ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಚೊಚ್ಚಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.
ಕೃನಾಲ್ ಪಾಂಡ್ಯ ಅತ್ಯುತ್ತಮ ಬೌಲಿಂಗ್, ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿ ಆರ್‌ಸಿಬಿಗೆ 175 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿದೆ.
ಆರ್‌ಸಿಬಿ ಇನ್ನಿಂಗ್ಸ್: ತಂಡದ ಪರ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್‌ನಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಈ ಜೋಡಿ ಪವರ್‌ಪ್ಲೇನಲ್ಲೇ 80 ರನ್ ಕಲೆಹಾಕಿತ್ತು. ಒಟ್ಟಾರೆ 95 ರನ್‌ಗಳ ಜತೆಯಾಟವನ್ನಾಡಿದರು. ಸಾಲ್ಟ್ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ಎಸೆತಗಳಲ್ಲಿ 56 ರನ್ ಬಾರಿಸಿ ಔಟ್ ಆದರೆ, ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 59 ರನ್ ಬಾರಿಸಿದರು. ಇನ್ನುಳಿದಂತೆ ದೇವದತ್ ಪಡಿಕ್ಕಲ್ 10 ರನ್, ರಜತ್ ಪಟಿದಾರ್ 16 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 34 ರನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟನ್ 5 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 15 ರನ್ ಗಳಿಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ವೈಭವ್ ಅರೋರಾ, ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
ಕೆಕೆಆರ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕ್ವಿಂಟನ್ ಡಿ ಕಾಕ್ ಹಾಗೂ ಸುನಿಲ್ ನರೈನ್ ಕಣಕ್ಕಿಳಿದರು. ಡಿಕಾಕ್ 4 ರನ್ ಗಳಿಸಿ ಔಟ್ ಆದರೆ, ಎರಡನೇ ವಿಕೆಟ್‌ಗೆ ನಾಯಕ ರಹಾನೆ ಜತೆ ಕೈಜೋಡಿಸಿದ ನರೈನ್ ಉತ್ತಮ ಪ್ರದರ್ಶನ ನೀಡಿದರು. 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಬಾರಿಸಿದರು. ನಾಯಕ ರಹಾನೆ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಬಾರಿಸಿದರು. ಹೀಗೆ ನರೈನ್ ಹಾಗೂ ರಹಾನೆ ಜತೆಯಾಟದಲ್ಲಿ ಹತ್ತನೇ ಓವರ್‌ಗೆ ಶತಕದ ಗಡಿ ದಾಟಿದ್ದ ಕೆಕೆಆರ್ ಬಳಿಕ ಆರ್‌ಸಿಬಿ ಬೌಲಿಂಗ್ ದಾಳಿಗೆ ಮಂಕಾಯಿತು.
ಇನ್ನುಳಿದಂತೆ ವೆಂಕಟೇಶ್ ಐಯ್ಯರ್ 6, ರಘುವಂಶಿ 30, ರಿಂಕು ಸಿಂಗ್ 12, ಆಂಡ್ರೆ ರಸೆಲ್ 4, ಹರ್ಷಿತ್ ರಾಣಾ 5, ರಮಣ್ ದೀಪ್ ಸಿಂಗ್ ಅಜೇಯ 6 ಹಾಗೂ ಸ್ಪೆನ್ಸರ್ ಜಾನ್‌ಸನ್ ಅಜೇಯ 1 ರನ್ ಕಲೆಹಾಕಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 3 ವಿಕೆಟ್ ಪಡೆದ ಕೃನಾಲ್ ಪಾಂಡ್ಯ ಕೆಕೆಆರ್ ಪಾಲಿಗೆ ಖಳನಾಯಕನಾದರು. ಸ್ಪೋಟಕ ಆಟಗಾರರಾದ ವೆಂಕಟೇಶ್ ಐಯ್ಯರ್ ಹಾಗೂ ರಿಂಕು ಸಿಂಗ್ ಅವರನ್ನು ಪಿಚ್‌ಗೆ ಹೊಂದಿಕೊಳ್ಳುವುದಕ್ಕೂ ಮುನ್ನ ಪೆವಿಲಿಯನ್‌ಗೆ ಕಳುಹಿಸಿದ ಪಾಂಡ್ಯ ಅರ್ಧಶತಕ ಬಾರಿಸಿದ್ದ ರಹಾನೆಯನ್ನೂ ಸಹ ಔಟ್ ಮಾಡಿದರು. ಇನ್ನುಳಿದಂತೆ ಜೋಶ್ ಹೇಜಲ್‌ವುಡ್ 2 ವಿಕೆಟ್, ಯಶ್ ದಯಾಳ್, ರಸಿಕ್ ದರ್ ಸಲಾಮ್ ಹಾಗೂ ಸುಯಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.