ಇರುಳು ಕಂಡ ಬಾವಿಗೆ ಹಗಲಲ್ಲಿ ಬಿದ್ದ ಎಸ್.ಪಿ.ಎಂ.-ರಾಜಧರ್ಮ ಮರೆತರೆ?

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಾಜಿ ಸಂಸದ ಎಸ್.ಪಿ.ಮುದ್ದಹ ನುಮೇಗೌಡರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಂದ ಪಕ್ಷದ ಬಾವುಟವನ್ನು ತೆಗೆದುಕೊಳ್ಳುವುದರ ಮೂಲಕ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

ಎಸ್.ಪಿ.ಮುದ್ದಹನುಮೇಗೌಡರು ನ್ಯಾಯಾಧೀಶರಾಗಿದ್ದವರು, ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯವನ್ನು ಪ್ರವೇಶಿಸಿದವರು, ಇವರು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು, ರಾಜಕೀಯ ಮುತ್ಸದಿ ಎಂದು ತುಮಕೂರು ಜಿಲ್ಲೆಯಲ್ಲಿ ಕರೆಸಿಕೊಳ್ಳುತ್ತಿದ್ದ ವೈ.ಕೆ.ರಾಮಯ್ಯನವರನ್ನು ಸೋಲಿಸಿದ ಮುದ್ದಹನುಮೇಗೌಡರು ಜಿಲ್ಲೆಯಲ್ಲಿ ಉತ್ತಮ ರಾಜಕಾರಣಿ, ಸಜ್ಜನ, ಸಾಮಾನ್ಯ ಜನರ ಜೊತೆ ಬೆರೆಯುವ ವ್ಯಕ್ತಿ ಎಂದು ಗುರುತಿಸಿಕೊಂಡರು.

1994 ಜನತಾದಳವು ಉತ್ತುಂಗದಲ್ಲಿದ್ದ ಕಾಲವದು, ಕುಣಿಗಲ್ ಕ್ಷೇತ್ರದಲ್ಲಿ ಕುಣಿಗಲ್ ಕುದುರೆ ಎಂದೇ ಕರೆಸಿಕೊಳ್ಳುತ್ತಿದ್ದ ವೈ.ಕೆ.ರಾಮಯ್ಯನವರನ್ನು ಸೋಲಿಸಿ ಶಾಸಕರಾದರು. 1999ರಲ್ಲಿ ಜೆಡಿಎಸ್‍ನಿಂದ ನಿಂತಿದ್ದ ಹೆಚ್.ನಿಂಗಪ್ಪನವರನ್ನು ಪರಾಭವಗೊಳಿಸಿ ಮತ್ತೊಮ್ಮೆ ಶಾಸಕರಾದರೂ ಎಸ್.ಎಂ.ಕೃಷ್ಣ ಸರ್ಕಾರ ಬಂದರೂ ಮಂತ್ರಿಯಾಗುವ ಯೋಗ ದೊರಕಲಿಲ್ಲ. ಈ ಮಧ್ಯೆ ಮುದ್ದಹನುಮೇಗೌಡರು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.

ಆದರೆ ಅವರಿಗೆ ಕಾಂಗ್ರೆಸ್‍ನ ಕೆಲವರು ಒಳ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸೇರಿ ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಸಾಧಿಸಲು ಆಗಲಿಲ್ಲ, ಆ ವೇಳೆಗೆ ರಾಜಕೀಯದ ದಾಳಗಳೇ ಯಾವಾಗ ಎತ್ತ ಉರುಳುತ್ತವೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಾಗದಂತಹ ಪೆಟ್ಟುಗಳು ಎಲ್ಲಾ ಪಕ್ಷಗಳಲ್ಲೂ ಕಾಣಿಸಿಕೊಂಡಿತು.

