ಎಕ್ಸ್‍ಪ್ರೆಸ್ ಕೆನಾಲ್ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಣಯ

ತುಮಕೂರು: ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಮಾರಕವಾಗಲಿರುವ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧ ಜಿಲ್ಲೆಯಾದ್ಯಂತ ಜನರನ್ನು ಸಂಘಟಿಸಿ ಹೋರಾಟ ತೀವ್ರಗೊಳಿಸಲು ಹಾಗೂ ಇದರ ಜೊತೆಯಲ್ಲಿ ಕಾನೂನು ಹೋರಾಟ ಮಾಡಿ ಕೆನಾಲ್ ಕಾಮಗಾರಿಗೆ ತಡೆಯಾಜ್ಞೆ ತರುವ ಪ್ರಯತ್ನ ಮಾಡಲು ಸೋಮವಾರ ನಗರದಲ್ಲಿ ನಡೆದ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ಸಭೆ ನಿರ್ಣಯ ಮಾಡಿತು.

ವಿವಿಧ ಪಕ್ಷಗಳ ಮುಖಂಡರು, ರೈತಸಂಘ, ಹಲವು ಸಂಘಟನೆಗಳ ಪ್ರಮುಖರು ಸೇರಿದ್ದ ಸಭೆಯಲ್ಲಿ ಈ ತಿಂಗಳ 31ರಂದು ಲಿಂಕ್ ಕೆನಾಲ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಮುತ್ತಿಗೆ ಹಾಕುವ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ತೆವಡೆಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಕುಪ್ಪೂರು ಗದ್ದುಗೆ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್ ಸ್ವಾಮೀಜಿ ಭಾಗವಹಿಸಿದ್ದರು. ನಮ್ಮ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಉಳಿಸಿಕೊಳ್ಳಲು ಹೋರಾಟ ಸಮಿತಿ ರೂಪಿಸುವ ಯಾವುದೇ ರೀತಿಯ ಹೋರಾಟಕ್ಕೆ ಬೆಂಬಲ ನೀಡಿ ಭಾಗವಹಿಸುವುದಾಗಿ ಸ್ವಾಮೀಜಿಗಳು ಘೋಷಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪಾವಗಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳೂ ಹೇಮಾವತಿ ನೀರನ್ನು ಅವಲಂಬಿಸಿವೆ. ಹೇಮಾವತಿ ನೀರಿಲ್ಲದಿದ್ದರೆ ಬರಡು ಪ್ರದೇಶವಾಗುತ್ತಿತ್ತು. ಜಿಲ್ಲೆಯ ಪಾಲಿನ 19 ಟಿಎಂಸಿ ನೀರನ್ನು ಹೊರಗೆ ತೆಗೆದುಕೊಂಡು ಹೋಗಲು ಬಿಡಬಾರದು, ಅದಕ್ಕಾಗಿ ಯಾವ ರೀತಿಯ ಕಾನೂನು ಹೋರಾಟ ಮಾಡಬೇಕು, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದನ್ನು ಮಾಡಬೇಕು. ಈ ಹೋರಾಟಕ್ಕೆ ಪಕ್ಷಭೇದವಿಲ್ಲದೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಎಕ್ಸ್‍ಪ್ರೆಸ್ ಕೆನಾಲ್ ಮೂಲಕ ದಬ್ಬಾಳಿಕೆ ಮಾಡಿ ಮಾಗಡಿ, ರಾಮನಗರ ಕಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅವೈಜ್ಞಾನಿಕ ಕೆನಾಲ್ ಯೋಜನೆ ಕಾಮಗಾರಿಯನ್ನು ಸರ್ಕಾರ ಸ್ಥಗಿತಗೊಳಿಸಬೇಕು. ಇದರ ವಿರುದ್ಧ ಕಾನೂನು ಹೋರಾಟ, ಸಾಮಾಜಿಕ ಹೋರಾಟ ಮಾಡಿ ನಮ್ಮ ನೀರನ್ನು ನಾವು ಉಳಿಸಿಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರು ನಮ್ಮ ಹಕ್ಕು, ಇದನ್ನು ಕಸಿಯಲು ಬಿಡುವುದಿಲ್ಲ, ನೀರಿಗಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧವಾಗಬೇಕು. ಕಾನೂನು ಹೋರಾಟ ಮಾಡಿ, ಕಾಮಗಾರಿಗೆ ತಡೆ ತಂದು ನೀರನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಈ ಹೋರಾಟಕ್ಕೆ ಜಿಲ್ಲಾ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಹೋರಾಟದಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿಯವರನ್ನು ಕೋರುವುದಾಗಿ ಹೇಳಿದ ಅವರು, ಹೋರಾಟವನ್ನು ತೀವ್ರಗೊಳಿಸಲು ಪಕ್ಷದಿಂದ ಜನರ ಸಂಘಟನೆ ಮಾಡಲಾಗುತ್ತದೆ. ಇದೇ ವಿಚಾರವಾಗಿ ಈ ತಿಂಗಳ 28ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪಂಚಾಯತ್ ರಾಜ್ ಒಕ್ಕೂಟದ ರಾಜ್ಯಾಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಕುನಿಗಲ್ ಗೆ ನೀರು ತಲುಪುವುದಿಲ್ಲ ಎಂದು ಎಕ್ಸೆಪ್ರೆಸ್ ಲೈನ್ ಮಾಡುತ್ತಿರುವುದು ಪ್ರಯೋಜನವಿಲ್ಲ ಎಂದು ಸಲಹೆ ನೀಡಿದ ಇಂಜಿನಿಯರ್ ರವರೇ 2019ರಲ್ಲಿ ಹೇಮಾವತಿ ನಾಲೆಯನ್ನು ಅಗಲೀಕರಣ ಮತ್ತು ಆಧುನಿಕರಣದ ಮೂಲಕ ಕೆನಾಲ್ ಪಕ್ಕದಲ್ಲಿರುವ ಎಲ್ಲಾ ತಾಲ್ಲೂಕುಗಳಿಗೆ ಸಮಾನವಾಗಿ ನೀರು ಹಂಚ ಬಹುದು ಎಂದು ಹೇಳಿದ್ದರು, ಹಾಗಾದರೆ ನಾಲೆಯನ್ನು ಆಧುನಿಕರಣ ಮಾಡಿ ಸಾಧಿಸಿದ್ದೇನು.

ಕೃಷ್ಣ ಮೇಲ್ದಂಡೆ ನಾರಾಯಣಪುರ ಎಡದಂಡೆ ಕಾಲುವೆಯ ವಿತರಣೆ ನಾಲೆಗಳಿಗೆ ತೂಬುಗಳನ್ನು ಅಳವಡಿಸಿರುವಂತೆ ಸ್ಕಾಡ (ಕಂಪ್ಯೂಟರ್ ನಿಯಂತ್ರಿತ) ತೂಬುಗಳನ್ನು ಅಳವಡಿಸಿ, ನೀರನ್ನು ಸಮಾನವಾಗಿ ಹಂಚಿ ತೆಗೆದುಕೊಂಡು ಹೋಗಲಿ, ಎಕ್ಸ್ ಪ್ರೆಸ್ ಕೆನಾಲ್ ನ ಅವಶ್ಯಕತೆ ಇಲ್ಲ, ಸರ್ಕಾರದ ಹಣವು ಪೋಲು ಮತ್ತು ಜನಕ್ಕೂ ತೊಂದರೆಯಾಗುತ್ತಿದ್ದು, ಜನಾಭಿಪ್ರಾಯದ ಮುಂದೆ ಯಾರೂ ನಿಲ್ಲಲು ಆಗುವುದಿಲ್ಲ, ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಬೇಕು, ನಾಯಕರುಗಳು ಪ್ರಾಮಾಣಿಕವಾಗಿರಬೇಕು ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದರು.

ಬಿಜೆಪಿ ಮುಖಂಡ ದಿಲೀಪ್‍ಕುಮಾರ್ ಮಾತನಾಡಿ, ಲಿಂಕ್ ಕೆನಾಲ್ ವಿರುದ್ಧ ಕಾನೂನು ಹೋರಾಟ ಅನಿವಾರ್ಯ. ಇದರ ಜೊತೆಗೆ ಜಿಲ್ಲೆಯಲ್ಲಿ ತಾಲ್ಲೂಕು, ಹೋಬಳಿ, ಗ್ರಾಮಗಳ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಜನಜಾಗೃತಿಗೊಳಿಸಿ ಹೋರಾಟ ತೀವ್ರಗೊಳಿಸಬೇಕು ಎಂಬ ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೊಂವಿಂದರಾಜು ಮಾತನಾಡಿ, ಎಕ್ಸ್‍ಪ್ರೆಸ್ ಲಿಂಕ್ ವಿರುದ್ಧ ಹೋರಾಟ ಮಾಡಿ ನಮ್ಮ ನೀರನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಅವಶ್ಯಕತೆಯಿದೆ. ಕಾನೂನು ಹೋರಾಟವೂ ಅಗತ್ಯ ಎಂದು ಹೇಳಿದರು.

ಹೋರಾಟ ಸಮಿತಿ ಸಂಚಾಲಕ ಪ್ರಭಾಕರ್ ಮಾತನಾಡಿ, ಲಿಂಕ್ ಕೆನಾಲ್ ವಿರುದ್ಧ ಹಲವು ಹಂತದ ಹೋರಾಟಗಳಾಗಿವೆ. ಸರ್ಕಾರ ಪೊಲೀಸರನ್ನು ಬಳಿಸಿಕೊಂಡು ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಜಿಲ್ಲೆಯ ಜನರು ಸಂಘಟಿತರಾಗಿ ಹೋರಾಟಕ್ಕಿಳಿದರೆ ನಮ್ಮ ನೀರಿನ ಹಕ್ಕನ್ನು ಪಡೆಯಬಹುದು ಎಂದರು.

ಗುಬ್ಬಿಯ ಜೆಡಿಎಸ್ ಮುಖಂಡ ನಾಗರಾಜು, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದರಾಮಣ್ಣ, ವಕೀಲ ಶಿವಕುಮಾರ್, ಮುಖಂಡರಾದ ವೆಂಕಟೇಗೌಡ, ಭೈರಪ್ಪ, ಪಂಚಾಕ್ಷರಯ್ಯ, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *