
ತುಮಕೂರು:ಸರಕಾರ ಆರ್.ಟಿ.ಇ ಅಡಿಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳಿಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು,ಅನುದಾನವನ್ನು ಹೆಚ್ಚಿಸಬೇಕು, ಹಾಗೆಯೇ ಬಡ ಮಕ್ಕಳ ಹಿತದೃಷ್ಟಿಯಿಂದ ಆರ್.ಟಿ.ಇ ಯೋಜನೆಯನ್ನು ಜಾರಿಗೆ ತರಬೇಕೆಂದು ರೂಪ್ಸಾ ರಾಜ್ಯಾಧ್ಯಕ್ಷ ಡಾ.ಹಾಲನೂರು ಲೇಪಾಕ್ಷ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಆರ್.ಟಿ.ಇ ಅಡಿಯಲ್ಲಿ ಖಾಸಗಿ ಅನುಧಾನರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ವರ್ಗದ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಶೇ30ರಷ್ಟು ಅನುದಾನ ಇದುವರೆಗೂ ಬಂದಿಲ್ಲ.ಜೊತೆಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿದ್ದರೂ ಸಹ ಸರಕಾರ ಅನುದಾನ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ 15 ದಿನಗಳಲ್ಲಿ ಬಾಕಿ ಹಣ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 26,500 ಖಾಸಗಿ ಅನುದಾನರಹಿತ ಶಾಲೆಗಳಿವೆ. ಇವುಗಳಲ್ಲಿ ಸುಮಾರು 11 ಲಕ್ಷ ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ.ಈ ಹಿಂದಿನ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಆರ್.ಟಿ.ಇ ರದ್ದು ಪಡಿಸಿದೆ.ಪ್ರಸ್ತುತ 7,8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮಾತ್ರ ಕಲಿಯುತ್ತಿದ್ದು,ಇವರಿಗೆ ಸರಕಾರ ಕಳೆದ 8 ವರ್ಷಗಳ ಹಿಂದೆ ಒಬ್ಬ ವಿದ್ಯಾರ್ಥಿಗೆ 16 ಸಾವಿರ ರೂ ನಿಗಧಿ ಪಡಿಸಿದೆ.ಆದರೆ ಸರಕಾರ ತಾನೇ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಒಂದು ಮಗುವಿಗೆ 82 ಸಾವಿರ ರೂ ಖರ್ಚು ಮಾಡುತ್ತಿದೆ.ಹಾಗಾಗಿ ಆರ್.ಟಿ.ಇ ನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಾರ್ಷಿಕ ಕನಿಷ್ಠ 30 ಸಾವಿರ ರೂಗಳನ್ನಾದರೂ ನೀಡಬೇಕೆಂದು ಹಾಲೆನೂರು ಲೇಪಾಕ್ಷ ಒತ್ತಾಯಿಸಿದರು.
ಖಾಸಗಿ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದು,2021ಕ್ಕಿಂತ ಮೊದಲು ಶಾಲಾ ಕಟ್ಟಡ ನಿರ್ಮಿಸಿದವರಿಗೆ ಆಗ್ನಿ ದುರಂತ ಮುಂಜಾಗ್ರತಾ ಪ್ರಮಾಣ ಪತ್ರದಲ್ಲಿ ವಿನಾಯಿತ ನೀಡುವಂತೆ ಮತ್ತು ನವೀಕರಣವನ್ನು 10 ವರ್ಷಗಳಿಗೆ ಒಮ್ಮೆ ತೆಗೆದುಕೊಳ್ಳುವಂತೆ ಆದೇಶ ಮಾಡಿದ್ದರೂ ಇದುವರೆಗೂ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಇದುವರೆಗೂ ನವೀಕರಣ ಫಾರಂನಲ್ಲಿರುವ ಅಗ್ನಿ ಶಾಮಕ ಷರತ್ತು ವಾಪಸ್ ಪಡೆದಿಲ್ಲ. ಕೂಡಲೇ ಸರಕಾರ ಷರತ್ತು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಡಾ.ಹಾಲೆನೂರು ಲೇಪಾಕ್ಷ ತಿಳಿಸಿದರು.
ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಮಹದಾಸೆಯಿಂದ ಸರಕಾರ ಆರ್.ಟಿ.ಇ ರೂಪಿಸಿದೆ.ಆದರೆ ಕಳೆದ ಸರಕಾರ ನಾಲ್ಕುವರ್ಷಗಳ ಹಿಂದೆ ರಾಜ್ಯದಲ್ಲಿ ಆರ್.ಟಿ.ಇ ರದ್ದು ಮಾಡಿದ್ದ ಪರಿಣಾಮ, ಬಡವರ ಮಕ್ಕಳು ದೊಡ್ಡ ಮಟ್ಟದ ಶುಲ್ಕ ಭರಿಸಿ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರಕಾರ ರಾಜ್ಯದಲ್ಲಿ ಆರ್.ಟಿ.ಇ ನೊಂದಣಿಯನ್ನು ಪುನಃ ಪ್ರಾರಂಭಿಸಬೇಕು ಎಂಬುದು ರೂಪ್ಸಾ ಕರ್ನಾಟಕದ ಒತ್ತಾಯವಾಗಿದೆ ಎಂದರು.
ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘಕ್ಕೂ, ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಇವೆರಡು ಬೇರೆ ಬೇರೆಯಾಗಿದ್ದು, ರೂಪ್ಸಾದಿಂದ ಉಚ್ಚಾಟನೆಗೊಂಡ ಲೋಕೇಶ್ ತಾಳಿಕೋಟೆ ಎಂಬ ವ್ಯಕ್ತಿ,ನಮ್ಮ ಸಂಘದ ಹೆಸರು ದುರುಪಯೋಗ ಪಡಿಸಿಕೊಂಡು ಮಾಧ್ಯಮದವರಿಗೆ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.ಈಗಾಗಲೇ ಇವರ ವಿರುದ್ದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.ಇಂದು ತುಮಕೂರು ಎಸ್ಪಿ ಕಚೇರಿಗೂ ಲೋಕೇಶ್ ತಾಳಿಕೋಟೆ ವಿರುದ್ದ ದೂರು ಸಲ್ಲಿಸುವುದಾಗಿ ಡಾ.ಹಾಲೆನೂರು ಲೇಪಾಕ್ಷ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೂಪ್ಸಾ ರಾಜ್ಯ ಉಪಾಧ್ಯಕ್ಷ ವಿದ್ಯಾವಾಹಿನಿ ಪ್ರದೀಪ್‍ಕುಮಾರ್,ಜಿಲ್ಲಾ ನಿರ್ದೇಶಕರಾದ ನಯಾಜ್ ಅಹಮದ್,ರಾಜ್ಯ ನಿರ್ದೇಶಕರಾದ ಚಂದ್ರಶೇಖರ್,ಮುರುಳೀಕೃಷ್ಣ, ಉಮಾಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.