ತುಮಕೂರು:ರಾಜ್ಯದಲ್ಲಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿರುವ ಮಡಿವಾಳ ಸಮುದಾಯದ ಜನರು ಸೆಪ್ಟಂಬರ್ 22 ರಿಂದ ರಾಜ್ಯದಲ್ಲಿ ಆರಂಭವಾಗುವ ಜಾತಿಗಣತಿಯಲ್ಲಿ ಕಲಂ 9(ಎ)ನ 903 ಕ್ರಮ ಸಂಖ್ಯೆಯ ‘ಮಡಿವಾಳ’ ಹೆಸರನ್ನೇ ನಮೂದಿಸುವಂತೆ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರಾದ ಸಿ.ನಂಜಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಡಿವಾಳ ಸಮುದಾಯಕ್ಕೆ ಸೇರಿದ ಜನರು ತಮ್ಮ ಜಾತಿ ಮತ್ತು ಉಪಜಾತಿ ಎರಡು ಕಲಂಗಳಲ್ಲಿ ಮಡಿವಾಳ ಎಂದೇ ನಮೂದಿಸಬೇಕು.ಉಪಜಾತಿ ನಮೂದಿಸುವುದರಿಂದ ಜನಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.ಹಾಗಾಗಿ ಯಾವುದೇ ಉಪಜಾತಿ ನಮೂದಿಸಬಾರದು ಎಂದರು.
ರಾಜ್ಯದಲ್ಲಿ ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮಡಿವಾಳ ಸಮುದಾಯದಲ್ಲಿ ಓರ್ವ ಐಎಎಸ್ ಅಧಿಕಾರಿ ಮಾತ್ರ ಇದ್ದಾರೆ.ಸರಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾದರೆ ಮೀಸಲಾತಿ ಅತಿ ಅಗತ್ಯವಾಗಿದೆ.ಈಗಾಗಲೇ ಮೈಸೂರು ವಿವಿಯ ಪ್ರೊ.ಅನ್ನಪೂರ್ಣಮ್ಮ ವರದಿಯ ಶಿಫಾರಸ್ಸಿನಂತೆ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಯತ್ನ ನಿರಂತರವಾಗಿ ನಡೆದಿದ್ದರೂ,ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದೇ ಸಮುದಾಯದ ಹಿರಿಯ ಅಧಿಕಾರಿಗಳು ಇರುವ ಕಾರಣಕ್ಕೆ ನಮಗೆ ಅದ್ಯತೆ ನೀಡುತ್ತಿಲ್ಲ.ಈಗ ನಮ್ಮ ಜನಸಂಖ್ಯೆ ಒಗ್ಗೂಡಿದರೆ ಎಸ್.ಸಿ. ಜಾತಿ ಪಟ್ಟಿಗೆ ಸೇರಿಸಲು ಸರಕಾರದ ಮೇಲೆ ಒತ್ತಡ ಹಾಕಲು ಅನುಕೂಲವಾಗಲಿದೆ. ಹಾಗಾಗಿ ಎಲ್ಲರೂ ಜಾತಿ ಮತ್ತು ಉಪಜಾತಿ ಕಲಂನಲ್ಲಿ ಮಡಿವಾಳ ಎಂದೇ ಬರಬೇಕೆಂಬುದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಒಕ್ಕೊರಲ ತೀರ್ಮಾನವಾಗಿದೆ ಎಂದು ಸಿ.ನಂಜಪ್ಪ ತಿಳಿಸಿದರು.
ರಾಜ್ಯ ಸರಕಾರ ಹೊಸ ಜಾತಿ ಗಣತಿಯ ವೇಳೆ ಮಡಿವಾಳ ಕ್ರಿಶ್ಚಿಯನ್ ಎಂಬ ಹೊಸ ಜಾತಿಯನ್ನು ಹುಟ್ಟು ಹಾಕಿದೆ.ಈ ಹೆಸರಿನ ಜಾತಿ ನಮ್ಮಲ್ಲಿ ಇಲ್ಲ.ಆದರೂ ಮತಾಂತರಕ್ಕೆ ಅನುಕೂಲವಾಗಬೇಕು ಹಾಗೂ ಹಿಂದು ಮಡಿವಾಳರ ಸಂಖ್ಯೆ ಕಡಿಮೆ ಮಾಡಲು ಈ ರೀತಿಯ ಹುನ್ನಾರ ನಡೆಸಿದಂತಿದೆ.ಸರಕಾರ ಮಡಿವಾಳ ಕ್ರಿಶ್ಚಿಯನ್ನು ಜಾತಿಯನ್ನು ರದ್ದುಗೊಳಿಸಬೇಕು ಎಂದು ಈಗಾಗಲೇ ಮನವಿ ಸಲ್ಲಿಸಿದ್ದೇವೆ.ಅಲ್ಲದೆ ಹೈಕೋರ್ಟಿನಲ್ಲಿ ಪಿಎಎಲ್ ಸಹ ಹಾಕಲಾಗಿದೆ.ಉಪಜಾತಿಗಳ ಹೆಸರಿನಲ್ಲಿ ವಿಘಟನೆಯಾಗಲು ಮಡಿವಾಳ ಸಮುದಾಯ ಎಂದಿಗೂ ಅವಕಾಶ ಕಲ್ಪಿಸಬಾರದು.ಅಲ್ಲದೆ ಮಡಿವಾಳ ಲಿಂಗಾಯಿತ ಎಂಬ ಜಾತಿ ಸಹ ಉತ್ತರ ಕರ್ನಾಟಕ ಭಾಗದಲ್ಲಿ ಕಂಡು ಬರುತಿದ್ದು,ಆ ಭಾಗದ ಮಡಿವಾಳರು ಲಿಂಗಾಯಿತ ಹೆಸರನ್ನು ಬಿಟ್ಟು ಮಡಿವಾಳ ಎಂದು ಜಾತಿ ಮತ್ತು ಉಪಜಾತಿ ಕಲಂಗಳಲ್ಲಿ ನಮೂದಿಸುವಂತೆ ಸಿ.ನಂಜಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್,ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್,ಗೌರವಾಧ್ಯಕ್ಷ ಈರಣ್ಣ ಮಡಿವಾಳ,ಮಹಿಳಾ ಅಧ್ಯಕ್ಷರಾದ ಭವ್ಯ,ಉಪಾಧ್ಯಕ್ಷರಾದ ಆರ್.ವಿ.ರಾಜಣ್ಣ,ಕಾರ್ಯಾಧ್ಯಕ್ಷ ಸಿದ್ದಗಂಗಯ್ಯ,ಖಜಾಂಚಿ ಮಂಜುನಾಥ.ಆರ್., ನಿರ್ದೇಶಕರಾದ ವೆಂಕಟರಾಮು, ಮಧು, ಸಾಗರ್,ಶಾಂತಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.