ತುಮಕೂರು : ಬಿಹಾರದ ಮಾಜಿ ಸಂಸದ ಕಿಶನ್ ಪಟ್ನಾಯಕ್ ಅವರ ಪತ್ನಿ ವಾಣಿರವರ ಸಮತಾ ಬಳಗದಿಂದ ಆತ್ಮೀಯ ಸಂವಾದ ಕಾರ್ಯಕ್ರಮವನ್ನು ಡಿಸೆಂಬರ್ 29ರ ಭಾನುವಾರ ಸಂಜೆ 4ಗಂಟೆಗೆ ಟೌನ್‍ಹಾಲ್ ಸರ್ಕಲ್‍ನ ಭಾರತೀಯ ವೈದ್ಯಕೀಯ ಸಂಘದಲ್ಲಿ ಹಮ್ಮಿಕೊಂಡಿದೆ.
ಸಂವಾದಕ್ಕೆ ಹೈಕೋರ್ಟ್ ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ್ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಚಿಂತಕ ಪ್ರೊ.ದೊರೈರಾಜ್ ಅವರು ವಹಿಸಲಿದ್ದಾರೆ.
ವಾಣಿರವರ ಪರಿಚಯ
ಶ್ರೀಮತಿ ವಾಣಿಕಿಶನ್ ಪಟ್ನಾಯಕ್ ಒರಿಸ್ಸಾದ ಹಳ್ಳಿಯೊಂದರಲ್ಲಿ ಹುಟ್ಟಿ ಬಾಲ್ಯದಲ್ಲೇ ಹೆತ್ತವರು ಮತ್ತು ಊರವರಿಂದ ‘ಕಳಂಕಿತೆ’ ಎನ್ನುವ ಪಟ್ಟಕಟ್ಟಿಸಿಕೊಂಡು ಊರು ಬಿಟ್ಟು, ಊರೂರು ಅಲೆದು ಅನಿರೀಕ್ಷಿತವಾಗಿ ದೊರಕಿದ ವಿದ್ಯಾರ್ಥಿ ವೇತನದ ಲಾಭ ಪಡೆದು ಪುಣೆಯಲ್ಲಿ ಹಿಂದೂಸ್ಥಾನಿ ಸಂಗೀತ ಕಲಿಯಲಾರಂಭಿಸಿದ ಶ್ರೀಮತಿ ವಾಣಿಯವರು ಸಂಗೀತವನ್ನೇ ಅನ್ನದ ದಾರಿಯನ್ನಾಗಿಸಿಕೊಂಡು ದಿಟ್ಟ-ಸ್ವಾಭಿಮಾನಿ ಬದುಕು ಕಟ್ಟಿಕೊಂಡದ್ದು ಒಂದು ಎತ್ತರದ ಕತೆಯಾದರೆ, ಸಮಾಜವಾದಿ ನಾಯಕ ಕಿಶನ್ ಪಟ್ನಾಯಕ್ ಅವರ ಜೀವನ ಸಂಗಾತಿಯಾಗಿ, ಕಿಶನ್ ಅವರ ಸಮಾಜವಾದಿ ಹೋರಾಟ, ಚಟುವಟಿಕೆ ಮತ್ತು ಸೈದ್ಧಾಂತಿಕ ಬದ್ಧತೆಯ ರಾಜಕಾರಣದ ಆಶಯಗಳಿಗೆ ತುಸುವೂ ಚ್ಯುತಿಯಾಗದಂತೆ ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ನಿರ್ವಹಿಸಿದ್ದು, ಈಗಲೂ ‘ನಿಜ ಸಮಾಜವಾದಿ’ ಜೀವನ ಕ್ರಮವನ್ನು ಅನುಸರಿಸುತ್ತಿರುವುದು ಇನ್ನೊಂದು ಎತ್ತರ.
ಬದುಕಿಗೆ ತಿರುವ ನೀಡಿದ ಸಂಗೀತಕ್ಕೆ ಸದಾ ಕೃತಜ್ಞರಾಗಿರುವ ವಾಣಿಯವರು ಶಾಸ್ತ್ರೀಯ ಸಂಗೀತ ಶಿಕ್ಷಕಿಯಾಗಿ, ಕಲಾವಿದೆಯಾಗಿ, ಜೀವನೋಪಾಯಕ್ಕೆ ಹಿಂದಿ ಮತ್ತು ಮರಾಠಿ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ದುಡಿದಿದ್ದಾರೆ. ದುರ್ಬಲರ ಮತ್ತು ದೇವದಾಸಿಯರ ಶ್ರೇಯಸ್ಸಿಗಾಗಿ ಕಾಳಜಿಪೂರ್ಣ ಕೆಲಸ ಮಾಡಿದ್ದಾರೆ. ಕಿಶನ್ ನಿಧನದ ಬಳಿಕ ಉನ್ನತ ಸ್ಥಾನದಲ್ಲಿರುವ ಅವರ ಅನೇಕ ಶಿಷ್ಯರು ಮನೆಗೆ ಬಂದು ನೆರವು ನೀಡುವ, ಬದುಕಿಗೆ ಆಸರೆಯಾಗುವ ಭರವಸೆ ನೀಡಿದ್ದನು ನಯವಾಗಿಯೇ ನಿರಾಕರಿಸಿದ ವಾಣಿಯವರು ಯಾರ ಆಸರೆ, ಆಶ್ರಯವನ್ನು ಬಯಸದೆ, ಇಳಿ ವಯಸ್ಸಿನಲ್ಲೂ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಅವರ ಸಂಘರ್ಷಮಯ ಬದುಕಿನ ಕತೆ ಅಚ್ಚರಿಯ ಜೊತೆಗೆ ಪ್ರೇರಣೆಯನ್ನು ಮೂಡಿಸುವಂತದ್ದು. ಅವರು ಇದೇ ಶನಿವಾರ ತುಮಕೂರಿಗೆ ಬರುತ್ತಿದ್ದಾರೆ. ಹಳೆಯ ಮತ್ತು ಹೊಸ ತಲೆಮಾರಿನ ಸಮಾಜವಾದಿ ಗೆಳೆಯರ ಬಳಗದೆದುರು ತಮ್ಮ ಘನವಾದ ಬದುಕಿನ ಪುಟಗಳನ್ನು ತೆರೆದಿಡುತ್ತಿದ್ದಾರೆ.