ತುಮಕೂರು:ಒಳಮೀಸಲಾತಿಗೆ ಸಂಬಂಧಿಸಿದಂತೆ ಎಂಪಾರಿಕಲ್ ಡೇಟಾ ಸಂಗ್ರಹಕ್ಕೆ ನ್ಯಾ.ನಾಗಮೋಹನ್‍ದಾಸ್ ಸಮಿತಿ ಶೀಘ್ರದಲ್ಲಿಯೇ ಸಮೀಕ್ಷೆ ಆರಂಭಿಸಲಿರುವ ಹಿನ್ನೆಲೆಯಲ್ಲಿ ಇಂದು ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರು ಸಭೆ ಸೇರಿ, ಸಮೀಕ್ಷೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.
ನ್ಯಾ.ನಾಗಮೋಹನ್ ದಾಸ್ ಸಮಿತಿಯ ಮಧ್ಯಂತರ ವರದಿಯ ಶಿಫಾರಸ್ಸಿನಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಹೊಸದಾಗಿ ಎಂಪಾರಿಕಲ್ ಡೇಟಾ ಸಂಗ್ರಹಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಮಾದಿಗ ಸಮುದಾಯದ ಮುಖಂಡರು, ಹೋರಾಟಗಾರರು,ಯುವಜನರು ಸಕ್ರಿಯವಾಗಿ ಪಾಲ್ಗೊಂಡು, ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಮೂಲಕ ಎಕೆ,ಎಡಿ,ಎಎ ಇರುವ ಕಲಂಗಳಲ್ಲಿ ಸಂಬಂಧಪಟ್ಟ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸುವ ಮೂಲಕ ಅಂತಿಮ ಹಂತದ ಹೋರಾಟವನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಿವೃತ್ತ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ,ಮಾದಿಗ ಸಮುದಾಯಕ್ಕೆ ಇದೊಂದು ಸುವರ್ಣ ಅವಕಾಶ ನ್ಯಾ.ನಾಗಮೋಹನದಾಸ್ ಸಮಿತಿ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಜಾತಿ, ಉಪಜಾತಿ ಸಮೀಕ್ಷೆ ನಡೆಸಿದ್ದಾರೆಯೇ ಇಲ್ಲವೇ ಎಂಬುದನ್ನು ಕಾವಲು ನಾಯಿಯಂತೆ ಕಾಯುವ ಕೆಲಸ ಮಾದಿಗ ಸಮುದಾಯದ ಮುಖಂಡರ ದ್ದಾಗಿದೆ.ಸಮೀಕ್ಷೆಯ ವೇಳೆ ಮಾದಿಗರ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ನಡೆಯಬಹುದು ಎಂಬ ಅನುಮಾನ, ಆಂತಕ ನಮ್ಮಲ್ಲಿದೆ.ಹಾಗಾಗಿ ಸಮೀಕ್ಷೆ ನಡೆಯುವ ಅಷ್ಟು ದಿನ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು.ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದ ಜನರು ತಮ್ಮ ಉಪಜಾತಿ ಕಲಂನಲ್ಲಿ ಮಾದಿಗ ಎಂದಷ್ಟೇ ನಮೂದಿಸಬೇಕು.ಅಲ್ಲದೆ ಪ್ರತಿ ಮನೆಯ ಯಜಮಾನನ ಸಹಿ ಇಲ್ಲವೇ,ಹೆಬ್ಬೆರಳಿನ ಅಚ್ಚು ಪಡೆಯುವಂತೆ ಸಮಿತಿಯ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು. ಇದನ್ನು ಕ್ರಾಸ್‍ಚೆಕ್ ಮಾಡುವ ಜವಾಬ್ದಾರಿಯನ್ನು ವಿದ್ಯಾವಂತ ಮಾದಿಗ ಯುವಜನರು ಹೊರಬೇಕೆಂದರು.
