ತುಮಕೂರು : ತಾವು ರಾಜಕಾರಣ ಪ್ರವೇಶಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಪ್ರೇರಣೆ, ಇಂದಿಗೂ ನಾನು ಅವರ ಅಭಿವೃದ್ಧಿಯ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇನೆ. ಅಜಾತಶತ್ರು ವಾಜಪೇಯಿ ಅವರು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಶ್ರೇಷ್ಠ ನಾಯಕ ಎಂದು ಶಾಸಕ ಬಿ.ಸುರೇಶ್ಗೌಡರು ಬಣ್ಣಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಬಾಣಾವರದ ಶಕ್ತಿಸೌಧದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಅಟಲ್ ಸ್ಮøತಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸುಭದ್ರ, ಸಮೃದ್ಧ ಭಾರತದ ಕನಸು ಕಂಡಿದ್ದ ಅಟಲ್ಜೀ ಅವರು ಸವರ್ಣ ಚತುಷ್ಪಥ ರಸ್ತೆ ಯೋಜನೆ ಮೂಲಕ ಹೆಬ್ಬಾರಿಗಳ ಅಭಿವೃದ್ಧಿಪಡಿಸಿ ದೇಶವನ್ನು ಒಗ್ಗೂಡಿಸಿದರು, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಯೋಜನೆ ಜಾರಿಗೆ ತಂದಿದ್ದರು, ಅವರ ದಾರಿಯಲ್ಲೇ ಸಾಗಿರುವ ತಾವು ಕ್ಷೇತ್ರದಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, 10-15 ವರ್ಷಗಳ ಹಿಂದೆ ನಿರ್ಮಿಸಿದ್ದ ರಸ್ತೆಗಳು ಈಗಲೂ ಸುಸಜ್ಜಿತವಾಗಿವೆ ಎಂದು ಹೇಳಿದರು.
ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರ ಸರ್ಕಾರ ದೇಶದ ಅಭಿವೃದ್ಧಿಗಾಗಿ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿತ್ತು. ಸರ್ವ ಶಿಕ್ಷಾ ಅಭಿಯಾನ ಮೂಲಕ 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಖಚಿತಪಡಿಸಿಕೊಳ್ಳಲು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ಕಾರ್ಯಕ್ರಮ ರೂಪಿಸಲಾಯಿತು. ನಗರ ಪ್ರದೇಶದ ಬಡವರಿಗೆ ವಸತಿ ಒದಗಿಸಲು ಸಹಾಯ ಮಾಡುವ ನಗರ ವಸತಿ ಯೋಜನೆ ಜಾರಿಗೆ ತಂದರು ಎಂದು ಹೇಳಿದ ಶಾಸಕ ಸುರೇಶ್ಗೌಡರು, ವಾಜಪೇಯಿ ಅವರು ಈ ದೇಶ ಕಂಡ ಶ್ರೇಷ್ಠ ನಾಯಕರು, ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಜನಸಂಘದಲ್ಲಿ ಸಕ್ರಿಯವಾಗಿದ್ದ ವಾಜಪೇಯಿ ಅವರು 1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗ ಪಕ್ಷದ ಮೊದಲ ಅಧ್ಯಕ್ಷರಾದರು. ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಬೆಳೆದು ಅಟಲ್ಜಿ ಪ್ರಧಾನಿಯಾದರು, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು.
ದೂರದೃಷ್ಠಿ ಚಿಂತಕರಾದ ನಾಯಕರಾದ ಅಟಲ್ಜಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಿದ್ದರು. ಆ ಸರ್ಕಾರದ ಯೋಜನೆಗಳು ಮಾದರಿಯಾಗಿ ಉಳಿದಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ದೇಶಾದ್ಯಂತ ಹೆದ್ದಾರಿಗಳನ್ನು ಸಂಪರ್ಕಿಸುವ ಮತ್ತು ಗ್ರಾಮೀಣ ಪ್ರದೇಶಗಳಿಗೆ ರಸ್ತೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗಳಾಗಿವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ವಾಜಪೇಯಿ ಅವರು ವಿಶ್ವ ಮೆಚ್ಚಿದ ನಾಯಕ, ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ವಿದೇಶಾಂಗ ಖಾತೆ ಸಚಿವರಾಗಿದ್ದ ವಾಜಪೇಯಿ ಅವರು ನೆರೆಯ ದೇಶಗಳೊಂದಿಗೆ ಭಾರತ ಸೌಹಾರ್ದ ಸಂಬಂಧ ಹೊಂದುವ ಆಶಯ ಹೊಂದಿದ್ದರು, ಆ ಸಂದರ್ಭದಲ್ಲಿ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದರು ಎಂದ ಅವರು, ಅಟಲ್ಜೀಯವರು ದೇಶದ ಅಭಿವೃದ್ಧಿ ಚಿಂತನೆಯ ಮಾದರಿ ನಾಯಕರಾಗಿದ್ದರು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದರು.
ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಗೂಳೂರು ಶಿವಕುಮಾರ್, ರಾಮಚಂದ್ರಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿ, ಗಂಗಾಂಜನೇಯ, ಹೊಳಕಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎ.ಆಂಜನಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಮುಖಂಡರಾದ ಸಿದ್ಧೇಗೌಡರು, ಶಂಕರಣ್ಣ, ವೈ.ಟಿ.ನಾಗರಾಜು, ಪ್ರಭಾಕರ್, ನಾಗರತ್ನಮ್ಮ, ರೇಣುಕಮ್ಮ, ಊರ್ಡಿಗೆರೆ ರವಿ, ಅಮೀದ್ ಖಾನ್, ಶಿವಕುಮಾರ್, ರಮೇಶ್, ಗಗನ್ ಮೊದಲಾದವರು ಭಾಗವಹಿಸಿದ್ದರು.