ಕಾರ್ಮಿಕರು ಕೇವಲ ಸಾಮಾಜಿಕ ಸಮಸ್ಯೆಗಳಿಗೆ ಮಾತ್ರ ಗಮನಹರಿಸದೆ ಆರ್ಥಿಕ ಸಮಸ್ಯೆಗಳ ಬಗ್ಗೆಯೂ ಗಮನ ನೀಡಬೇಕು. ಎಲ್ಲಾ ವರ್ಗದ ಜನರಿಗೆ ಮನೆ ನಿರ್ಮಿಸುವ ಕಟ್ಟಡ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿರುವುದು ವಿಷಾದನೀಯ ಸಂಗತಿ ಎಂದು ಸಾಹಿತಿ ಡಾ. ಓ.ನಾಗರಾಜು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಭೀಮಸಂದ್ರದಲ್ಲಿ ಕರ್ನಾಟಕ ರಾಜ್ಯ ಶ್ರಮಿಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ವಸತಿ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು. ಈ ಅಗತ್ಯವನ್ನು ಪೂರೈಸುವ ಕಟ್ಟಡ ಕಾರ್ಮಿಕರು ತಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಸರ್ಕಾರಗಳ ಮೇಲೆ ನಿರಂತರ ಒತ್ತಡ ತಂದು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ವಿಶ್ವದ ಕಾರ್ಮಿಕರ ಏಳಿಗೆಗೆ ತಮ್ಮ ಜೀವಮಾನವಿಡಿ ಶ್ರಮಿಸಿದ ಚಿಂತಕ ಕಾರ್ಲ್‍ಮಾಕ್ರ್ಸ್‍ರವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬ ಕಾರ್ಮಿಕರು ಕಡ್ಡಾಯವಗಿ ಓದುವಂತೆ ಸಲಹೆ ನೀಡಿದ ಡಾ. ಓನಾಗರಾಜು, ಬಹುಮುಖಿ ಚಿಂತಕ ಮಾಕ್ರ್ಸ್‍ರವರ ಚಿಂತನೆಗಳನ್ನು ವಿವರಿಸಿದರು.
ಮನುಷ್ಯನ ಜೀವನಾಧಾರಗಳಾದ ಆಹಾರ, ಉಡುಪು, ಮನೆ, ಔಷಧ ಮತ್ತು ಶಿಕ್ಷಣ ಇಂದು ಬಡಜನರ ಕೈಗೆಟುಕದಂತಾಗಿವೆ. ಆರ್ಥಿಕವಾಗಿ ಸದೃಢರಾಗಿರುವವರಿಗೆ ಬೆಚ್ಚಗಿನ ಮನೆ ನಿರ್ಮಾಣ ಮಾಡುವ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಬಂಡವಾಳಶಾಹಿಗಳು ಮತ್ತು ಕಾರ್ಮಿಕರ ನಡುವೆ ಮಾನವೀಯ ಸಂಬಂಧಗಳು ಏರ್ಪಟ್ಟಾಗ ಉತ್ತಮ ಭಾಂಧವ್ಯ ಹೊಂದಲು ಸಾದ್ಯವಾಗುತ್ತದೆ ಎಂದರು. ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೇರಿಸಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪ್ರೊ. ಕೆ.ದೊರೈರಾಜ್ ಬಂಡವಾಳಶಾಹಿ ವ್ಯವಸ್ಥೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಕಾರ್ಮಿಕರು ಐಕ್ಯತೆಯಿಂದ ಹೋರಾಟಗಳನ್ನು ನಡೆಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು ಒತ್ತಡಗಳ ನಡುವೆ ಸಿಲುಕಿರುವ ಕಾರ್ಮಿಕರನ್ನು ಬಂಡವಾಳಶಾಹಿ ವ್ಯವಸ್ಥೆ ಅತ್ಯಂತ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುವ ಮೂಲಕ ನಿರಂತರವಾಗಿ ಶೋಷಣೆ ಮಾಡುತ್ತಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಇಂದು ಸಂಘಟಿತರಾಗಬೇಕಾಗಿದೆ ಇಲ್ಲವಾದಲ್ಲಿ ತಮಗೆ ಸಿಗಬೇಕಾದ ಯಾವ ಸವಲತ್ತುಗಳು ದೊರೆಯದಂತಾಗುತ್ತವೆ ಎಂದು ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಎನ್. ರಾಮಚಂದ್ರ ಮಾತನಾಡಿ, ಕೈಗಾರಿಕೆಗಳಲ್ಲಿ ಕಡಿಮೆ ದುಡಿಮೆಯನ್ನು ನೀಡಿ ಹೆಚ್ಚಿನ ಸಮಯ ದುಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಜೀವಗಳಿಗೆ ಯಾವುದೇ ಭದ್ರತೆಗಳಿಲ್ಲದೆ ದುಡಿಯುವ ಸ್ಥಿತಿ ಇದ್ದು ಹೊರಗಡೆ ನಡೆಯವ ಘಟನೆಗಳು ಕೈಗಾರಿಕೆಗಳ ಒಳಗೆ ದುಡಿಯುವ ಕಾರ್ಮಿಕರಿಗೆ ಮಾಹಿತಿ ಇಲ್ಲದಂತಹ ವಾತವರಣ ಇದ್ದು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಕಾರ್ಮಿಕರು ಸಂಘಟಿತರಾಗಬೇಕಾಗಿದೆ ಎಂದರು. ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡಲಾಗುತ್ತಿರುವ ಕಿಟ್‍ಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಕಾರ್ಮಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ಶೈಕ್ಷಣಿಕ ಧನ ಸಹಾಯವನ್ನು ಮೂರು ವರ್ಷಗಳಿಂದ ನೀಡಿಲ್ಲ. ಕಾರ್ಮಿಕರಿಗೆ ನೀಡುವ ಆರೋಗ್ಯದ ಧನ ಸಹಾಯ ಸೇರಿದಂತೆ ವಿವಿಧ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು, ಕಾರ್ಮಿಕ ನಿರೀಕ್ಷಕರು ಮತ್ತು ಡಿ.ಓಗಳನ್ನು ಕಾರ್ಮಿಕರ ಪರಿಶೀಲನೆಗೆ ಬಳಸಿಕೊಳ್ಳುತ್ತಿರುವುದರಿಂದ ಕಾರ್ಮಿಕ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಇಲಾಖೆಗೆ ಬೇಕಾದ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷರಾದ ಟಿ. ದೇವರಾಜು ಮಾತನಾಡಿ ನೈಜ ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಬೇಕು, ಕಟ್ಟಡ ಕಾರ್ಮಿಕರಲ್ಲದವರನ್ನು ಗುರುತಿಸಿ ಅಂತಹ ಕಾರ್ಡ್‍ಗಳನ್ನು ರದ್ದುಪಡಿಸಬೇಕು ಎಂದರು. 24 ಜನ ಹಿರಿಯ ಕಾರ್ಮಿಕರು ಮತ್ತು ರಂಗ ಕಲಾವಿದರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಚಂದ್ರಪ್ಪ ಸ್ವಾಗತಿಸಿ, ಕಾವಲಪ್ಪ ವಂದಿಸಿ, ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.