ತುಮಕೂರು: ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರಕಟಿಸುವ ವೈಜ್ಞಾನಿಕ ಮತ್ತು ಸಂಶೋಧನಾ ನಿಯತಕಾಲಿಕೆಗಳು ಶೈಕ್ಷಣಿಕ ಜ್ಞಾನದ ಪ್ರಪಂಚಕ್ಕೆ ಕೊಡುಗೆ ನೀಡುತ್ತವೆಯಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಮಾರ್ಗದರ್ಶನ ಮತ್ತು ಸಂಶೋಧನೆಯಲ್ಲಿ ತೊಡಗಲು ಮಾರ್ಗದರ್ಶಿ ಕೈಪಿಡಿಗಳಾಗುತ್ತವೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಸವ್ಯಸಾಚಿ ಡಾ.ಜಿ ಪರಮೇಶ್ವರ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಠ್ಯ-ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ‘ಪರಂ-24’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಂಶೋಧನೆಗಳು ಪಠ್ಯಕ್ರಮದ ಸುಧಾರಣೆ ಮತ್ತು ಗಮನಾರ್ಹ ಪ್ರಗತಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತವೆ. ಕಲಿಯುವವರ ಅಗತ್ಯಗಳಿಗೆ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಹೆಚ್ಚಿನ ಜ್ಞಾನ, ಕೌಶಲ್ಯ ಮತ್ತು ತಿಳುವಳಿಕೆಯ ವೃತ್ತಿಪರ ಕಲಿಕೆಗೆ ಆಧಾರವಾಗುತ್ತವೆ ಎಂದರು.
ಸಂಶೋಧನೆಯ ಕ್ಷೇತ್ರದಲ್ಲಿ ಜ್ಞಾನದ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದ ಸಂಶೋಧನೆಗಾಗಿ ಆಲೋಚನೆಗಳನ್ನು ಇನ್ನಷ್ಟು ಸುಧಾರಿಸಲು ಬಳಸಬಹುದಾದ ಪಾಂಡಿತ್ಯಪೂರ್ಣ ಲೇಖನಗಳ ದೊಡ್ಡ ಸಂಗ್ರಹವನ್ನು ಕಾಲೇಜಿನ ಮಾಗ್‍ಜೀನ್ ನೀಡುತ್ತವೆ. ಈ ಶೈಕ್ಷಣಿಕ ನಿಯತಕಾಲಿಕಗಳು, ಪ್ರಾಧ್ಯಾಪಕರು-ಸಂಶೋಧಕರ ಮತ್ತು ವಿದ್ಯಾರ್ಥಿಗಳ ನಡುವೆ ಸಂವಹನವನ್ನು ಹೆಚ್ಚುಮಾಡುತ್ತವೆ. ಶೈಕ್ಷಣಿಕ ಕ್ಷೇತ್ರದ ಹತ್ತು-ಹಲವು ವಿಚಾರಗಳ ವಿಶ್ಲೇಷಣೆಗೆ ಆಧಾರವಾಗುತ್ತವೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಆಲೋಚನೆಗಳಿಗೆ ಸಹಕಾರಿಯಾಗುತ್ತವೆ ಎಂದು ಸಾಹೇ ಕುಲಾಧಿಪತಿಗಳಾದ ಡಾ.ಜಿ ಪರಮೇಶ್ವರ ಅವರು ನುಡಿದರು.
ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಲೇಖನಗಳು, ಶೈಕ್ಷಣಿಕ ಪ್ರಬಂಧಗಳು ಪ್ರಕಟವಾಗುವುದರಿಂದ ಸಂಶೋಧಕರ ಪಾತ್ರ ಮತ್ತು ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಹೆಚ್ಛಾಗುತ್ತದೆ. ಅಲ್ಲದೆ ವೃತ್ತಿಪರ ಅವಕಾಶಗಳನ್ನು ಉತ್ತೇಜಿಸುತ್ತವೆ. ಕಾಲೇಜುಗಳಲ್ಲಿ ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಉತ್ತಮ ಕೈಪಿಡಿಗಳಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಣವು ನಮ್ಮ ಜೀವನದಲ್ಲಿನ ಎಲ್ಲಾ ಸವಾಲುಗಳು, ಅನುಮಾನಗಳು ಮತ್ತು ಭಯಗಳನ್ನು ತೊಡೆದುಹಾಕಲು ಸಹಾಯ ಮಾಡುವ ಸಾಧನವಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮತ್ತು ಭವಿಷ್ಯದ ಸವಾಲುಗಳಿಗೆ ನಮ್ಮನ್ನು ರೂಪಿಸಲು ಮತ್ತು ವೃತ್ತಿಯನ್ನು ಕಂಡುಕೊಳ್ಳಲು ಸಂಶೋಧನಾ ಕ್ಷೇತ್ರದ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದು ಇಂದಿನ ಆದ್ಯತೆಯಾಗಬೇಕು. ಪ್ರಾಧ್ಯಾಪಕರು ಸಕ್ರೀಯವಾಗಿ ಸಂಶೋಧನೆಯಲ್ಲಿ ತೊಡಗುವುದರ ಜೊತೆಗ ವಿದ್ಯಾರ್ಥಿಗಳಲ್ಲಿ ಈ ಆಸಕ್ತಿಯನ್ನು ಬೆಳಸುವಂತೆ ಡಾ.ಜಿ.ಪರಮೇಶ್ವರÀ ಅವರು ಕರೆ ನೀಡಿದರು.
ಶೈಕ್ಷಣಿಕ ಬರಹಗಳು, ಪತ್ರಿಕೆಗಳು ಮತ್ತು ವಿಶೇಷ ನಿಯತಕಾಲಿಕೆಗಳು ಆರೋಗ್ಯಕರ ಆಹಾರದಂತೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ನಮ್ಮನ್ನು ಪೋಷಿಸುತ್ತದೆ ಮತ್ತು ಆಂತರಿಕವಾಗಿ ಸದೃಢಗೊಳಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮತ್ತು ನಮಗೆ ಜ್ಞಾನವನ್ನು ನೀಡುವ ಮೂಲಕ ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತವೆ. ಕೆಟ್ಟ ಅಭ್ಯಾಸಗಳು, ಬಡತನ, ಅಸಮಾನತೆ, ಲಿಂಗ ತಾರತಮ್ಯ ಮತ್ತು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ತೊಡೆದುಹಾಕಲು ಶೈಕ್ಷಣಿಕ ಪತ್ರಿಕೆಗಳಲ್ಲಿ ಬರಹಗಳ ವಿಚಾರ ಮಂಥನ ಸಾಧನಗಳಾಗುತ್ತವೆ ಎಂದು ಅವರು ಹೇಳಿದರು.
ವಾರ್ಷಿಕ ಶೈಕ್ಷಣಿಕ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ ವೀರಯ್ಯ, ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಮ್ಯಾಗ್‍ಜಿನ್ ಪ್ರಕಟಣೆಯ ಮೇಲ್ವಿಚಾರಕರಾದ ಎಂಸಿಎ ವಿಭಾಗ ಮುಖ್ಯಸ್ಥರಾದ ಪ್ರೊ.ಡಿ.ರಮೇಶ್, ಮೋಹನ್ ಕುಮಾರ್ ಟಿ.ಪಿ, ಸಂಚಿಕೆಯ ಸದಸ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡದ ಸದಸ್ಯರು ಹಾಜರಿದ್ದರು.