ತುಮಕೂರು : ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನೆನಪು ಮಾಡಿಕೊಳ್ಳುವ ದಿನವೇ ಸರ್ವೋದಯ ದಿನವಾಗಿದೆ. ಈ ದಿನವನ್ನು ನ್ಯಾಯಾಂಗ ಇಲಾಖೆ ಸ್ವಚ್ಚತಾ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ತಿಳಿಸಿದ್ದಾರೆ.
ನಗರದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀಶಾರದದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,ಪಾವಗಡ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತುಮಕೂರು, ಜಿಲ್ಲಾ ಕುಷ್ಠ ರೋಗ ನಿರ್ಮೂಲಾನಾಧಿಕಾರಿಗಳು, ತುಮಕೂರು ಹಾಗೂ ಡೇಮಿಯನ್ ಫೌಂಡೇಷನ್, ಚನೈ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ದಿನಾಚರಣೆ, ಹುತಾತ್ಮರ ದಿನಾಚರಣೆ ಹಾಗೂ ಸ್ಪರ್ಶ ಕುಷ್ಠರೋಗ ಜಾಗೃತಿ ಆಂದೋಲನ ಅಂಗವಾಗಿ ಕುಷ್ಠ ರೋಗಿಗಳಿಗೆ ವಿವಿಧ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮಹನೀಯರ ತ್ಯಾಗ, ಬಲಿದಾನದ ಕುರಿತು ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ್ ಹಾಲಪ್ಪ ಮಾತನಾಡಿ,ವೈದ್ಯರಾಗಿದ್ದ ನಮ್ಮ ತಂದೆ, ಕುಷ್ಠ ರೋಗಿಗಳ ಬಗ್ಗೆ ನಮಗೆ ತಿಳುವಳಿಕೆ ನೀಡಿದ್ದರು.ಅದೊಂದು ಗುಣಪಡಿಸಬಹುದಾದ ಖಾಯಿಲೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಹಾಗಾಗಿಯೇ ನಾವು ಕಲಿಯುವಂತಹ ಸಂದರ್ಭದಲ್ಲಿಯೇ ಜಾಗೃತಿ ಮೂಡಿತ್ತು.ಪಾವಗಡದ ಶ್ರೀಜಪಾನಂದ ಶ್ರೀಗಳ ಸೇವೆಯನ್ನು ಹತ್ತಿರದಿಂದ ನೋಡಿದಾಗ ಮತ್ತಷ್ಟು ಗೌರವ ಭಾವನೆ ಅವರ ಬಗ್ಗೆ ಮೂಡಿದೆ.ಸ್ವತಹಃ ಅವರ ಕುಷ್ಠ ರೋಗಿಗಳಿಗೆ ಚಿಕಿತ್ಸೆ, ಔಷಧೋಪಾಚಾರ ಮಾಡಿ,ಖಾಯಿಲೆಯನ್ನು ವಾಸಿ ಮಾಡಿದ್ದಾರೆ.ಕುಷ್ಠ ರೋಗಿಗಳ ಸೇವೆಯ ಜೊತೆಗೆ, ಕ್ಷಯ,ಕಣ್ಣು, ಹೃದ್ರೋಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸೇವೆ ವಿಸ್ತಾರಗೊಂಡಿದೆ.ಕುóಷ್ಠ ರೋಗಿಗಳ ಚಿಕಿತ್ಸೆ ಜೊತೆಗೆ, ಅವರ ಜೀವನಾಧಾರಕ್ಕೂ ಸರಕಾರ ಅನುದಾನ ನೀಡಬೇಕಾಗಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ಆಸ್ಗರ್ ಬೇಗ್ ಮಾತನಾಡಿ,ಸದಾ ತ್ರಿಪೀಸ್ ಸೂಟ್ನಲ್ಲಿ ಇರುತ್ತಿದ್ದ ಗಾಂಧಿ, ಭಾರತದ ಬಡಜನರ ದುಸ್ಥಿತಿ ಕಂಡು ತುಂಡು ಬಟ್ಟೆಗೆ ಬದಲಾಗಿ, ಎಲ್ಲರನ್ನು ಒಳಗೊಂಡ ಹೋರಾಟ ರೂಪಿಸಿ, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು.