ನನಗೂ ವಾಮಚಾರದ ಹೆಸರಲ್ಲಿ ಹೆದರಿಸಿದ್ದರು-ಕೆ.ಎನ್.ರಾಜಣ್ಣ

ತುಮಕೂರು: ನಾನು ಹಾಸನಕ್ಕೆ ಉಸ್ತುವಾರಿ ಸಚಿವನಾಗಿ ನೇಮಕವಾದಾಗ ಕೆಲವರು ಮಾಟ,ಮಂತ್ರ,ವಾಮಾಚಾರದ ಹೆಸರಿನಲ್ಲಿ ಹೆದರಿಸಿದ್ದರು.ಕಾಕತಾಳಿಯ ಎಂಬಂತೆ ಹಾಸನಕ್ಕೆ ಹೊರಟ ಮೊದಲ ದಿನವೇ ಕುಣಿಗಲ್‍ನಲ್ಲಿ ಪಟಾಕಿ ಕಣ್ಣಿಗೆ ಸಿಡಿದು ಕೊಂಚ ಗೊಂದಲ ಆಗಿತ್ತು.ನನ್ನ ಮೇಲೆ ವಾಮಾಚಾರ ಮಾಡುವವರಿಂದ ನನಗೆ ರಕ್ಷಣೆ ನೀಡು ಎಂದು ನಮ್ಮ ಮನೆದೇವರಾದ ಉಗ್ರ ನರಸಿಂಹನಿಗೆ ಮನವಿ ಮಾಡಿದ್ದೇನೆ.ನಾಲ್ವರ ಒಳಿತಿಗಾಗಿ ದುಡಿಯುತ್ತಿರುವ ನನ್ನ ರಕ್ಷಣೆ ಮಾಡುವ ಕೆಲಸ ಆ ಉಗ್ರ ನರಸಿಂಹನದು ಎಂದು ಹಾಸನ ಜಿಲ್ಲೆಯ ರಾಜಕಾರಣ ಕುರಿತು ಮಾರ್ಮಿಕವಾಗಿ ನುಡಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘ,ಜಿಲ್ಲಾ ನಾಯಕ ಮಹಿಳಾ ಸಮಾಜವತಿಯಿಂದ ಆಯೋಜಿಸಿದ್ದ 2022-23ನೇ ಸಾಲಿನ ವಾಲ್ಮೀಕಿ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಇತರರಿಗೆ ಸಮಾನವಾಗಿ ಪೈಪೋಟಿ ನೀಡಲು ಸಾಧ್ಯವೆಂದರು.

ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ನಾಯಕ ಸಮುದಾಯ ಸೇರಿದ ಎಲ್ಲಾ ಜಾತಿಯ ಬಡವರು ವಿದ್ಯೆಯ ಜೊತೆಗೆ, ರಾಜಕೀಯ ಅಧಿಕಾರ ಪಡೆಯುತ್ತ ಗಮನಹರಿಸಿದಾಗ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕರ್ನಾಟಕ,ಹಳೆಯ ಮೈಸೂರು ಭಾಗದಲ್ಲಿ ವಾಲ್ಮೀಕಿ ಸಮಾಜ ಭಾಂಧವರಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಇರುವುದನ್ನು ಕಾಣಬಹುದು. ಆದರೆ ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ಇಂದು ಎಲ್ಲಾ ಹಿಂದುಳಿದ ಸಮಾಜಗಳಿಗೆ ಬೆಳಕಾಗಿದ್ದ ಎಲ್.ಜಿ.ಹಾವನೂರು ಹುಟ್ಟಿದ ಊರಿನಲ್ಲಿಯೆ ಇಂದು ಒಗ್ಗಟ್ಟಿಲ್ಲ.ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಅಭಿವೃದ್ದಿ ಕುಂಠಿತ ವಾಗಲಿದೆ.ಇದು ಮುಂದಿನ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರದಲಿದೆ.ಈ ಮಾತು ಕೇವಲ ವಾಲ್ಮೀಕಿ ಸಮಾಜಕ್ಕಷ್ಟೇ ಸಿಮೀತವಲ್ಲ.ಎಲ್ಲಾ ಶೋಷಿತ ಸಮಾಜಗಳು ತಮ್ಮಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ನುಡಿದರು.

