ತುಮಕೂರು : ಕುಣಿಗಲ್ ಗೆ ನೀರು ತೆಗೆದುಕೊಂಡು ಹೋಗುವ ನೆಪದಲ್ಲಿ ನಡೆಯುತ್ತಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಸಾವಿರಾರು ಜನರು ಸಾಗರದಂತೆ ಸೇರಿ ಕೆನಾಲ್‍ಗೆ ಮಣ್ಣು ಸುರಿದು ತೀವ್ರ ಪ್ರತಿಭಟಿಸಿದರು, ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾಯಿತು.
ಗುಬ್ಬಿ ತಾಲ್ಲೂಕು ಸುಂಕಪುರದ ಬಳಿ ನಡೆಯುತ್ತಿದ್ದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕರೆ ಕೊಡಲಾಗಿದ್ದ ಪ್ರತಿಭಟನೆಗೆ ಸ್ವಯಂ ಪ್ರೇರಿತರಾಗಿ ಸುಮಾರು 12ರಿಂದ 15 ಸಾವಿರ ಜನ ಸಾಗರದಂತೆ ಬಂದು ಪ್ರತಿಭಟನೆ ನಡೆಸಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿದರು.
ತಾಲ್ಲೂಕು ಆಡಳಿತವು ಒಂದು ಐನೂರು ಜನ ಬರಬಹುದೆಂದು ಕಾಮಗಾರಿ ನಡೆಯುವ ಸ್ಥಳದ ಸುತ್ತಮುತ್ತ 144 ಸೆಕ್ಷನ್ ನಿಷೇಧಾಷ್ಣೆಯನ್ನು ಜಾರಿ ಮಾಡಿತ್ತು. ಯಾವ ನಿಷೇಧಾಷ್ಣೆಯನ್ನು ಲೆಕ್ಕಿಸದ ರೊಚ್ಚಿಗೆದ್ದ ಜನಸ್ತೋಮ, ಜನಪ್ರತಿನಿಧಿಗಳನ್ನೂ ಲೆಕ್ಕಿಸದೆ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಇರುವೆಯಂತೆ ಮುತ್ತಿಗೆ ಹಾಕ ತೊಡಗಿದ್ದನ್ನು ಕಂಡ ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತರು.
ಒಂದು ಹಂತದಲ್ಲಿ ಜೆಸಿಬಿ ಮೂಲಕ ನಾಲೆಗೆ ಮಣ್ಣನ್ನು ಸಾಂಕೇತಿಕವಾಗಿ ಹಾಕುವಂತೆ ಡಿವೈಎಸ್‍ಪಿ ಸೂಚಿಸಿದ್ದನ್ನು ತಿಳಿಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಡೆಯಲು ಬಂದಾಗ ಗುಂಪಿನಲ್ಲಿದ್ದವರೊಬ್ಬರು ಮಣ್ಣಿನ ಉಂಡೆಯನ್ನು ಎಸ್.ಪಿ.ಯವರ ಮೇಲೆ ಎಸೆದು ಪ್ರತಿಭಟಿಸಿದರು.
ಬೆಳಿಗ್ಗೆ 9ಗಂಟೆಯಿಂದಲೇ ಜನ ನಿಟ್ಟೂರು ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸೇರ ತೊಡಗಿದರು. ಮಧ್ಯಾಹ್ನ 12ರ ವೇಳೆಗೆ ಮೂಲೆ ಮೂಲೆಗೂ ಇರುವೆ ಸಾಲಿನಂತೆ ರೈತರು ಸೇರತೊಡಗಿದರು, ಹೇದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನ, ಬಸ್ಸುಗಳನ್ನು ತಡೆದ ಪ್ರತಿಭಟನಾಕಾರರು ಒಂದು ಹಂತದಲ್ಲಿ ರಸ್ತೆಯಲ್ಲಿ ಟೈರ್ ಸುಟ್ಟು, ರಸ್ತೆಗೆ ಮಣ್ಣು ಸುರಿದು ವಾಹನಗಳು ಸಂಚರಿಸದಂತೆ ತಡೆ ಹಿಡಿಯಲಾಯಿತು.

