ತುಮಕೂರು: ಜಿಲ್ಲೆಯ ಕಂದಾಯ ಇಲಾಖೆ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಗಳನ್ನು ವಿವಿಧ ಸಮಯಗಳಲ್ಲಿ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿ, ಸಮಯ ನಿಗಧಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ ನೇತೃತ್ವದಲ್ಲಿ ಶುಕ್ರವಾರ ವಕೀಲರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಕಂದಾಯ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಗೆ ವಿವಿಧ ಸಮಯಗಳನ್ನು ನಿಗಧಿ ಮಾಡುತ್ತಿರುವುದರಿಂದ ವಕೀಲರು ಪ್ರಕರಣಗಳಲ್ಲಿ ಭಾಗಿಯಾಗಲು ಸಮಸ್ಯೆಯಾಗುತ್ತಿದೆ. ಹೀಗಾಗಿ, ಮಧ್ಯಾಹ್ನ 3 ಗಂಟೆಗೆ ಪ್ರಕರಣಗಳ ವಿಚಾರಣೆಗೆ ಸಮಯ ನಿಗಧಿ ಮಾಡಲು ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆಗಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ತೆಗೆದುಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಕಂದಾಯ ಇಲಾಖೆ ನ್ಯಾಯಾಲಯಗಳಿಗೆ ಲಿಖಿತ ರೂಪದಲ್ಲಿ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಕರಣಗಳ ವಿಚಾರಣೆಯನ್ನು ಮುಂದೂಡುವುದಾದರೆ ಒಂದು ದಿನ ಮುಂಚಿತವಾಗಿ ತಿಳಿಸಲು ಮತ್ತು ಪ್ರಕರಣಗಳ ಪಟ್ಟಿಯನ್ನು ಮಧ್ಯಾಹ್ನ 12 ಗಂಟೆಯೊಳಗೆ ಪ್ರಚಾರಪಡಿಸುವಂತೆ ಹಿರೇಹಳ್ಳಿ ಮಹೇಶ್ ಅವರು ಅಪರ ಜಿಲ್ಲಾಧಿಕಾರಿಗಳನ್ನು ಕೋರಿದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಖಜಾಂಚಿ ಬಿ.ಎಂ.ಸಿಂಧು, ಸಂಘದ ಸದಸ್ಯರು ಹಾಗೂ ವಕೀಲರು ಹಾಜರಿದ್ದರು.