ಮುದ್ದಹನುಮೇಗೌಡರ ರಾಜಕೀಯ ಮುಗಿಯಿತು ಎನ್ನುವಾಗಲೇ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು, 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ವತಃ ಡಾ.ಜಿ.ಪರಮೇಶ್ವರ್ ಅವರು ಮುದ್ದಹನುಮೇಗೌಡರನ್ನು ಕರೆ ತಂದು ತುಮಕೂರು ಲೋಕಸಭಾ ಟಿಕೆಟ್ ಕೊಡಿಸಿ ಸಂಸದರನ್ನಾಗಿ ಮಾಡುವುದರ ಮೂಲಕ ಎಸ್.ಪಿ.ಎಂ.ಗೆ ರಾಜಕೀಯ ಮರು ಜೀವ ನೀಡಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೂ ಎಟುಕುತ್ತಾ, ಸಂಸದರಾಗಿ ಜಿಲ್ಲೆಗೆ ಉತ್ತಮ ಕೆಲಸವನ್ನು ಮಾಡಿದ್ದಲ್ಲದೆ, ಕೊಬ್ಬರಿಗೆ ಉತ್ತಮ ಬೆಲೆ ನೀಡಬೇಕೆಂದು ಸಂಸತ್ತಿನಲ್ಲಿ ಏರು ಧ್ವನಿಯಲ್ಲಿ ಮಾತನಾಡಿದರು, ಇವರ ಕಾಲದಲ್ಲೇ ತುಮಕೂರು-ಶಿವಮೊಗ್ಗ ದ್ವಿಪಥ ರೈಲ್ವೆ ಹಳಿ ಮತ್ತು ಬಿ.ಹೆಚ್.ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಕಾಮಗಾರಿಗಳನ್ನು ಪ್ರಾರಂಭಿಸಿದರು, ಇಡೀ ರಾಜ್ಯದಲ್ಲಿ ಉತ್ತಮ ಸಂಸದರು ಎಂಬ ಹೆಸರನ್ನು ಪಡೆದುಕೊಂಡರು.

ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ತುಮಕೂರು ಲೋಕಸಭಾ ಕ್ಷೇತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಿಟ್ಟು ಕೊಡಬೇಕಾಯಿತು.
ಈ ಸಂದರ್ಭದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರ ಜೊತೆ ಗುರುತಿಸಿಕೊಂಡ ಮುದ್ದಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಣೆಯನ್ನು ಮಾಡಿದರು. ಕಾಂಗ್ರೆಸ್ ಮುಖಂಡರು ಮನ ಒಲಿಸಿದ ಹಿನ್ನಲೆಯಲ್ಲಿ ಕಣದಿಂದ ಹಿಂದೆ ಸರಿದು, ಎಲ್ಲಿಯೂ ದೇವೇಗೌಡರ ಪರವಾಗಿ ಪ್ರಚಾರವನ್ನು ಮಾಡಲಿಲ್ಲ.

ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪರಾಭವಗೊಂಡರು, ಕಾಂಗ್ರೆಸ್ ನಾಯಕರು ಎಸ್.ಪಿ.ಎಂ.ಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ನೀಡಿದ್ದ ವಾಗ್ದಾನವನ್ನು ಈಡೇರಿಸಲೇ ಇಲ್ಲ, ಇದರಿಂದ ಬೇಸರಗೊಂಡ ಮುದ್ದಹನುಮೇಗೌಡರು ಕೆಲ ದಿನ ಮೌನಕ್ಕೆ ಶರಣಾದರು.

ಕಾಂಗ್ರೆಸ್‍ನಿಂದ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಕೇಳಿದಾಗ, ಅದು ಸಾಧ್ಯವಿಲ್ಲ ಎಂದರು, ಇದರಿಂದ ಮತ್ತಷ್ಟು ವಿಚಲಿತರಾದ ಮುದ್ದಹನುಮೇಗೌಡರು, ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದರು.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಳಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತನಾಡಿದ ಮುದ್ದಹನುಮೇಗೌಡರು, ಕುಣಿಗಲ್ ವಿಧಾನಸಭಾ ಕ್ಷೇತ್ರದಕ್ಕೆ ಟಿಕೆಟ್ ನೀಡದಿದ್ದರೆ ಪಕ್ಷ ತೊರೆಯುವುದಾಗಿ ತಿಳಿಸಿದರು, ಹೀಗೆ ತಿಳಿಸಿದಾಗಲೂ ಹಲವಾರು ತಿಂಗಳು ಕಾದ ಎಸ್‍ಪಿಎಂ 2022ರ ಸೆಪ್ಟಂಬರ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. 2022ರ ನವೆಂಬರ್ 3ರಂದು ಅಧಿಕೃತವಾಗಿ ಬಿಜೆಪಿಯನ್ನು ಸೇರ್ಪಡೆಯಾದರು.

ಅವರು ಬಿಜೆಪಿಗೆ ಸೇರ್ಪಡೆಯಾದ ಕಾಲಘಟ್ಟವು ಮುದ್ಹನುಮೇಗೌಡರಿಗೆ ಪಾಸೀಟಿವ್ ಆಗಿರಲಿಲ್ಲ. ಈಗಿನ ಶಾಸಕರಾದ ಡಾ||ರಂಗನಾಥ, ಕೆಪಿಸಿಸಿ ಅಧ್ಯಕ್ಷರನ್ನು ಡಿ.ಕೆ.ಶಿವಕುಮಾರ್ ಮತ್ತು ತುಮಕೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ಅವರನ್ನು ಬಿಜೆಪಿ ಪಕ್ಷದ ಬಹಿರಂಗ ಸಭೆಗಳಲ್ಲಿ ಡಿಕೆ ಬ್ರದರಸ್ ಅವರನ್ನು ಹಿಗ್ಗಾ-ಮುಗ್ಗಾ ಜಾಡಿಸಿದರು.

ತಮಗೆ ರಾಜಕೀಯ ಮರುಜೀವ ನೀಡಿದ್ದ ಡಾ.ಜಿ.ಪರಮೇಶ್ವರ್ ಅವರನ್ನೂ ಸಹ ಲೆಕ್ಕಕ್ಕೆ ಇಟ್ಟುಕೊಳ್ಳದೆ ನನಗೆ ಮೋಸ ಮಾಡಿದರು ಎಂದು ಹೀಗೆಳೆದರು. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಭಾವೋದ್ಗಕ್ಕೆ ಒಳಗಾದ ಮುದ್ದಹನುಮೇಗೌಡರು, ಕಾಂಗ್ರೆಸ್ ನಾಯಕರನ್ನು ಬೈದುಕೊಂಡು ಓಡಾಡುತ್ತಿದ್ದಲ್ಲದೆ, ಅವರಿಗೆ ಪಾಠ ಕಲಿಸುವುದಾಗಿ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ನಾಯಕರನ್ನು ಓಲೈಸಲು ಕಾಂಗ್ರೆಸ್ ನಾಯಕರನ್ನು ತಮ್ಮ ಮೃದುತ್ವವನ್ನು ಬಿಟ್ಟು ಟೀಕೆ ಮಾಡಿದರು.

ಇಷ್ಟೆಲ್ಲಾ ಮಾಡಿದರೂ ಟಿಕೆಟ್ ನೀಡುತ್ತೇವೆ ಎಂದು ಬಿಜೆಪಿ ಪಕ್ಷ ಇವರಿಗೆ ಹೇಳಲಿಲ್ಲ, ಇನ್ನ ಕೆಲವರು ಇವರನ್ನು ಬಿಜೆಪಿಯವರು ಕಲವರನ್ನು ಗೆಲ್ಲುವುದಕ್ಕಾಗಿ ಬಳಸಿಕೊಂಡರು, ಗೆದ್ದ ಮೇಲೆ ಇವರನ್ನು ಕ್ಯಾರೆ ಅನ್ನಲಿಲ್ಲ. ಮುದ್ದಹನುಮೇಗೌಡರು ಅವರಿಗೆ ಸವಕಲು ನಾಣ್ಯದಂತೆ ಕಂಡರು.

ಬಿಜೆಪಿಗೆ ಬಂದ ಮೇಲೆ ಮುದ್ದಹನುಮೇಗೌಡರಿಗೆ ಮೊದಲು ಬಿಜೆಪಿಯ ಮನಃಸ್ಥಿತಿಯ ಜೊತೆಗೆ ಆರ್.ಎಸ್.ಎಸ್.ನ ಶರತ್ತುಗಳು ಮತ್ತು ಅವರ ಮಾತಿಗೆ ಎದರು ಮಾತನಾಡದೆ ವಿನಯವಂತಿಕೆಯನ್ನು ತೋರಬೇಕಾದ ಅನಿವಾರ್ಯತೆ ಉಂಟಾಯಿತು.