ವಿದ್ಯೆ ಶ್ರಮ ಪಡುವ ವ್ಯಕ್ತಿಗೆ ಮಾತ್ರ ವಶವಾಗಲಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾಲಕ್ಕೆ ಹೊಲಿಕೆ ಮಾಡಿದರೆ, ನಮಗೆ ಎಲ್ಲಾ ಸವಲತ್ತುಗಳು ಸಿಗುತ್ತಿವೆ.ತನಗಿದ್ದ ಎಲ್ಲಾ ಅಡ್ಡಿ ಆತಂಕಗಳನ್ನು ಮೀರಿ ಓದಿ ಬುದ್ದಿವಂತರೆಂದು ಸಾಭೀತ ಪಡಿಸಿದ ನಂತರವೇ ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾ ಯಿತು.ಅಂತಹ ಉನ್ನತ ಹುದ್ದೆಯಲ್ಲಿದ್ದರೂ ತನ್ನ ಜನಾಂಗದಂತೆಯೆ ದೇಶದ ಶೋಷಣೆ ಅನುಭವಿಸುತ್ತಿರುವ ಸಮಾಜಗಳಿಗೆ ಒಳ್ಳೆಯದಾಗಬೇಕು ಎಂಬ ಕಾರಣಕ್ಕೆ ಮೀಸಲಾತಿ ಸೇರಿದಂತೆ ಹಲವಾರು ಅಂಶಗಳನ್ನು ಸಂವಿಧಾನದಲ್ಲಿ ಅಡಕ ಮಾಡಿ, ಸಮಿತಿಯ ಸದಸ್ಯರಿಗೆ ಅವುಗಳ ಅವಶ್ಯಕತೆ ಕುರಿತು ಮನದಟ್ಟು ಮಾಡಿಕೊಟ್ಟರು.ಅವರ ಅಂದಿನ ಶ್ರಮ ವ್ಯರ್ಥವಾಗ ಬಾರದೆಂದರೆ ನಾವೆಲ್ಲರೂ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ,ಅವರು ಸಹ ಸಮಾಜದಲ್ಲಿ ಸ್ವಾವಲಂಬಿ ಗಳಾಗಿ ಬದುಕುವಂತಹ ವಾತಾವರಣ ಸೃಷ್ಟಿಸಬೇಕಿದೆ ಎಂದು ಕೆ.ಎನ್.ರಾಜಣ್ಣ ಸಲಹೆ ನೀಡಿದರು.

.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಬರಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ನಾಯಕ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಲ ರಾಜಣ್ಣ ಮಾತನಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ರಾಜನಹಳ್ಳಿಯ ಶ್ರೀವಾಲ್ಮೀಕಿ ಗುರುಪೀಠದ ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ,ಇಂದಿನ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಪ್ರತಿಭೆ ಇದ್ದರು,ಕೀಳು ಎಂಬ ಭಾವನೆಯಿಂದ ನೋಡುವ ಪ್ರವೃತ್ತಿ ಬೆಳೆದುಕೊಂಡು ಬಂದಿದೆ.ಅದನ್ನು ಮೆಟ್ಟಿ ನಿಂತವರು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇಂದು ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹಾಗಾಗಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಆಯೋಜಿಸಿರುವ ಈ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಅತ್ಯಂತ ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಜಿ.ಪುರುಷೋತ್ತಮ ವಹಿಸಿದ್ದರು. ಸಮಾಜದ ಮುಖಂಡರಾದ ಭೀಮಯ್ಯ,ದೊಡ್ಡಯ್ಯ,ಜಿ.ಪುಟ್ಟರಾಮಯ್ಯ,ಬಿ.ಜಿ.ಕೃಷ್ಣಪ್ಪ,ಶ್ರೀಮತಿ ರಶ್ಮಿಗಿರೀಶ್,ಎಸ್.ಲಕ್ಷ್ಮಿ ನಾರಾಯಣ,ಕೆಂಪಹನುಮಯ್ಯ, ಆರ್.ವಿಜಯಕುಮಾರ್, ಎಸ್.ಆರ್.ರಾಜಕುಮಾರ್,ನಿವೃತ್ತ ಬಿಇಓ ಬಸವರಾಜು, ಪರಿಶಿಷ್ಟ ಪಂಗಡಗಳ ಅಧಿಕಾರಿ ರಾಜಕುಮಾರ್, ನೆಲಹಾಳ್ ಮೂರ್ತಿ, ಮಲ್ಲಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ವೇಳೆ ವಾಲ್ಮೀಕಿ ಜನಾಂಗದ ಪ್ರತಿಭಾನ್ವಿತ 300ಕ್ಕೂ ಹೆಚ್ಚು ಮಕ್ಕಳನ್ನು ಗೌರವಿಸಲಾಯಿತು

Leave a Reply

Your email address will not be published. Required fields are marked *