ಬಾ.ಹ.ರಮಾಕುಮಾರಿ ಎಂಬ ರಮಾಕ್ಕ ನನಗೆ ಯಾವಾಗ ಪರಿಚಯವಾದರು ಎಂಬುದು ನೆನಪಿಲ್ಲ, 80 ಮತ್ತು 90ರ ದಶಕದಲ್ಲಿ ಯಾವುದೇ ಸಾಹಿತ್ಯ, ಚಳುವಳಿ ಕಾರ್ಯಕ್ರಮಗಳಿಗೆ ಹೋದರೆ ರಮಾಕ್ಕ ಮತ್ತು ಶೈಲಾಕ್ಕ ಇಲ್ಲದೆ ಆ ಕ್ರಾರ್ಯಕ್ರಮ ನಡೆಯುತ್ತಿರಲಿಲ್ಲ.
ನಾವೆಲ್ಲಾ ಲಂಕೇಶ್, ಲೋಹಿಯಾ, ಗಾಂಧಿ, ಅಂಬೇಡ್ಕರ್,ಬುದ್ಧ, ಬಸವನ ಓದಿಕೊಳ್ಳುತ್ತಾ ಕುವೆಂಪುರವರ ಆಶಯದಡಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ದಲಿತ ಮತ್ತು ರೈತ ಚಳುವಳಿಗಳಲ್ಲಿ ಹೋರಾಟಗಾರರಾಗಿ ಭಾಗಿಯಾಗದಿದ್ದರೂ, ವಿಚಾರಮಂತಿಕೆಗಾಗಿ ಎಲ್ಲಾ ಸಾಹಿತ್ಯ, ಬಂಡಾಯ ಸಾಹಿತ್ಯ, ರೈತ, ದಲಿತ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದೆವೆ.
ಇಂತಹ ಎಲ್ಲಾ ಕಾರ್ಯಕ್ರಮಗಳಲ್ಲಿ ರಮಾಕ್ಕ ಸರ್ಕಾರಿ ನೌಕರರಾಗಿಯೂ ಭಾಗವಹಿಸಿ ಹೆಣ್ಣು ಮಕ್ಕಳ ಪರ, ಸಾಹಿತ್ಯ, ರೈತ, ದಲಿತರ ಪರ ಎತ್ತರದ ಧ್ವನಿಯಲ್ಲಿ ಮಾತನಾಡುತ್ತಿದ್ದರು.
ಆಗಿನ ಕಾಲಕ್ಕೆ ಒಂದಲ್ಲ ಒಂದು ಕವಿಗೋಷ್ಠಿ, ಸಾಹಿತ್ಯದ ಕಾರ್ಯಕ್ರಮ, ವಿಚಾರಗೋಷ್ಠಿಗಳ ಪ್ರಕರತೆ ಇರುತ್ತಿತ್ತು. ಇಂತಹ ಕಡೆ ರಮಾಕ್ಕ ಇದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಯುವಂತೆ, ಚಳುವಳಿಯಾದರೆ ಮಹಿಳಾ ತಂಡವನ್ನು ಬರಲೇ ಬೇಕೆಂದು ಕರೆ ತರುತ್ತಿದ್ದರು.
ನಮ್ಮಂತವರು ಬರೆದ ಬರಹಗಳನ್ನು ಪತ್ರಿಕೆಗಳಲ್ಲಿ ಓದಿ ಹೀಗೆ ಇರಬೇಕೆಂದು ತಿದ್ದಿ-ತೀಡುತ್ತಿದ್ದರು. ಅವರಿಗೆ ಹಮ್ಮು-ಬಿಮ್ಮು ಎಂಬುದನ್ನು ಅಂದಿನಿಂದ ಇಂದಿನವರೆಗೂ ನಾನು ಕಂಡಿಲ್ಲ, ಕೆಲವರು ರಮಾಕ್ಕನೂ ಕೆಲವೊಮ್ಮೆ ಜಾತಿಗೆ ಜೋತುಬೀಳುತ್ತಾರೆ ಎಂದು ಹೇಳಿದರೂ, ನನ್ನಂತಹವನಿಗೆ ಅದು ಕಂಡಿಲ್ಲ.
ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಹಿಡಿದು, ಪತ್ರಿಕೆ ಪಾರಂಭಿಸಿದಾಗಲೂ ನನ್ನಂತಹವನಿಗೆ ದೈರ್ಯ, ಆತ್ಮಸ್ಥೈರ್ಯ ತುಂಬಿದಂತಹವರು, ಅವರು ಸರ್ಕಾರಿ ನೌಕರರಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದಾಗಲೂ ಅವರು ಎಲ್ಲಿಯೂ ತಮಗೆ ಮಸಿ ಬಳಿದುಕೊಂಡವರಲ್ಲ.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ನಿಂತಾಗ, ನಿವೃತ್ತಿಯಾದ ಮೇಲೆ ಸುಮ್ಮನಿರುವುದು ಬಿಟ್ಟು ಇದ್ಯಾಕೆ ಬೇಕಿತ್ತು ಅಂದವರೆ ಹೆಚ್ಚು, ಅವರು ಕಸಾಪ ಅಧ್ಯಕ್ಷರಾದ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯದ “ಕನ್ನಡ ಭವನ”ಕ್ಕೆ ಒಂದು ಕಟ್ಟಡದ ರೂಪದ ಮೆರಗನ್ನು ಕೊಟ್ಟು ಕನ್ನಡದ ಬಂಗಾರದ ಸಾಹಿತ್ಯದ ತೇರುಗುಡಿಯನ್ನಾಗಿ ಮಾಡಿದವರು.
ಅವರು ಎಂದೂ ಕನ್ನಡ ಭವನವನ್ನು ಕಟ್ಟಿದೆ ಎಂದು ಹೇಳಲಿಲ್ಲ, ಸಾಹಿತ್ಯಾಸಕ್ತರಿಂದ ಆಯಿತು ಎಂದಷ್ಟೇ ಹೇಳಿದವರು.
ಅವರು ಜನರೊಂದಿಗೆ, ಸಾಹಿತಿಗಳೊಂದಿಗೆ ಕರುಣಾಮಯಿಯಾಗಿ ನಡೆದುಕೊಳ್ಳುತ್ತಿರುವವರು, ಎಂದೂ ಆಡಂಬರ, ಗೊಡ್ಡು ಸಂಪ್ರದಾಯ, ಮೌಢ್ಯಗಳಿಗೆ ಅರ್ಪಿಸಿಕೊಂಡವರಲ್ಲ. ಎಲ್ಲಿಯೂ ವಿವಾದಗಳಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಒಳ್ಳೆಯದನ್ನು ಮಾಡಲು ಸಾಧ್ಯವಾದರೆ ಮಾಡೋಣ ಇಲ್ಲದಿದ್ದರೆ ಸುಮ್ಮನಿರೋಣ ಎಂದುಕೊಂಡು ತಮ್ಮದೇ ಆದ ವಿಚಾರವಂತಿಕೆಯಲ್ಲಿ ಸಾಹಿತ್ಯ, ಚಳುವಳಿಗಳಿಗೆ ಒತ್ತಾಸೆಯಾಗಿ ನಿಂತ ರಮಾಕ್ಕನಿಗೆ ಜಿಲ್ಲಾ ಕನ್ನಡ ಲೇಖಕಿಯರ ಸಂಘ ಅಭಿನಂದಿಸುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ, ಈ ಅಭಿನಂದನೆ ರಮಾಕ್ಕನಿಗೆ ಮತ್ತುಷ್ಟು ಸ್ಫೂರ್ತಿ ನೀಡಲಿ, ಸಾಹಿತ್ಯ, ಚಳುವಳಿಗಳು ಹೊಸ ಆಲೋಚನೆಗಳನ್ನಿಟ್ಟುಕೊಂಡು ಹೊರ ಒಮ್ಮಲಿ, ರಮ್ಮಾಕ್ಕ ಅಲಿಯಾಸ್ ಬಾ.ಹ.ರಮಾಕುಮಾರಿಯಾವರಿಗೆ ಮೈತ್ರಿನ್ಯೂಸ್ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.