ಬಿಜೆಪಿಗೆ ಸೇರ್ಪಡೆಯಾದ ಮೇಲೂ ಮುದ್ದಹನುಮೇಗೌಡರಿಗೆ ಘಾಡ್ ಫಾದರ್ ಯಾರು ಸಿಗಲಿಲ್ಲ, ಚುನಾವಣೆಗೆ ದೊಡ್ಡ ನಾಯಕರಿಗೆ ಅನ್ನಿಸಿಕೊಂಡವರೆ ಸಿಗುತ್ತದೋ ಇಲ್ಲವೋ ಎಂಬ ಭಯ ಈಗಲೇ ಪ್ರಾರಂಭವಾಗಿದ್ದು, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡುವ ದರ್ದು ಬಿಜೆಪಿಗರಿಗೇನು ಇಲ್ಲ, ಅವರ ಶಕ್ತಿಯಿದ್ದರೆ ಬೆಂಗಳೂರು ಗ್ರಾಮಾಂತರಕ್ಕೆ ಟಿಕೆಟ್ ತರಬಹುದಷ್ಟೇ.

ಬೆಂಗಳೂರು ಗ್ರಾಮಾಂತರದ ಮೇಲೆ ಸಿ.ಪಿ.ಯೋಗೀಶ್ವರ್ ಕಣ್ಣಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭೆ ಜಿದ್ದಾಜಿದ್ದಿನ ಕಣಕ್ಕೆ ಸಜ್ಜುಗೊಂಡಿರುವಾಗ ಮೃದು ಸ್ವಭಾದ ಮುದ್ದಹನುಮೇಗೌಡರನ್ನು ಅಲ್ಲಿ ನಿಲ್ಲಿಸಿ ಡಿ.ಕೆ.ಸುರೇಶ್ ಅವರಿಗೆ ಬೆಳ್ಳಿ ತಟ್ಟೆಯಲ್ಲಿ ಗೆಲುವನ್ನು ಇಟ್ಟುಕೊಡಲು ಬಿಜೆಪಿಗೆ ಮನಸ್ಸಿಲ್ಲ, ನಾವು ಯುದ್ಧಕ್ಕೆ ತಯಾರಿ ಎಂಬ ಸಂದೇಶವನ್ನು ಸಾರಿದ್ದಾರೆ.

ಇನ್ನ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಿ.ಎಸ್.ಬಸವರಾಜು ಮತ್ತು ಜೆ.ಸಿ.ಮಾಧುಸ್ವಾಮಿಯವರ ಮಾತಿಗೆ ಯಡಿಯೂರಪ್ಪನವರು ಬದ್ಧರಾಗುವುದರಿಂದ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿ ಅಂತ ಹೇಳುವವರು ಯಾರು?

ಇದನ್ನೆಲ್ಲಾ ಅರಿತ ಮುದ್ದಹನುಮೇಗೌಡರು ತಮಗೆ ರಾಜಕೀಯ ಮರುಜನ್ಮ ನೀಡಿದ ಡಾ.ಜಿ.ಪರಮೇಶ್ವರ್ ಅವರನ್ನು ಧಿಕ್ಕರಿಸಿ ಹೋಗಿದ್ದು ಇರುಳು ಕಂಡ ಬಾವಿಗೆ ಹಗಲು ಬಿದ್ದರು ಎನ್ನುವಂತಾಗಿದೆ.

ರಾಜಧರ್ಮ ಪಾಲಿಸದೇ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ದುಡಿದ ಮುದ್ದಹನುಮೇಗೌಡರಿಗೆ ಮತ್ತೆ ಕಾಂಗ್ರೆಸ್‍ಗೆ ಸೇರ್ಪಡೆಗೊಂಡು ಟಿಕೆಟ್ ಕೇಳುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್‍ನ ಜಿಲ್ಲಾ ನಾಯಕರು ಅಪಸ್ವರ ಎತ್ತಿದ್ದು, ನಾವು ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದು, ಪಕ್ಷ ಬಿಟ್ಟು ಹೋದವರಿಗೆ ಟಿಕೆಟ್ ಕೊಡಿಸಲು ಅಲ್ಲ ಎಂದು ವೀಕ್ಷಕರುಗಳ ಮುಂದೆ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ.
ಒಬ್ಬ ಸಜ್ಜನ ರಾಜಕಾರಣಿಗೆ ಆಗುವ ಎಲ್ಲಾ ರಾಜಕೀಯ ಸಂಕಷ್ಟಗಳು ಮುದ್ದಹನುಮೇಗೌಡರಿಗೂ ಆಗಿವೆ.