ಒಂದು ಕಾಲದಲ್ಲಿ ದೇಶದಲ್ಲಿ 50 ಲಕ್ಷ ದಷ್ಟಿದ್ದ ಕುಷ್ಠ ರೋಗಿಗಳ ಸಂಖ್ಯೆ, ವ್ಯಾಪಕ ಪ್ರಚಾರ ಮತ್ತು ರೋಗಿಗಳಲ್ಲಿ ಅರಿವು ಮೂಡಿಸಿದ ಪರಿಣಾಮ, ಮತ್ತು ಜನರದಲ್ಲಿದ್ದ ತಪ್ಪು ಭಾವನೆ ಹೋಗಲಾಡಿಸಿ,ಇಂದು 2 ಲಕ್ಷಕ್ಕೆ ಇಳಿದಿದೆ. ತುಮಕೂರು ಜಿಲ್ಲೆಯಲ್ಲಿ ಕೇವಲ 49 ಜನ ಮಾತ್ರ ಕುಷ್ಠ ರೋಗಿಗಳಿದ್ದಾರೆ. ಇದೆಲ್ಲದರ ಹಿಂದೆ ಸರಕಾರ,ಸಂಘ ಸಂಸ್ಥೆಗಳು ಹಾಗೂ ಜಪಾನಂದ ಜೀ ಅವರಂತಹ ಸೇವಾ ನಿರತ ಸ್ವಾಮೀಜಿಗಳ ಅವಿರತ ಪರಿಶ್ರಮವಿದೆ.ಹಾಗಾಗಿ ಜನರು ಕುಷ್ಠ ರೋಗದ ಬಗ್ಗೆ ನಿರ್ಲಕ್ಷ ಮಾಡದೆ ಆರಂಭ ದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಿ ಇತರರಂತೆ ಸಾಮಾನ್ಯ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಶ್ರೀಜಪಾನಂದ ಜೀ ಮಾತನಾಡಿ, ಇಂದು ಮಹಾತ್ಮಗಾಂಧಿ ನಮ್ಮೊಂದಿಗೆ ಇಲ್ಲ.ಕಳೆದ 35 ವರ್ಷಗಳಿಂದ ಗಾಂಧೀ ಸಂಸ್ಮರಣೆ ಮತ್ತು ಸರ್ವೋದಯ ದಿನವನ್ನು ಶ್ರೀರಾಮಕೃಷ್ಣ ಆಶ್ರಮದ ವತಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ.ಆರು ವರ್ಷಗಳಿಗೂ ಹೆಚ್ಚು ದಿನ ಜೈಲಿನಲ್ಲಿ ಕಳೆದರು.ಗಾಂಧೀಜಿ ಸಹ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿದ್ದರು.ಇಂದು ನಮ್ಮೊಂದಿಗೆ ಮೊಬಲಿಟಿ ಇಂಡಿಯಾ ಹಾಗೂ ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯದ ಡಾ.ಕೆ.ಜಿ.ಪರುಶುರಾಮ್ ತಂಡ ಇದೆ. ಯಾರು ಆಧೀರರಾಗಬೇಡಿ ಎಂದರು.
ಕುಷ್ಠ ರೋಗ ಎಂದರೆ ಮೂಗುಮುರಿಯುವವರೇ ಹೆಚ್ಚು.ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ.ಜನರಲ್ಲಿ ಜಾಗೃತಿ ಮೂಡುತ್ತಿದೆ.ಸರಕಾರ ಮತ್ತು ಇಲಾಖೆ ಕುಷ್ಠ ರೋಗಿಗಳಿಗೆ ಜೀವನಕ್ಕೆ ಅಗತ್ಯವಿರುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ.ಸರಕಾರದ ಜೊತೆಗೆ, ನಾವುಗಳು ಸಹ ಕೈಜೋಡಿಸಬೇಕಿದೆ ಎಂದು ಶ್ರೀಜಪಾನಂದ ಜೀ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಚಂದ್ರಶೇಖರ್,ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ರವೀಂದ್ರನಾಯ್ಕ.ಕೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಮೋಹನ್ದಾಸ್, ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕುಷ್ಠ ರೋಗಿಗಳಿಗೆ ಹೊಸ ವಸ್ತ್ರ, ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.