ಜನಪದರ ಸತ್ಯದ ಆಳವನ್ನು ಅರಿಯಲು ಸಂಶೋಧನೆಗಳಾಬೇಕು

ತುಮಕೂರು: ಜನಪದ ಇತಿಹಾಸದ ಮೇಲ್ಪದರವನ್ನಷ್ಟೇ ತಿಳಿದು ಸ್ವಂತ ಚಿಂತನೆಯ ನೆಲೆಯಿಲ್ಲದೆ ಮೂಢನಂಬಿಕೆಗಳ ನೆರಳಲ್ಲಿ ಈಗಲೂ ಸಮಾಜ ಬದುಕುತ್ತಿರುವುದು ವಿಪರ್ಯಾಸ. ಸತ್ಯದ ಆಳವನ್ನು ಅರಿಯಲು ಸಂಶೋಧನೆಗಳಾಬೇಕಿದೆ ಎಂದು ಮೈಸೂರು ವಿವಿಯ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ತಿಮ್ಮಯ್ಯ ಅಭಿಪ್ರಾಯಪಟ್ಟರು.

ತುಮಕೂರು ವಿವಿಯ ಶ್ರೀ ಜುಂಜಪ್ಪ ಅಧ್ಯಯನ ಪೀಠ ಹಾಗೂ ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗವು ಗುರುವಾರ ಆಯೋಜಿಸಿದ್ದ ‘ಜನಪದ ಮಹಾಕಾವ್ಯಗಳಲ್ಲಿ ಶೈವ ಪರಂಪರೆ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ವಿಶ್ವವಿದ್ಯಾನಿಲಯಗಳಲ್ಲಿರುವ ಹತ್ತಾರು ಅಧ್ಯಯನ ಪೀಠಗಳು ಅನುದಾನದ ಹಾಗೂ ಸೂಕ್ತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿವೆ. ಜನಪದ ಸಂಸ್ಕøತಿಯನ್ನು ಸೂಕ್ಷ್ಮ ಚಿಂತನೆಗೆ ಒಳಪಡಿಸಿ, ವೈಚಾರಿಕವಾಗಿ, ವೈಜ್ಞಾನಿಕವಾಗಿ, ತಾತ್ವಿಕ ನೆಲೆಗಟ್ಟಿನಲ್ಲಿ, ಬೌದ್ಧಿಕವಾಗಿ ಪರಂಪರೆಯ ಮೂಲ ಸ್ವರೂಪವನ್ನು ತಿಳಿಯಲು ಅಧ್ಯಯನ ಪೀಠಗಳು ಮುಂದಾಗಬೇಕು ಎಂದರು.

ವಿವಿಧ ಪಂಥಗಳ ವಿರುದ್ಧ ಹೋರಾಡಿದ ಜುಂಜಪ್ಪನ ಬದುಕಿನ ಹಿನ್ನಲೆಯನ್ನು ಸಾಂಕೇತಿಕ ಅರ್ಥದಲ್ಲಿ ಗ್ರಹಿಸಬೇಕು. ಜನಪದ ಕಾವ್ಯಗಳನ್ನು ಜನಸಾಮಾನ್ಯರು ಕಟ್ಟಿದರೆಂಬುದು ವಾಸ್ತವಕ್ಕೆ ದೂರವಾದ ಮಾತು. ಆಗಿನ ಕಾಲದ ಮಠ-ಮಂದಿರಗಳು ನೇಮಿಸಿದ ಕವಿಗಳಿಂದಾಗಿ ಜನಪದ ಕಾವ್ಯಗಳು ಹುಟ್ಟಿದವು. ಪಂಥಗಳು ತಮಗೆ ಅನುಕೂಲವಾಗುವಂತೆ ಕಾವ್ಯಗಳನ್ನು ರಚಿಸಿ ಜನರಿಗೆ ತಲುಪಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಸಚಿವೆ ನಾಹಿದಾ ಜûಮ್ ಜûಮ್, ಜನಪದ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ. ಜನಪದ ಕಾವ್ಯಗಳು, ಕಲಾವಿದರು ಮುಖ್ಯ ಭೂಮಿಕೆಯಿಂದ ಮರೆಯಾಗಿದ್ದಾರೆ. ಹಾಡಿನ ಜೀವ ತೆಗೆಯುವ ರ್ಯಾಪರ್‍ಗಳನ್ನು ಪೋಷಿಸುವ ಬದಲು ಪದಗಳಿಗೆ ಜೀವ ತುಂಬಿ ಕಾವ್ಯಗಳನ್ನು ಕಟ್ಟುವ ಜನಪದರನ್ನು ಪ್ರೋತ್ಸಾಹಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಕರ್ನಾಟಕದ ಸಂಸ್ಕøತಿಯನ್ನು ಪರಿಭಾವಿಸಿಕೊಂಡಿರುವ ಬುಡಕಟ್ಟಿನ ನಾಯಕ ಜುಂಜಪ್ಪ ಪಶುಪಾಲಕರ ಆರಾಧ್ಯ ದೈವ ಎಂದು ತಿಳಿಸಿದರು.

‘ಜನಪದ ಮಹಾಕಾವ್ಯಗಳಲ್ಲಿ ಶೈವ ಪರಂಪರೆ’ ವಿಷಯದ ಕುರಿತು ವಿಚಾರ ಗೋಷ್ಠಿಗಳು ನಡೆದವು. ಜಾನಪದ ವಿದ್ವಾಂಸ ಡಾ. ಜಿ. ವಿ. ಆನಂದಮೂರ್ತಿ, ವಿಮರ್ಶಕ ಡಾ. ಸುರೇಶ್ ನಾಗಲಮಡಿಕೆ ಹಾಗೂ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.

ವಿವಿಯ ಶ್ರೀ ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಡಾ. ಎಸ್. ಶಿವಣ್ಣ ಬೆಳವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಡಾ. ಎಚ್. ಆರ್. ರೇಣುಕಾ ನಿರೂಪಿಸಿದರು.

Leave a Reply

Your email address will not be published. Required fields are marked *