ಸಜ್ಜನ ರಾಜಕಾರಿಣಿಗೆ ಇತ್ತೀಚಿನ ದಿನಗಳಲ್ಲಿ ಯಾವ ರಾಜಕೀಯ ಪಕ್ಷವು ಅಷ್ಟಾಗಿ ಮನ್ನಣೆ ನೀಡದೆ ಇರುವುದು ಮುದ್ದಹನುಮೇಗೌಡರಂತವರಿಗೆ ಆಗಾಗ್ಗೆ ರಾಜಕೀಯ ಸಂಕಷ್ಟಗಳು ಎದುರಾಗುವುದು ಸಹಜ, ಇಂತಹ ದುರದ್ದಿನ ಕಾಲದಲ್ಲಿ ಎಸ್‍ಪಿಎಂ ಪಕ್ಷ ಬದಲಿಸಿದ್ದು ಅವರ ಮನೋಭೂಮಿಕೆಗೆ ಒಗ್ಗಲಿಲ್ಲ, ಕಾಂಗ್ರೆಸ್ ಹೈಕಮಾಂಡ್ ಜೊತೆ ನೇರವಾಗಿ ಸಂಪರ್ಕವಿಟ್ಟುಕೊಂಡು, 2018ರಲ್ಲಿ ಹಲವರಿಗೆ ಟಿಕೆಟ್ ಕೊಡಿಸಿದ್ದ ಮುದ್ದಹನುಮೇಗೌಡರು, ಪಕ್ಷ ಬಿಟ್ಟು ಹೋಗಿದ್ದು ಅವರ ವರ್ಚಸ್ಸನ್ನು ಅವರೇ ಕಳೆದುಕೊಂಡಂತಾಗಿದೆ.

ಮಾಗಿದ ರಾಜಕಾರಣಿಯೊಬ್ಬರು ಬಿಜೆಪಿಯ ಗಿಳಿ ಮಾತುಗಳಿಗೆ ಮರುಳಾಗಿ, ಯಾರನ್ನೋ ಗೆಲ್ಲಿಸಲಷ್ಟೇ ಸೀಮಿತವಾಗಿ ಮೂಲೆ ಗುಂಪಾಗಿರುವವರಿಗೆ ಕಾಂಗ್ರಸ್ ನಾಯಕರು ಟಿಕೆಟ್ ನೀಡಿದರೆ ಪಕ್ಷಕ್ಕೆ ದುಡಿದವರಿಗೆ ಏನು ಸಂದೇಶ ಕೊಡುತ್ತಿದ್ದಾರೆ ಎಂಬುದು ಸಹ ಪರಿಗಣಿಸಬೇಕಿದೆ.

ಪಕ್ಷಕ್ಕೆ ದುಡಿದವರು ಬೇಕೋ ಪಕ್ಷ ಬಿಟ್ಟು ಡ್ಯಾಮೇಜ್ ಮಾಡಿದವರು ಬೇಕೋ ಎಂಬುದನ್ನು ಜಿಲ್ಲೆಯ ನಾಯಕರಾದ ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್,ರಾಜಣ್ಣನವರ ಮೇಲೆ ನಿಂತಿದೆ ಎಂದು ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ.

ಕುಣಿಗಲ್ ಕುದುರೆ ಫಾರಂ ವ್ಯಾಪಾರಕ್ಕಿರುವಾಗ ಜಿಲ್ಲೆಯ ಎಂ.ಪಿ.ಟಿಕೆಟ್ ಯಾರ ಪಾಲಾಗಲಿದೆ ಎಂಬುದು ಸಹ ಬಹುಮುಖ್ಯ ವಿಷಯ.

-ಹೊವೆಂವೆಂ

Leave a Reply

Your email address will not be published. Required fields are marked *