ಸಮೀಕ್ಷೆ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಹೆಸರಿನಲ್ಲಿ ಒಂದು ಲಕ್ಷ ಕರಪತ್ರ ಮುದ್ರಿಸಿ,ಸಮೀಕ್ಷೆಗೆ ಮನೆಯ ಬಳಿ ಅಧಿಕಾರಿಗಳು ಬಂದಾಗ ಯಾವ ರೀತಿ ನಡೆದುಕೊಳ್ಳಬೇಕು. ಯಾವ ಯಾವ ಕಲಂಗಳಲ್ಲಿ ಯಾವ ಮಾಹಿತಿ ತುಂಬಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು.ಈ ಕರಪತ್ರ ಜಿಲ್ಲೆಯ ಪ್ರತಿ ಮಾದಿಗ ಸಮುದಾಯದ ಮನೆಗೆ ತಲುಪುವಂತೆ ನೋಡಿಕೊಳ್ಳಬೇಕು.ಇದು ಪಕ್ಷಾತೀತ ಮತ್ತು ವ್ಯಕ್ತಿ ಕೇಂದ್ರಿತವಲ್ಲದ ಆಂದೋಲನವಾಗಬೇಕು.ಹಾಗಾಗಿ ಯುವಜನರು ಹೆಚ್ಚು ಸಕ್ರಿಯವಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಮುಖಂಡರಾದ ಕೇಶವಮೂರ್ತಿ ಮಾತನಾಡಿ,ಒಳಮೀಸಲಾತಿಗೆ ಸಂಬಂಧಿಸಿದಂತೆ 3 ದಶಕಗಳ ಹೋರಾಟ ಒಂದೆಡೆ ಯಾದರೆ, ಸಮೀಕ್ಷೆ 10 ದಿನಗಳು ಮಾದಿಗ ಸಮುದಾಯದ ಪಾಲಿಗೆ ಒಂದು ಹೋರಾಟವೇ ಆಗಿದೆ. .ಬೋವಿ, ಲಂಬಾಣಿ, ಕೊರಮ, ಕೊರಚರು ಈಗಾಗಲೇ ನಿಗಮಗಳ ಮೂಲಕ ತಮ್ಮ ಅಂಕಿ ಅಂಶಗಳನ್ನು ಇಟ್ಟುಕೊಂಡಿದ್ದಾರೆ.ನಾವು ಸ್ವಲ್ಪ ತಡವಾಗಿ ಆರಂಭಿಸುತಿದ್ದೇವೆ. ಆದರೂ ಚಿಂತೆಯಿಲ್ಲ.ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿಗಳು,ಅರೆ ಅಲೆಮಾರಿಗಳು ಸೇರಿದಂತೆ 101 ಜಾತಿಗಳ ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿ,ಮಾದಿಗರಿಗೆ ಮೊದಲ ಅದ್ಯತೆ ನೀಡಿ ಎಂದರು.
ಹಿರಿಯರಾದ ಕೆ.ದೊರೆರಾಜು ಮಾತನಾಡಿ,ಮಾದಿಗರು ತಮ್ಮ ನಿಖರವಾದ ಜನಸಂಖ್ಯೆಯನ್ನು ಸರಕಾರದ ಮುಂದಿಡಲು ಇದೊಂದು ಸುಸಮಯ.ಹಾಗಾಗಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು, ಸಮೀಕ್ಷೆಯನ್ನು ಯಶಸ್ವಿ ಮಾಡೋಣ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ,ಅದರ ಅಡಿಯಲ್ಲಿ ತಾಲೂಕು ಸಮಿತಿಗಳನ್ನು ಮಾಡಿ,ಯಾರೊಬ್ಬರು ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಎಚ್ಚರ ವಹಿಸಬೇಕಾಗಿದೆ.ಯಾರು ಸಹ ಅನ್ಯತಾ ಭಾವಿಸದೆ ತಮ್ಮ ವಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮೀಕ್ಷೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕು.ಆ ಮೂಲಕ ಸಮಾಜ ಕಟ್ಟುವ, ದೇಶ ಕಟ್ಟುವ ಕೆಲಸ ಮಾಡಬೇಕೆಂದರು.
ಸಭೆಯಲ್ಲಿ ಮುಖಂಡರಾದ ನರಸಿಂಹಯ್ಯ,ಪಿ.ಎನ್.ರಾಮಯ್ಯ,ಕೊಟ್ಟ ಶಂಕರ್,ಮಧುಗಿರಿ ನರಸಿಂಹಯ್ಯ,ಕೇಬಲ್ ರಘು,ಮೋಹನ್ ಕುಮಾರ್,ನರಸಿಂಹಮೂರ್ತಿ,ಕೆಂಪರಾಜು, ಕೊಡಿಯಾಲ ಮಹದೇವ್,ಗೂಳರಿಮೆ ನಾಗರಾಜು ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ವೇಳೆ ಬಾಬು ಜಗಜೀವನ್‍ರಾಂ ಪ್ರಶಸ್ತಿ ಪಡೆದ ಹಿರಿಯ ಚಿಂತಕ ಕೆ.ದೊರೆರಾಜು ಅವರನ್ನು ಅಭಿನಂದಿಸಲಾಯಿತು.