ಇಷ್ಟೆಲ್ಲಾ ಆಗುವ ವೇಳೆಗೆ ಜನರು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದ್ದ ಸುಂಕಪುರದ ಕಡೆಗೆ ನುಗ್ಗತೊಡಗಿತು, ಇಲ್ಲಿ ಯಾವ ಪೊಲೀಸ್ ಕೂಡ ಅವರನ್ನು ತಡೆಯುವುದಾಗಲಿ, ನಿಲ್ಲಿಸುವುದಾಗಲಿ ಮಾಡಲು ಸಾಧ್ಯವಿಲ್ಲದಷ್ಟು ಜನ ಇರುವೆಯಂತೆ ನಾಲೆಯ ಎರಡೂ ಬದಿಗಳಲ್ಲಿ ಜಮಾಯಿಸಿ ಬಿಟ್ಟರು.
ಕೆಲ ಜೆಸಿಬಿಗಳನ್ನು ತಂದು ಎಕ್ಸ್ ಪ್ರೆಸ್ ಕೆನಾಲ್ ಗೆ ಮಣ್ಣು ಸುರಿಯಲಾಯಿತು, ನಾಲೆಯ ಪಕ್ಕದಲ್ಲಿ ಹಾಕಲು ತರಲಾಗಿದ್ದ ಕಬ್ಬಿಣದ ಪೈಪುಗಳನ್ನು ನಾಲೆಗೆ ನೂಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಪ್ರತಿಭಟನಕಾರರು, ಮತ್ತೇನಾದರೂ ಕಾಮಗಾರಿ ಪ್ರಾರಂಭಿಸಿದಲ್ಲಿ ಮಹಿಳೆಯರು, ಮಕ್ಕಳೊಂದಿಗೂ ಬಂದು ಪ್ರತಿಭಟನೆ ಮಾಡುವುದಲ್ಲದೆ, ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಆಗುವುದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಇಂದು ಬಂದಿದ್ದ ಪ್ರತಿಭಟನಕಾರರು ಸರ್ಕಾರಕ್ಕೆ ಎಚ್ಚರಿಸಿದರು.
ಬಂಧನಕ್ಕೆ ಒಳಗಾದವರಂತೆ ಬಸ್ಸೇರಿದ ಜನಪ್ರತಿನಿಧಿಗಳನ್ನು ಕೆಳಗಿಳಿಸಿದ ಪ್ರತಿಭಟನಾಕಾರರು: ವೀರವೇಷದ ಭಾಷಣ ಮಾಡಿ ನಾಯಕರು ಎಂದೆನಿಸಿಕೊಂಡು, ಕೊನೆಗೆ ಪೊಲೀಸರು ಬಂಧಿಸಿದಾಗ ಉಷಾರಾಗಿ ಕಾಲುಕೀಳಬೇಕೆಂದುಕೊಂಡು ಹೋಗಿದ್ದ ಜನಪ್ರತಿನಿಧಿಗಳಿಗೆ ಇಂದು ಪ್ರತಿಭಟನಾಕಾರರು ಬಿಸಿ ಮುಟ್ಟಿಸಿದರು.
ಶಾಸಕರುಗಳಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್ ಭಾಷಣ ಮಾಡಿದ ನಂತರ ಪೊಲೀಸರು ಅವರನ್ನು ಬಂಧಿಸಿದಂತೆ ಬಸ್ಸೊಳಗೆ ಕೂರಿಸಿದರು, ಇದನ್ನು ಕಂಡ ಪ್ರತಿಭಟನಾಕಾರರು, ಇಡೀ ಬಸ್ಸನೇ ತಮ್ಮ ವಶಕ್ಕೆ ಪಡೆದು ಬಸ್ಸನ್ನು ಉರುಳಿಸುವಂತೆ ಅಲುಗಾಡಿಸಿದಾಗ, ಬಂಧನಕ್ಕೊಳಗಾದಂತೆ ತೋರಿಸಿಕೊಂಡು ಕಾಲು ಕೀಳಲು ಪ್ರಯತ್ನಿಸುತ್ತಿದ್ದ ಜನಪ್ರತಿನಿಧಿಗಳು ಅನಿವಾರ್ಯವಾಗಿ ಪ್ರತಿಭಟನಾಕಾರರೊಂದಿಗೆ ಕಾಮಗಾರಿ ನಡೆಯುತ್ತಿದ್ದ ಸುಂಕಪುರದತ್ತ ನಡೆದರು.
ಪ್ರತಿಭಟನೆಗೆ ಬಂದ್ದಿದ್ದ ಜನರು ಯಾವ ಜನಪ್ರತಿನಿಧಿಗಳು ನಮಗೆ ನಾಯಕರಲ್ಲ, ನಮಗೆ ನಾವೇ ನಾಯಕರು, ಜನಪ್ರತಿನಿಧಿಗಳು ಇಂದಲ್ಲ ನಾಳೆ ನಾಲೆ ಕಾಮಗಾರಿಗೆ Pಅನುಮತಿ ಕೊಡುವವರೆ ಆದ್ದರಿಂದ ಇದೊಂದು ರೈತರ, ಜನರ ಪ್ರತಿಭಟನೆ ಎಂದು ಹೇಳಿದರಲ್ಲದೆ, ನಮಗೆ ನಾವೆ ನಾಯಕರುಗಳು ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು, ಇಂದಿನ ಪ್ರತಿಭಟನೆ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಪ್ರತಿಭಟನೆಯಾಗಿದ್ದು, ಮತ್ತೆ ಕಾಮಗಾರಿ ಪ್ರಾರಂಭಿಸಿದಲ್ಲಿ ಪ್ರಾಣವನ್ನು ಒತ್ತೆಯಿಟ್ಟಾದರೂ ಕಾಮಗಾರಿ ನಿಲ್ಲಿಸುವುದಾಗಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯನ್ನು ತಡೆಯಲು 800ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿತ್ತು, ಹತ್ತು ಸಾವಿರಕ್ಕೂ ಹೆಚ್ಚು ಜನಸಾಗರ ಹರಿದು ಬಂದಿದ್ದನ್ನು ಕಂಡ ಪೊಲೀಸರು ಏನು ಮಾಡಲು ಆಗದಂತಹ ಸ್ಥಿತಿಯಲ್ಲಿ ನಿಂತಿದ್ದು ಕಂಡು ಬಂದಿತು, ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸಹ ಏನೋ ಮಾಡಲು ಹೋಗಿ ಜನರನ್ನು ಕೆಣಕಿದರೆ ಆಗಬಾರದ ಅನಾಹುತವಾಗಬಹುದೆಂದು ಅರಿತು ರೈತರನ್ನು ಅವರ ಪಾಡಿಗೆ ಅವರು ಪ್ರತಿಭಟನೆ ಮಾಡಿಕೊಳ್ಳುವಂತೆ ನೋಡಿಕೊಂಡರು.
ಯಾವುದೇ ಯೋಜನೆ ಜನಪರವಿಲ್ಲದಿದ್ದರೆ, ಜನರ ಬೆಂಬಲವಿಲ್ಲದಿದ್ದರೆ, ಜನಾಭಿಪ್ರಾಯಕ್ಕೆ ಮನ್ನಣೆ ಸಿಗದಿದ್ದರೆ ಜನರೇ ಅದನ್ನು ವಿರೋಧಿಸಿ, ಪ್ರತಿಭಟಿಸಿ ನಿಲ್ಲಿಸುತ್ತಾರೆ ಎಂಬುದಕ್ಕೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಜನ ರೊಚ್ಚಿಗೆದ್ದಿರುವುದೇ ಉದಾಹರಣೆ.
ಪ್ರತಿಭಟನೆಯಲ್ಲಿ ಕೆಲ ಸ್ವಾಮೀಜಿಗಳು, ಶಾಸಕರಾದ ಬಿ.ಸುರೇಶಗೌಡ, ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಬಿಜೆಪಿ ಮುಖಂಡ ದಿಲೀಪ್‍ಕುಮಾರ್, ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಎ.ಗೋವಿಂದರಾಜು, ಪಂಚಾಯತ್ ರಾಜ್ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.