ಹೊಸ ವರ್ಷಾಚರಣೆ ತಣ್ಣೀರೆರಚಿದ ಪ್ರವಾಸ ತಾಣಗಳ ನಿರ್ಬಂಧ:ವನ್ಯಜೀವಿಗಳಿಗೂ ಪ್ರಶಾಂತತೆ ಬೇಕಿದೆ

ತುಮಕೂರು : ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಆಚರಿಸಬೇಕೆಂದುಕೊಂಡವರಿಗೆ ಪ್ರವಾಸ ತಾಣಗಳಿಗೆ ನಿರ್ಬಂಧ ಹೇರಿದ್ದರಿಂದ ಹೊಸ ವರ್ಷ ಆಚರಣೆಗೆ ತಣ್ಣಿರು ಎರಚಿದಂತಾಗಿದೆ, ನಿರ್ಬಂಧ ಏಕೆಂದರೆ ಕಾನೂನು ಬಾಹಿರ ಚಟುವಟಿಕೆ, ಪ್ಲಾಸ್ಟಿಕ್ ಬಳಕೆ, ವನ್ಯ ಜೀವಿಗಳಿಗೂ ಪ್ರಶಾಂತತೆ ಮತ್ತು ಅವು ಯಾವುದೇ ಭಯವಿಲ್ಲದೆ ನಿತ್ಯ ಆಹಾರ, ನೀರಿಗಾಗಿ ರಾತ್ರಿಯ ವೇಳೆಯಲ್ಲಿ ಸಂಚರಿಸುವುದರಿಂದ ವನ್ಯ ಜೀವಿಗಳಿಗೆ ತೊಂದರೆಯಾಗಬಾರದು ಎಂಬ ಹಿನ್ನಲೆಯಲ್ಲಿ ಈ ನಿಷೇಧ ಹೇರಲಾಗಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಬೆಳಿಗ್ಗೆ 8 ಗಂಟೆಯಿಂದ 2024ರ ಜನವರಿ 2ರ ಬೆಳಿಗ್ಗೆ 8 ಗಂಟೆಯವರೆಗೆ ಕ್ಯಾತ್ಸಂದ್ರ ಠಾಣೆ ಸರಹದ್ದು, ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಪ್ರದೇಶಗಳಿಗೆ ಸಾರ್ವಜನಿಕರು-ಪ್ರವಾಸಿಗರು ಹಾಗೂ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.

ಕ್ಯಾತ್ಸಂದ್ರ ಠಾಣೆ ಸರಹದ್ದು, ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಬೆಟ್ಟಕ್ಕೆ 2024ರ ಹೊಸ ವರ್ಷಾಚರಣೆ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು/ಪ್ರವಾಸಿಗರು ಭೇಟಿ ನೀಡಲಿದ್ದು, ಸಂಭ್ರಮಾಚರಣೆ ಸಮಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಂಭವಗಳು ಇರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ಸಾರ್ವಜನಿಕರು ಮದ್ಯಪಾನ ಮಾಡಿ ಹಾಗೂ ಜಾಲಿರೈಡ್ ನೆಪದಲ್ಲಿ ವಾಹನಗಳನ್ನು ಚಾಲನೆ ಮಾಡುವುದರಿಂದ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸುವ ಹಾಗೂ  ಈ ಪ್ರದೇಶಗಳು ಸುರಕ್ಷಿತ ಅರಣ್ಯ ಆವೃತ ಪ್ರದೇಶಗಳಾಗಿದ್ದು, ಪ್ರವಾಸಿಗರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ.  

ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಾಮದ ಚಿಲುಮೆ, ಬಸದಿ ಬೆಟ್ಟ, ದೇವರಾಯನದುರ್ಗ ಪ್ರದೇಶಗಳಿಗೆ ಸಾರ್ವಜನಿಕರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಗುಂಪು ಘರ್ಷಣೆಗಳಾಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವವಿರುವುದರಿಂದ ಈ ನಿರ್ಬಂಧವನ್ನು ಹೇರಲಾಗಿದೆ. ಆದರೆ ನಿರ್ಬಂಧಿತ ಅವಧಿಯಲ್ಲಿ ಮೇಲ್ಕಾಣಿಸಿದ ಮಾರ್ಗವಾಗಿ ದೈನಂದಿನ ಚಟುವಟಿಕೆಗಳಿಗೆ ತೆರಳುವ ಸ್ಥಳೀಯರು ಸದರಿ ಮಾರ್ಗ ಮಧ್ಯೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ತೆರಳಲು ಅನುಮತಿ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮವಹಿಸಲು ಅವರು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *