ತುಮಕೂರು ರೈಲ್ವೇ ನಿಲ್ದಾಣಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರಿಡುವಂತೆ ಪ್ರಧಾನಿಗೆ ಮನವಿ

ತುಮಕೂರು : ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಅವರು ನವದೆಹಲಿಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅವರನ್ನು ಭೇಟಿ ಮಾಡಿ ತುಮಕೂರು ರೈಲ್ವೇ ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯ ಅಭಿವೃದ್ಧಿ ಕುರಿತು ವಿಶೇಷ ಪ್ರಸ್ತಾವನೆಯನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದ ಸರ್ವೋತೋಮುಖ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸಚಿವಾಲಯದಿಂದ 87 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಇಲಾಖೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಂತ ಸಹಕಾರ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಅಭಿನಂದನೆ ಸಲ್ಲಿಸಿ, ತುಮಕೂರು – ರಾಯದುರ್ಗ ಮತ್ತು ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೇ ಮಾರ್ಗವನ್ನು 2027ರ ಜೂನ್ ಮಾಹೆಯಲ್ಲಿ ಲೋಕಾರ್ಪಣೆ ಮಾಡಲು ತುಮಕೂರಿಗೆ ಆಗಮಿಸುವಂತೆ ಮತ್ತು ತುಮಕೂರು ರೈಲ್ವೇ ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ತುಮಕೂರು-ರಾಯದುರ್ಗ ರೈಲ್ವೇ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧಿನ ಪ್ರಕ್ರಿಯೆಯನ್ನು 3 ತಿಂಗಳಲ್ಲಿ ಶೇ.90ರಷ್ಟು ಪೂರ್ಣಗೊಳಿಸಿರುವ ಬಗ್ಗೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಕುರಿತು ಹಾಗೂ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಗೆ ಜಿಲ್ಲಾಡಳಿತ ಮತ್ತು ರೈಲ್ವೇ ಅಧಿಕಾರಿಗಳು ಉತ್ತಮ ಸಹಕಾರ ನೀಡುತ್ತಿರುವ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *