ನೇರ ನೇಮಕಾತಿಗೆ ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಪ್ರತಿಭಟನೆ

ತುಮಕೂರು:ಸಮೀಕ್ಷೆಯ ಮೂಲಕ ಪತ್ತೆ ಹಚ್ಚಿರುವ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳ ಪುನರ್ವಸತಿ ಹಾಗೂ ಜಿಲ್ಲೆಯ ಸ್ವಚ್ಛತಾ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ ನೇರಪಾವತಿ ಜಾರಿಮಾಡಲು ಒತ್ತಾಯಿಸಿ ಇಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೂರಾರು ಸಫಾಯಿ ಕರ್ಮಚಾರಿಗಳು, ಸರಕಾರದ ನಿಯಮಾವಳಿಗಳ ಅನ್ವಯ ನಮಗೆ ಸವಲತ್ತು ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕದ ಸಂಚಾಲಕ ಡಾ.ಕೆ.ಬಿ.ಓಬಳೇಶ್,ಸರಕಾರ ಆಯೋಜಿಸಿದ ಪುನರ್ವಸತಿ ವಿತರಣ ಕಾರ್ಯಕ್ರಮದಲ್ಲಿ ನೊಂದಾಯಿಸಿದಂತೆ ತುಮಕೂರು ಜಿಲ್ಲೆಯಲ್ಲಿ ಗುರುತಿಸಿರುವ 157 ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳಿಗೆ ವಸತಿ, ಆರೋಗ್ಯ ಕಾರ್ಡ್, ಪರ್ಯಾಯ ಉದ್ಯೋಗ ಪ್ರಾರಂಬಿಸಲು ಆರ್ಥಿಕ ನೇರವು ಈ ಕೂಡಲೆ ನೀಡಬೇಕು.ಗುರುತಿನ ಚೀಟಿ ಹೊಂದಿರುವ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಕುಟುಂಬದ ಮಕ್ಕಳ ಶಿಕ್ಷಣದ ಶುಲ್ಕ ಮರುಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಬೇಕು ಎಂದು ಆಗ್ರಹಿಸಿದರು.

ಮ್ಯಾನುವೆಲ್ ಸ್ಕ್ಯಾವೆಂಜರ್ ಕುಟುಂಬಗಳನ್ನು ಪುನರ್ವಸತಿ ಮಾಡುವಾಗ ಯಾವುದೇ ಕಾರಣಕ್ಕೂ,ಸುಪ್ರಿಂಕೋರ್ಟು ನೀಡಿರುವ 2014ರ ಆದೇಶವನ್ನು ಪದೇ ಪದೇ ಉಲ್ಲಂಘನೆ ಮಾಡಬಾರದು,ಸರಕಾರದ ಸವಲತ್ತು ಪಡೆಯಲು ಅಡ್ಡಿ ಪಡಿಸುವುದು,ಅಡಚಣೆ ಉಂಟು ಮಾಡುವವರ ವಿರುದ್ದ ಅಗತ್ಯ ಕಾನೂನು ಕ್ರಮ ಜರುಗಿಸಬೇಕು.ತುಮಕೂರು ಜಿಲ್ಲೆಯ ವಿವಿಧ ಸ್ಥಳಿಯ ಸಂಸ್ಥೆಗಳಲ್ಲಿ ಗುತ್ತಿಗೆ ಅದಾರದಲ್ಲಿ ಸಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಲೋಡರ್ಸ್, ಕಸದ ವಾಹನ ಚಾಲಕರು, ಳಚರಂಡಿ, ಸ್ವಚ್ಚತಾ ಕಾರ್ಮಿಕರು ಮತ್ತು ಡಂಪಿಂಗ್ ಯಾರ್ಡ್‍ನಲ್ಲಿ ಕಸ ವಿಂಗಡನೆ ಮಾಡುವ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕಕ್ಕೆ ಸರಕಾರಕ್ಕೆ ಪಾಲಿಕೆಗಳು ಪ್ರಸ್ತಾವನೆ ಸಲ್ಲಿಸಬೇಕೆಂದು ಓಬಳೇಶ್ ಒತ್ತಾಯಿಸಿದರು.

ಇದುವರೆಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಮಾಡದೇ ಉಳಿದಿರುವ ನೇರ ಪಾವತಿ ಪೌರಕಾರ್ಮಿಕರನ್ನು ಸರಕಾರದ ಅದೇಶ ಸಂಖ್ಯೆ: ನಅಇ 57 ಟಿಎಂಎಸ್2024 (ಇ) ದಿನಾಂಕ: 27.09.2024 ರಂತೆ ಕೂಡಲೇ ನೇರ ನೇಮಕಾತಿ ಮಾಡಬೇಕು.ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ಸುರಕ್ಷಿತ ಸಲಕರಣೆಗಳು ಮತ್ತು ಆರೋಗ್ಯ ವಿಮೆ ನೀಡುತ್ತಿಲ್ಲ. ಹಾಗೂ ವಯೋ ನಿವೃತ್ತಿಯಾಗುವವರಿಗೆ ಕನಿಷ್ಠ ಸೌಲಭ್ಯಗಳಿಲ್ಲದೆ ಹಾಗೆ ಮನೆಗೆ ಕಳಿಸುತ್ತಿರುವುದು ಅನ್ಯಾಯವಾದ ಕ್ರಮ, ಈ ಕುರಿತು ಪಿ ಇ ಎಂ ಎಸ್ ಅರ್ ಕಾಯ್ದೆ 2013 ರ ಅಡಿ ರಚಿಸಿರುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಜಿಲೇನ್ಸ್ ಸಮಿತಿ ವತಿಯಿಂದ ಖುದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಿದ್ಧಪಡಿಸಲು ನಿರ್ದೇಶನ ನೀಡಲು ಜಿಲ್ಲಾ ಪಂಚಾಯಿತಿ ಸಿ ಇ ಓ ರವರಿಗೆ ಅದೇಶಿಸಬೇಕೆಂದು ಡಾ.ಕೆ.ಬಿ.ಓಬಳೇಶ್ ಆಗ್ರಹಿಸಿದರು.

ಈಗಾಗಲೇ ಪೌರಕಾರ್ಮಿಕರಿಗೆ ವಸತಿ ನಿರ್ಮಿಸಲು ಜಿಲ್ಲಾಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆ, ಚಿಕ್ಕನಾಯಕನಹಳ್ಳಿ, ಶಿರಾ,ತಿಪಟೂರು ಪಾವಗಡ ಸ್ಥಳೀಯ ಸಂಸ್ಥೆಗಳಿಗೆ ಭೂಮಿ ಮುಂಜೂರು ಮಾಡಿದೆ.ಈ ಜಾಮೀನುಗಳನ್ನು ಹಸ್ತಾಂತರಿಸಿ ಕೊಂಡು ವಸತಿ ನಿರ್ಮಿಸಲು ಧೀರ್ಘ ಕಾಲ ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಡಿಸಿ ಯವರು ತಕ್ಷಣ ಕ್ರಮ ಜರುಗಿಸಬೇಕು.ಪಿ ಇ ಎಂ ಎಸ್ ಆರ್ ಕಾಯ್ದೆ 2013 ರ ಅಡಿ ರಚಿಸಿರುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಜಿಲೇನ್ಸ್ ಸಮಿತಿ ಸಭೆ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು, ಅದರೆ ಕಳೆದ 04 ತಿಂಗಳಿಂದ ಸಭೆ ನಡೆಸಿಲ್ಲ. ವಿಜಿಲೇನ್ಸ್ ಸಮಿತಿ ಸಭೆಯನ್ನು ಕೂಡಲೇ ನಡೆಸಿ, ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಬೇಕೇಂದರು.

ಪೌರಕಾರ್ಮಿಕರು, ಕಸದ ವಾಹನ ಚಾಲಕರು,ಒಳಚರೆಂಡಿ ಸ್ವಚ್ಛತಾ ಕಾರ್ಮಿಕರು ಕೆಲಸ ನಿರ್ವಹಿಸುವಾಗ ಬೆಳಗಿನ ಉಪಹಾರ, ಶೌಚಾಲಯ ವ್ಯವಸ್ಥೆ ಸಮಗ್ರವಾಗಿ ಇಲ್ಲ.ಈ ವಿಷಯದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪ್ರಮಾಣಿಕವಾಗಿ ಸೇವೆ ನೀಡುವಲ್ಲಿ ವಿಫಲವಾಗುತ್ತಿದ್ದಾರೆ.ಈ ಕೂಡಲೇ ಪಾರದರ್ಶಕವಾಗಿ ವ್ಯವಸ್ಥೆ ಮಾಡಬೇಕು.ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷಿತ ಸಲಕರಣೆಗಳು ಮತ್ತು ಆರೋಗ್ಯ ವಿಮೆ, ವೈದ್ಯಕೀಯ ಪರೀಕ್ಷೆಗಳನ್ನು ಸರಕಾರದ ಆದೇಶದಂತೆ ಕಾಲ ಕಾಲಕ್ಕೆ ನಡೆಸುತ್ತಿಲ್ಲ. ಈ ವಿಷಯದಲ್ಲಿ ಸುಳ್ಳು ವರದಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ, ಈ ಕುರಿತು ಪರಿಶೀಲಿಸಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಸಂಚಾಲಕ ಡಾ.ಕೆ.ಬಿ.ಓಬಳೇಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *