ಸಂಶೋಧನೆಯಲ್ಲಿ ಅನೈತಿಕತೆಯನ್ನು ಸಹಿಸುವುದಿಲ್ಲ: ಪ್ರೊ. ಎಂ. ವೆಂಕಟೇಶ್ವರಲು

ತುಮಕೂರು: ಸಂಶೋಧನಾ ಅವಧಿಯಲ್ಲಿ ಪ್ರಬಂಧಗಳ ಕೃತಿಚೌರ್ಯ, ಅಂತರ್ಜಾಲದ ಮಾಹಿತಿಯನ್ನು ನಕಲು ಮಾಡುವುದು, ಯುಜಿಸಿ ಮಾರ್ಗಸೂಚಿ ಮೀರಿ ದಂಡ ಪಾವತಿಸುವ ಮೂಲಕ ಪಿಎಚ್.ಡಿ ಅವಧಿಯನ್ನು ವಿಸ್ತರಿಸಿಕೊಳ್ಳುವ ಸಂಶೋಧನಾರ್ಥಿಗಳನ್ನು ವಿವಿಯು ಪ್ರೋತ್ಸಾಹಿಸುವುದಿಲ್ಲ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು.

ತುಮಕೂರು ವಿವಿಯು ಶನಿವಾರ ಆಯೋಜಿಸಿದ್ದ ಪಿಎಚ್.ಡಿ ಕೋರ್ಸ್‍ವರ್ಕ್ ಉದ್ಘಾಟನಾ ಸಮಾರಂಭದಲ್ಲಿ 2023-24ನೇ ಸಾಲಿನ ಪಿಎಚ್.ಡಿ ಪದವಿಗೆ ಪ್ರವೇಶ ಪಡೆದಿರುವ ಸಂಶೋಧನಾರ್ಥಿಗಳು ಮತ್ತು ಸಂಶೋಧನಾ ಮಾರ್ಗದರ್ಶಕರನ್ನು ಉದ್ದೇಶಿಸಿ ಮಾತನಾಡಿದರು.

ಭವಿಷ್ಯದ ಯೋಜನೆಯ ಅರಿವಿದ್ದು, ಮಾರ್ಗದರ್ಶಕರ ವಿಷಯ ಪರಿಣಿತಿಯನ್ನು ಗಮನದಲ್ಲಿರಿಸಿಕೊಂಡು ಸಂಶೋಧನೆಗೆ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಸಂಶೋಧನಾ ವಿಧಾನವನ್ನು ಕಲಿಯಲು ಪಿಎಚ್.ಡಿಯ ಮೊದಲ ಆರು ತಿಂಗಳು ಸಮಯವಿರುತ್ತದೆ. ಅಧ್ಯಯನಶೀಲರಾಗಿ ಮಾಹಿತಿ ಸಂಪಾದಿಸಬೇಕು ಎಂದರು.

ಆಧುನಿಕ ತಂತ್ರಜ್ಞಾನ ಬಳಕೆ, ದೀರ್ಘ ಅಧ್ಯಯನ, ಉಲ್ಲೇಖಗಳ ಸಂಪಾದನೆ, ಶಿಸ್ತು- ಇವೆಲ್ಲವೂ ಉತ್ತಮ, ಗುಣಮಟ್ಟದ ಸಂಶೋಧನೆಯನ್ನು ಹೊರತರಲು ಸಹಕಾರಿಯಾಗುತ್ತದೆ. ಆತ್ಮತೃಪ್ತಿ ನೀಡುವ ಸಂಶೋಧನೆ ಭವಿಷ್ಯವನ್ನು ಉಜ್ವಲವಾಗಿಸಲಿದೆ. ಮೂರು ವರ್ಷ ಅವಧಿಯಲ್ಲಿ ಪಿಎಚ್.ಡಿ ಮುಗಿಸಲು ಪ್ರಯತ್ನಿಸಿ ಎಂದರು.

ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಸಂಶೋಧನೆ ಜಾಗತಿಕ ಮಟ್ಟದಲ್ಲಿ ಹೆಸರಾಗಬೇಕು. ಕೇವಲ ಡಾಕ್ಟರೇಟ್ ಪದವಿಗಾಗಿ ಪಿಎಚ್.ಡಿ ಮಾಡಬಾರದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಆವಿಷ್ಕಾರಕ್ಕಾಗಿ ಸಂಶೋಧನೆ ಮಾಡಬೇಕು ಎಂದರು.

ತುಮಕೂರು ವಿ.ವಿ.ಯು ಹೊಸದಾಗಿ ಜಾರಿಗೆ ತಂದಿರುವ ಪಿಎಚ್.ಡಿ ತಂತ್ರಾಂಶದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಒಟ್ಟು 116 ಮಂದಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆ.

ಕಲಾ ನಿಕಾಯದ ಡೀನ್ ಪ್ರೊ. ಎಂ. ಕೊಟ್ರೇಶ್ ಮಾತನಾಡಿದರು. ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಸಂಶೋಧನಾ ನಿರ್ದೇಶಕ ಡಾ. ಡಿ. ಸುರೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *