ತುಮಕೂರು : ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿ ಗಣತಿ ನಡೆಸುತ್ತಿದ್ದು, ತಿಗಳ ಸಮಾಜವು ಕ್ರಮ ಸಂಖ್ಯೆ 9ರಲ್ಲಿ “ತಿಗಳ” ಎಂದು ಬರೆಸಬೇಕೆಂದು ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಎ.ಹೆಚ್.ಬಸವರಾಜು ತಿಳಿಸಿದರು.
ಅವರಿಂದು ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆಪ್ಟಂಬರ್ 22ರಿಂದ ನಡೆಯುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ತಿಗಳ ಸಮಾಜದ ಎಲ್ಲಾ ಜನರು ಭಾಗವಹಿಸಿ ಜಾತಿಯನ್ನು ಕ್ರಮ ಸಂಖ್ಯೆ 9ರಲ್ಲಿ “ತಿಗಳ” ಎಂದೇ ನಮೂದಿಸಬೇಕು, ಕ್ರಮ ಸಂಖ್ಯೆ 8ರಲ್ಲಿ ಹಿಂದು ಎಂದು ಧರ್ಮ ನಮೂದಿಸಲು ಹಾಗೂ ಕ್ರಮ ಸಂಖ್ಯೆ 10ರಲ್ಲಿ ಉಪಜಾತಿ ‘ಅಗ್ನಿವಂಶ ಕ್ಷತ್ರಿಯ’ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.
ಕ್ರಮ ಸಂಖ್ಯೆ 15ರಲ್ಲಿ ಮಾತೃ ಭಾಷೆ ಕನ್ನಡ ಎಂದು ಮತ್ತು ಕ್ರಮಸಂಖ್ಯೆ 28ರಲ್ಲಿ ಉದ್ಯೂಗ ಎಂಬುದಕ್ಕೆ ಕೃಷಿ ಸಾಗುವಳಿ ಅಥವಾ ತೋಟಗಾರಿಕೆ ಎಂದು ನಮೂದಿಸಿ, ಕ್ರಮ ಸಂಖ್ಯೆ 30ರಲ್ಲಿ ಕುಟುಂಬದ ಮೂಲ ಕಸುಬು “ಕೃಷಿ ಸಾಗುವಳಿ” ಎಂದು ಬರೆಸುವಂತೆ ಮನವಿ ಮಾಡಿದರು.
ಸಮೀಕ್ಷೆಯಲ್ಲಿ ಎಲ್ಲಾ ತಿಗಳ ಭಾಂದವರು ಭಾಗವಹಿಸುವಂತೆ ಅರಿವು ಮೂಡಿಸಲಾಗುವುದು, ಸಮೀಕ್ಷೆಯಲ್ಲಿ ‘ತಿಗಳ’ ಎಂದು ಬರೆಸಲು ರಾಜ್ಯ ಅಗ್ನಿವಂಶ ಕ್ಷತ್ರಿಯರ ನಾಲ್ಕುಕಟ್ಟೆ, ನಾಲ್ಕು ದೇಶ, ಎಂಬತ್ತು ಗಡಿ, ಹದಿನಾರು ಅಗ್ಗಡುಗಳ ಯಜಮಾನರು, ಅಣೇಕಾರರು, ಮುದ್ರೆಯವರು, ರಾಶಿ ಮುಖಂಡರು, ಎಲ್ಲಾ ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರುಗಳು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒಪ್ಪಿಗೆ ನೀಡಿರುವುದಾಗಿ ತಿಳಿಸಿದರು.
ತಿಗಳ ಕ್ರಿಶ್ಚಿಯನ್ ಎಂದು ಕಲಂ ಸೃಷ್ಠಿಸಿರುವುದನ್ನು ಖಂಡಿಸಿದ್ದು, ಇದನ್ನು ತೆಗೆಯುವಂತೆ ಅಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರವು ಕಳೆದ ಚುನಾವಣೆ ಸಂದರ್ಭದಲ್ಲಿ ತಿಗಳ ಜನಾಂಗಕ್ಕೆ 2 ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ತಿಳಿಸಿತ್ತು, ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ಈ ಬೇಡಿಕೆಯನ್ನು ಈಡೇರಿಸಿಲ್ಲ, ಜನಾಂಗಕ್ಕೆ ನಿಗಮ ಮಂಡಳಿಯಲ್ಲೂ ಅವಕಾಶ ನೀಡಿಲ್ಲ, ಜನಾಂಗದ ಹೆಸರಲ್ಲಿ ಸ್ಥಾಪಿಸಿರುವ ತಿಗಳ ಅಭಿವೃದ್ಧಿ ನಿಗಮಕ್ಕೆ, ಅನುದಾನವನ್ನೂ ನೀಡಿಲ್ಲ, ಅಧ್ಯಕ್ಷರನ್ನೂ ನೇಮಿಸಿಲ್ಲ, ಇದರ ಪರಿಣಾಮವನ್ನು ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಎದುರಿಸಲಿದೆ ಎಂದು ತಿಳಿಸಿದರು.
ಮುಖಂಡರಾದ ರೇವಣಸಿದ್ದಯ್ಯ ಮಾತನಾಡಿ, ತಿಗಳ ಎಂಬ ಪದ ಸರ್ವಜ್ಞನ ತ್ರಿಪದಿಗಳಲ್ಲಿ ಕಾಣಬಹುದಾಗಿದೆ.ಅಲ್ಲದೆ ರಾಜ. ಮಹಾರಾಜರು ಯುದ್ದದಲ್ಲಿ ಹೋರಾಡಲು ಕೊನೆಯ ಹಂತವಾಗಿ ತಿಗಳರಿಗೆ ವಿಳ್ಯ ಕಳುಹಿಸುತ್ತಿದ್ದ ಕಾಲವಿತ್ತು. ಹಾಗಾಗಿ ತಿಗಳರು ತಮ್ಮ ಜಾತಿ ಹೆಸರು ಹೇಳಲು ಹಿಂಜರಿಯುವ ಅಗತ್ಯವಿಲ್ಲ.ರಾಜ್ಯದಲ್ಲಿ ಸುಮಾರು 15-20 ಲಕ್ಷ ಜನಸಂಖ್ಯೆಯನ್ನು ತಿಗಳ ಸಮುದಾಯ ಹೊಂದಿದೆ. ಜಾತಿಗಣತಿಯಲ್ಲಿ ಸಿಗುವ ಅಂಕಿ ಅಂಶಗಳು ಸರಕಾರದ ಸವಲತ್ತುಗಳನ್ನು ಪಡೆದು ಅರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ,ಔದ್ಯೋಗಿಕವಾಗಿ ಮುಂದೆ ಬರಲು ಸಹಕಾರಿಯಾಗಲು ಸುವರ್ಣ ಅವಕಾಶವಾಗಿದೆ. ಹಾಗಾಗಿ ಸಮುದಾಯದ ಜನರು ತಮ್ಮ ಜಾತಿ ಕಲಂನಲ್ಲಿ ತಿಗಳ, ಉಪಜಾತಿ ಕಲಂನಲ್ಲಿ ಆಗ್ನಿವಂಶ ಕ್ಷತ್ರೀಯ ತಿಗಳ ಎಂದು ನಮೂದಿಸಬೇಕು. ಭಾಷೆಯ ಕಲಂನಲ್ಲಿ ಕನ್ನಡ, ವೃತ್ತಿ ಕಲಂನಲ್ಲಿ ವ್ಯವಸಾಯ ಎಂದು ನಮೂದಿಸಬೇಕೆಂದು ಮನವಿ ಮಾಡಿದರು
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಯೋಗನಂದಕುಮಾರ್ ಮಾತನಾಡಿದರು.
ಪತ್ರಿಕಾಗೋóಷ್ಠಿಯಲ್ಲಿ ಅಧ್ಯಕ್ಷರಾದ ಎಸ್.ಕೆ.ಸಿದ್ದಯ್ಯ, ಮಾಜಿ ನಗರಸಭಾ ಸದಸ್ಯರಾದ ರವೀಶ್ ಜಹಾಂಗೀರ್, ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ನರಸಿಂಹಮೂರ್ತಿ, ಹಿರಿಯರಾದ ಕುಂಭಣ್ಣ,ಲಕ್ಷ್ಮೀಶ್, ಕೃಷ್ಣಪ್ಪ,ಯಜಮಾನರಾದ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.