ಶ್ರೀಸಾಮಾನ್ಯನನ್ನು ನಿಯಂತ್ರಿಸುತ್ತಿರುವುದು ಧರ್ಮ ಮತ್ತು ಅಧಿಕಾರ

ತುಮಕೂರು: ಇಂದು ನಾವು ಎದುರಿಸುತ್ತಿರುವ ಮತಾಂತರ, ಧಮಾರ್ಂತರ, ಲಿಂಗಾಂತರಗಳು ಹಿಂದಿನ ಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿದ್ದ ಸವಾಲುಗಳೇ ಆಗಿವೆ. ಪ್ರಾಚೀನ ಕನ್ನಡದ ಶಾಸನಗಳು, ಮಹಾಕಾವ್ಯಗಳು ಇದಕ್ಕೆ ಸಾಕ್ಷಿಗಳಾಗಿವೆ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ. ಲಲಿತಾಂಬ ತಿಳಿಸಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷ ಸಂಸ್ಥಾನಾ, ಮೈಸೂರು, ತುಮಕೂರು ವಿಶ್ವವಿದ್ಯಾನಿಲಯದ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ‘ಪ್ರಾಚೀನ ಹಾಗೂ ಮಧ್ಯಕಾಲೀನ ಕಾವ್ಯಗಳಲ್ಲಿ ಶ್ರೀಸಾಮಾನ್ಯ’ ವಿಷಯದ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಉಪನ್ಯಾಸಮಾಲೆಯಲ್ಲಿ ಮಾತನಾಡಿದರು.

12ನೇ ಶತಮಾನಕ್ಕಿಂತ ಹಿಂದೆ ಇದ್ದ ಧರ್ಮದ ಆಚರಣೆಯ ಸ್ವಾತಂತ್ರ್ಯ, ಮುಂದಿನ ಕಾಲದಲ್ಲಿ ಕಣ್ಮರೆಯಾಯಿತು. ವಚನ ಸಾಹಿತ್ಯದ ಕಾಲದಲ್ಲಿಯೂ ಧರ್ಮದ ನೆಲೆಯಲ್ಲಿ ಸಾಹಿತ್ಯ ರಚನೆಯಾಯಿತೇ ವಿನಾ ಶ್ರೀಸಾಮಾನ್ಯನ ಸಾಮಾಜಿಕ ಬದುಕು ಮುಖ್ಯವಾಗಲಿಲ್ಲ, ಇಂದಿಗೂ ಶ್ರೀಸಾಮಾನ್ಯನನ್ನು ನಿಯಂತ್ರಿಸುತ್ತಿರುವುದು ಧರ್ಮ ಮತ್ತು ಅಧಿಕಾರ ಎಂದರು.

ಹರಿಹರನ ರಗಳೆಗಳಲ್ಲಿ ಶಿವ ಭಕ್ತಿಯೇ ಶ್ರೇಷ್ಠವಾಗಿದೆ. ಆದರೆ ಶ್ರೀಸಾಮಾನ್ಯನ ಕೌಟುಂಬಿಕ ಬದುಕು ಹಾಗೂ ವೈಯಕ್ತಿಕ ಜೀವನ ಮುಖ್ಯವಾಗಿ ನಿಲ್ಲುವುದೇ ಇಲ್ಲ, ಭಕ್ತಿಯ ಹಿಂದಿನ ಬದುಕು ಕಣ್ಮರೆಯಾಗಿದೆ. 12ನೇ ಶತಮಾನದ ನಂತರ ಭಕ್ತಿಯ ಮುಖಾಂತರ ಧರ್ಮ ಶ್ರೀಸಾಮಾನ್ಯನ ಮನ ಮನೆಗಳನ್ನು ಆಕ್ರಮಿಸಿಕೊಂಡಿತು ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ ಮಾತನಾಡಿ, ಪ್ರಾಚೀನ ಕನ್ನಡ ಇತಿಹಾಸ ಉಲ್ಲೇಖವಿರುವುದು ಶಾಸನಗಳಲ್ಲಿ ಎಂಬುದು ಕನ್ನಡಿಗರಿಗೆ ಅರಿವಿರಲಿಲ್ಲ. ಅದನ್ನು ಆಧುನಿಕ ಪಾಶ್ಚಾತ್ಯ ವಿದ್ವಾಂಸರು ಮತ್ತು ಭಾರತೀಯ ಸಂಶೋಧಕರು ಬೆಳಕಿಗೆ ತಂದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡುವುದರಲ್ಲಿ ಪ್ರಾಚೀನ ಶಾಸನಗಳು ಮಹಾಕಾವ್ಯಗಳ ಮಹತ್ವದ ಜೊತೆಗೆ ಕನ್ನಡಿಗರ ಹೋರಾಟದ ಪಾತ್ರ ಪ್ರಮುಖವಾದದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಪ್ರಾಧ್ಯಾಪಕ ಡಾ.ಪಿ.ಎಂ ಗಂಗಾಧರಯ್ಯ, ಹಳೆಗನ್ನಡ ಕಾವ್ಯ ಮತ್ತು ಶಾಸನಗಳನ್ನು ಓದುವವರ ಸಂಖ್ಯೆ ಈಗ ಕಡಿಮೆಯಾಗಿದೆ. ವಿಭಾಗವು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯವಾದ ಶಾಸನಗಳ ಓದು ಹಾಗೂ ಮಹಾಕಾವ್ಯಗಳ ಸಮಗ್ರ ಅಧ್ಯಯನದ ಕುರಿತು ವಿಚಾರ ಕಮ್ಮಟಗಳನ್ನು ಆಯೋಜಿಸಲಿದೆ ಎಂದರು.

ಹಿರಿಯ ಪ್ರಾಧ್ಯಾಪಕ ಪೆÇ್ರ. ನಿತ್ಯಾನಂದ ಬಿ. ಶೆಟ್ಟಿ ಮತ್ತಿತತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *