀವ್‍ಗಾಂಧಿ.ಆದರೆ ಇಂದು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಗಳಿಗೆ ಹೆಸರು ಬದಲಾಯಿಸಿ ಪ್ರಚಾರ ಪಡೆದುಕೊಂಡಿತ್ತು.ದೇಶವನ್ನು ವೈಜ್ಞಾನಿಕವಾಗಿ ಕಟ್ಟಬೇಕೆಂಬ ಮಹತ್ವಾಕಾಂಕ್ಷೆಯನು ಹೊಂದಿದ್ದ ರಾಜೀವ್‍ಗಾಂಧಿ,ಶೋಷಿತ ಸಮುದಾಯಗಳಿಗೆ ಅಧಿಕಾರ ಸಿಗಬೇಕು ಎಂಬ ಕಾರಣಕ್ಕೆ 73/74ನೇ ಸಂವಿಧಾನ ತಿದ್ದುಪಡಿ ತಂದು,ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು.ಇಂತಹ ಮಹಾನ್ ವ್ಯಕ್ತಿ ಮಾನವ ಬಾಂಬ್‍ಗೆ ಬಲಿಯಾಗಿದ್ದು ದುರ್ದೈವದ ಸಂಗತಿ.ಅವರ ಆದರ್ಶಗಳನ್ನು ನಾವುಗಳು ಪಾಲಿಸಬೇಕಿದೆ ಎಂದರು.
ಹಿರಿಯ ಮುಖಂಡ ರೇವಣಸಿದ್ದಯ್ಯ ಮಾತನಾಡಿ,ನೆಹರು, ಇಂದಿರಾಗಾಂಧಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ, ಪಂಚವಾರ್ಷಿಕ ಯೋಜನೆಗಳ ಮೂಲಕ ನಿರುದ್ಯೋಗ ನಿರ್ಮೂಲನೆಗಾಗಿ ಕೈಗಾರಿಕೆಗಳ ಬೆಳವಣಿಗೆ, ಭಾರತೀಯ ಸೈನ್ಯ ಬಲಪಡಿಸುವ ಕೆಲಸಕ್ಕೆ ಮುಂದಾದವರು ರಾಜೀವ್‍ಗಾಂಧಿ.ಅಂದು ಆರಂಭವಾದ ಕೈಗಾರಿಕೆಗಳನ್ನು ಮಾರಾಟ ಮಾಡಿ, ವಿಶ್ವಗುರು ಎನಿಸಿಕೊಳುತ್ತಿರುವ ಮೋದಿಯ ನಡೆಗಳನ್ನು ಯುವಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕು.ಅವರು ದೇಶದ ಅಭಿವೃದ್ದಿಯ ಪಾಲು ಪಡೆಯಬೇಕು ಎಂಬ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು ಶೇ33ರ ಮೀಸಲಾತಿಯನ್ನು ಕಲ್ಪಿಸಿದ್ದು ರಾಜೀವ್‍ಗಾಂಧಿ, ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷವನ್ನು ಬಲ ಪಡಿಸಿ, ಹೆಚ್ಚಿನ ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯುವತ್ತ ಮುನ್ನೆಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಮಂತ್ರಿ ಹುದ್ದೆಯ ಜವಾಬ್ದಾರಿ ಪಡೆದು,ದೇಶಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ದಿ.ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ.ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶವನ್ನು ಬೆಳೆಸಬೇಕೆಂಬ ಆಶಯದ ದೊಂದಿಗೆ ಕಂಪ್ಯೂಟರ್ ತಂತ್ರಜ್ಞಾನದ ಜೊತೆಗೆ, ಮೊಬೈಲ್‍ಗೂ ಒತ್ತು ನೀಡಿದ ಪರಿಣಾಮ ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಯನ್ನು ಕ್ಷಣಾರ್ಧದಲ್ಲಿ ನೋಡುವಂತಾಗಿದೆ. ಐಟಿ, ಬಿಟಿಗೆ ಉತ್ತೇಜನ ನೀಡಿದ ಪರಿಣಾಮ ಭಾರತೀಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಕೊಲೆ, ಸುಲಿಗೆ, ಅತ್ಯಾಚಾರ, ಮಹಿಳೆಯ ಬೆತ್ತಲೆ ಮೆರವಣಿಗೆ ಸೇರಿದಂತೆ ಹಲವಾರು ಘಟನೆಗಳು ಕಣ್ಮುಂದೆ ಇದ್ದರೂ ಆರೋಪಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ಇಂತಹ ಮೋದಿ ತಾನಾಗಿಯೇ ಅಧಿಕಾರದಿಂದ ಕೆಳಗೆ ಇಳಿಯುವಂತೆ ಈ ಚುನಾವಣೆ ಮಾಡಲಿದೆ ಎಂಬ ನಂಬಿಕೆ ಹಾಗೂ ದೇಶದ ಕೋಟ್ಯಾಂತರ ಜನರ ಹಾರೈಕೆಯಾಗಿದೆ ಎಂದು ಚಂದ್ರಶೇಖರಗೌಡ ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ,ಎಸ್.ಟಿ.ಘಟಕ ಕುಮಾರಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಫಯಾಜ್,ಮಹೇಶ್,ಉಪಾಧ್ಯಕ್ಷ ನ್ಯಾತೇಗೌಡ,ಮಾಜಿ ಶಾಸಕರಾದ ಗಂಗಹನುಮಯ್ಯ,ಮಾರುತಿ ಗಂಗಹನುಮಯ್ಯ,ಆಡಿಟರ್ ಸುಲ್ತಾನ್ ಮಹಮದ್, ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ,ಪಾಲಿಕೆ ಮಾಜಿ ನಯಾಜ್ ಅಹಮದ್, ಮರಿಚನ್ನಮ್ಮ, ಭಾಗ್ಯಮ್ಮ,ಮುಬೀನ, ಕೆಂಪರಾಜು, ಷಣ್ಮುಖಪ್ಪ, ಹರ್ಷ ರಾಮು, ಸುಜಾತ, ಜಯಮೂರ್ತಿ, ಸಿಮೆಂಟ್ ಮಂಜಣ್ಣ, ಅಬ್ದುಲ್ ರಹೀಮ್, ಆಟೋ ರಾಜು ಮತ್ತಿತರರು ಉಪಸ್ಥಿತರಿದ್ದರು.