15,000 ಶಿಕ್ಷಕರ ನೇಮಕ-ದ್ವಿಭಾಷಾ ಶಾಲೆಗಳನ್ನು ತೆರೆಯಲಾಗುವುದು -ಸಚಿವ ಮಧುಬಂಗಾರಪ್ಪ

ತುಮಕೂರು : ಹೊಸದಾಗಿ 15000 ಶಾಲಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ದ್ವಿಭಾಷಾ ಶಾಲೆಗಳನ್ನು ತೆರೆಯಲಾಗುವುದು. ಈಗಿರುವ ಕನ್ನಡ ಮಾಧ್ಯಮದ ಶಾಲೆಗಳು ದ್ವಿಭಾಷಾ ಶಾಲೆಗಳನ್ನಾಗಿ ಮಾರ್ಪಡಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಯತಿ ಸಭಾಂಗಣದಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕೊರತೆ ನೀಗಿಸಲು ಹೊಸದಾಗಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ 13,500 ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದೆಯಲ್ಲದೆ ಹೊಸದಾಗಿ 15000 ಶಾಲಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎನ್. ಮಧು ಬಂಗಾರಪ್ಪ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಲವಾರು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ.  ಶಾಲೆಗಳಲ್ಲಿದ್ದ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ಲ್ಯಾಬ್‍ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

 
ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪುಸ್ತಕ, ಶೂ, ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆಯಲ್ಲದೆ  ಈಗಿರುವ ಶಾಲೆಗಳನ್ನು ಕೆಪಿಎನ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ತೋರುತ್ತಿದ್ದಾರೆ ಎಂದರು.

 
ಪ್ರಸಕ್ತ ವರ್ಷದಲ್ಲಿ ಪದವಿಪೂರ್ವ ಕಾಲೇಜುಗಳನ್ನೂ ಸಹ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಪದವಿಪೂರ್ವ ಕಾಲೇಜುಗಳಿಗೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮವಹಿಸಲಾಗುವುದೆಂದರು.


ಜಿಲ್ಲೆಯಲ್ಲಿ ಶತಮಾನ ಕಂಡ ಶಾಲೆಗಳನ್ನೂ ಸಹ ಅಭಿವೃದ್ಧಿಪಡಿಸಲಾಗುವುದು. ವಿಶೇಷ ಅನುದಾನದಡಿ ಶತಮಾನ ಕಂಡ ಶಾಲೆಗಳು ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಉಳಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

“ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಡಿ ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಹಲವಾರು ದಾನಿಗಳು ಆರ್ಥಿಕ ನೆರವು ನೀಡಲು ಮುಂದೆ ಬರುತ್ತಿದ್ದಾರೆ. ಶಾಲಾ ಪೀಠೋಪಕರಣ, ಲೇಖನ ಸಾಮಗ್ರಿ, ಸ್ಮಾರ್ಟ್ ತರಗತಿ ನಿರ್ಮಾಣಕ್ಕೆ ಸಹಾಯಹಸ್ತ ನೀಡುತ್ತಿದ್ದಾರೆ.  ಅಲ್ಲದೆ ಈ ಕಾರ್ಯಕ್ರಮಕ್ಕೆ ಸಿಎಸ್‍ಆರ್ ನಿಧಿಯಿಂದ 1591 ಕೋಟಿ ರೂ.ಗಳನ್ನು ಸದ್ವಿನಿಯೋಗಿಸಲಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳೂ ಸಹ ತಾವು ಓದಿದ ಶಾಲೆಗಳ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಲು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.


ಜಿಲ್ಲೆಯು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಹಿಂದುಳಿದಿದ್ದು, ಫಲಿತಾಂಶದ ಶೇಕಡಾ ಪ್ರಮಾಣವನ್ನು ಉನ್ನತ ಮಟ್ಟಕ್ಕೆ ಏರಿಸಲು ಶಿಕ್ಷಕರು, ಅಧಿಕಾರಿಗಳು ಶ್ರಮಿಸಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಶಾಲೆ ಹಾಗೂ ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿಸುವ, ಅನುಭವಾತ್ಮಕ ಕಲಿಕೆಗಾಗಿ ರೂಪಿಸಿರುವ ವಿನೂತನ ಕಾರ್ಯಕ್ರಮಗಳ ಮೂಲಕ ಜಿಲ್ಲೆಯು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಈ ಕಾರ್ಯಕ್ರಮಗಳನ್ನು ಇತರೆ ಜಿಲ್ಲೆಗಳಿಗೆ ವಿನೂತನ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುವುದೆಂದರು.

ಸಭೆಯಲ್ಲಿ ಶಾಸಕ ಸುರೇಶ್ ಗೌಡ, ಡಿಡಿಪಿಐಗಳಾದ ಮನಮೋಹನ ಹಾಗೂ ಗಿರಿಜಾ, ಡಯಟ್ ಪ್ರಾಂಶುಪಾಲ ಮಂಜುನಾಥ, ಡಿಡಿಪಿಯು ಬಾಲಗುರುಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *