ತುಮಕೂರು: ಕವಿತೆ ಅರ್ಥವಾಗಬೇಕೆಂದರೆ ಅದರೊಂದಿಗೆ ಸಂಸಾರ ನಡೆಸಬೇಕು; ಅದರ ತೀವ್ರ ಒಡನಾಟವಿರಬೇಕು. ಆಗ ಮಾತ್ರ ಕವಿತೆ ದಕ್ಕುತ್ತದೆ ಎಂದು ಕವಿ, ನಾಟಕಕಾರ ರಘುನಂದನ ಹೇಳಿದರು.
ತುಮಕೂರು ವಿಶ್ವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿತೆ ಅಲೌಕಿಕವಾದದ್ದು; ಅದು ಬೇರೊಂದು ಲೋಕವನ್ನೇ ಕಟ್ಟಿಕೊಡುತ್ತದೆ. ನಾವು ಕವಿತೆಯನ್ನು ಮನರಂಜನೆಗೋಸ್ಕರ ಮಾತ್ರ ಓದುತ್ತಿದ್ದೇವೆ. ಆದರೆ ಕವಿತೆ ಮನದ ಕಾಯಿಲೆಗೆ ಕಷಾಯ, ಅದೊಂದು ಔಷಧಿ ಎಂಬುದನ್ನು ನಾವು ತಿಳಿದಿಲ್ಲ ಎಂದರು.
ನಾವೆಲ್ಲರೂ ಈ ಲೋಕದಲ್ಲಿ ಇದ್ದೇವೆ ಎಂಬುದಕ್ಕಿಂತ ನಾವು ಲೋಕದ ಭಾಗವಾಗಿದ್ದೇವೆ; ನಮ್ಮ ಇರುವಿಕೆ, ಲೋಕದಲ್ಲಿ ನಾವಿದ್ದೇವೆ ಎಂಬ ಅರಿವೇ ಮುಖ್ಯ. ನಾವೆಲ್ಲರೂ ಒಂದೇ ಪ್ರಪಂಚದಲ್ಲಿದ್ದೇವೆ, ಹಾಗಾಗಿ ಒಳಗಿನದು, ಹೊರಗಿನದು ಎಂಬ ಭೇದ ಬೇಡ. ನಾವೆಲ್ಲರೂ ಒಂದೇ ಎಂಬ ಸಮನ್ವಯ ಭಾವವೇ ಶ್ರೇಷ್ಠ ಎಂದರು.
ಕಾವ್ಯ, ಪುಸ್ತಕಗಳು ಜಾತಿ ಮತವಿಲ್ಲದೆ ಜಾತ್ಯತೀತವಾಗಬೇಕು. ಪುಸ್ತಕಗಳನ್ನು ಓದುವಾಗ ಯಾವ ಸಿದ್ಧಾಂತವಿಟ್ಟುಕೊಳ್ಳದೆ ಓದಬೇಕು. ಆಗ ಮಾತ್ರ ಅದರ ಸಾರ ಅರ್ಥವಾಗುತ್ತದೆ. ನಾವು ಯಾರೂ ಶಾಶ್ವತವಲ್ಲ. ಒಂದು ಸಾವು ಮತ್ತೊಂದು ಹುಟ್ಟಿಗೆ ಕಾರಣವಾಗುತ್ತದೆ. ಆನಂದ, ದುಃಖವೆಲ್ಲವೂ ಕ್ಷಣಿಕವಷ್ಟೇ ಎಂದರು.
ಯಾವ ನದಿಯೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲ. ಹನಿ ಹನಿಯೂ ಶ್ರೇಷ್ಟವೆ. ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ, ವಿಶ್ವಮಾನವ ಕುವೆಂಪು ಹೇಳುವ ಹಾಗೆ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ ಎಂಬ ವಿಶ್ವಮಾನವ ಸಂದೇಶ ಒಪ್ಪಿಕೊಳ್ಳಬೇಕು ಎಂದರು.
ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ. ಗೀತಾ ವಸಂತ, ಕಲಾವಿದ ತೋವಿನಕೆರೆ ಹನುಮಂತೇಗೌಡ, ಕಥೆಗಾರ ಮಿರ್ಜಾ ಬಷೀರ್, ಪತ್ರಕರ್ತ ಉಗಮ ಶ್ರೀನಿವಾಸ್, ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಉಪಸ್ಥಿತರಿದ್ದರು.