ತುಮಕೂರು : ಹಿರಿಯ ಪತ್ರಕರ್ತರಾದ ಎಸ್.ಪಿ.ತಮ್ (ಎಸ್.ಪುರುಷೋತ್ತಮ್ ಮೊದಲಿಯಾರ್-61ವರ್ಷ) ಅವರು ಇಂದು (ಮೇ.4) ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಇದರಿಂದ ತುಮಕೂರಿನ ಪತ್ರಿಕಾ ಕ್ಷೇತ್ರದ ದೈತ್ಯ ಪ್ರತಿಭೆ, ವರ್ಣರಂಜಿತ ಪತ್ರಿಕಾ ಕೊಂಡಿಯೊಂದು ಕಳಚಿಕೊಂಡಿತು.
ಎಸ್.ಪಿ.ತಮ್ ಎಂದೇ ಖ್ಯಾತರಾಗಿದ್ದ ಇವರು ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದರು, ಇವರು ಮೊದಲಿಗೆ ಮಾಜಿ ಸಂಸದ ಸಿ.ಎನ್.ಭಾಸ್ಕರಪ್ಪ ಅವರ ತುಮಕೂರು ಟೈಮ್ಸ್ ಪತ್ರಿಕೆಯಲ್ಲಿ ವರದಿಗಾರರಾಗಿ ಪತ್ರಿಕಾ ವೃತ್ತಿಯನ್ನು ಪ್ರಾರಂಭಿಸಿದರು, ತದ ನಂತರ ಸೊಗಡು ಪತ್ರಿಕೆಯಲ್ಲಿ, ನಂತರ ಬೆಂಗಳೂರಿನಲ್ಲಿ ವಾರ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸಿದ ನಂತರ, ತಮ್ಮದೆಯಾದ ತುಮಕೂರು ವಾಯ್ಸ್ ಮತ್ತು ಸುದ್ದಿ ಮಿತ್ರ ವಾರ ಪತ್ರಿಕೆಗಳನ್ನು ತಮ್ಮ ಸಂಪಾದಕತ್ವದಲ್ಲಿ ಹೊರ ತರುತ್ತಿದ್ದರು.
ತಮ್ಮ ಸಂಪಾದಕತ್ವದಲ್ಲಿ ಹೊರ ತರುತ್ತಿದ್ದ ಪತ್ರಕೆಗಳಲ್ಲಿ ಛೇ…ಛೀ ಕಾಲಂ ತುಂಬಾ ಜನಪ್ರಿಯ ಮತ್ತು ಅವರಿಗೆ ಹೆಸರು ತಂದಿಕೊಟ್ಟತ್ತು. ಈ ಛೇ…ಛೀ…ಕಾಲಂನಲ್ಲಿ ಹಲವರನ್ನು ಛೇಡಿಸುತ್ತಿರಿಂದ ಎಸ್.ಪಿ.ತಮ್ ಈ ವಾರ ಯಾರು ಯಾರಿಗೆ ಛೇಡಿಸಿದ್ದಾರೆ ಎಂಬುದೇ ದೊಡ್ಡ ಚರ್ಚೆ ನಡೆಯುತ್ತಿತ್ತು.
ಕಳೆದ ಹತ್ತು ವರ್ಷಗಳಿಂದ ಪತ್ರಿಕೆಯನ್ನು ನಿಲ್ಲಿಸಿದ್ದ ಅವರು ಕಿರಿಯ ಪತ್ರಕರ್ತರ ಒಡನಾಡಿಯಾಗಿ ತಮ್ಮ ಅನುಭವಗಳನ್ನು ಹೇಳಿಕೊಳ್ಳವುದಲ್ಲದೆ ಕೆಲವರನ್ನು ತಮ್ಮದೇ ದಾಟಿಯಲ್ಲಿ ಛೇಡಿಸುವುದು, ಗೇಲಿ ಮಾಡುವುದನ್ನು ಮಾಡುತ್ತಿದ್ದ ಅವರು, ಪತ್ರಿಕಾಗೋಷ್ಠಿಗಳಲ್ಲಿ ದೊಡ್ಡ ಧ್ವನಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಹಲವಾರು ಉತ್ತಮ ಗೆಳೆಯರನ್ನು ಹೊಂದಿದ್ದ ಎಸ್.ಪಿ,ತಮ್ ಅವರು, ಕೆಲವು ಸಲ ಅವರು ಚೇಡಿಸುವುದಕ್ಕೆ ಅವರ ಸಹವಾಸ ಸಾಕು ಎಂದು ದೂರ ಉಳಿದರು ಮತ್ತೆ ಇವರೆ ಪೋನ್ ಮಾಡಿ ರೇಗಿಸಿ ಸಮಾಧಾನ ಮಾತುಗಳನ್ನು ಆಡುತ್ತಿದ್ದರು.
ಇತ್ತೀಚೆಗೆ ಜ್ಯೋತಿಷ್ಯವನ್ನು ಅಭ್ಯಾಸ ಮಾಡಿರುವುದಾಗಿ ಹೇಳುತ್ತಿದ್ದ ಅವರು ಪ್ರಮುಖ ವ್ಯಕ್ತಿಗಳು ಸಿಕ್ಕಿದಾಗ ಮಂತ್ರ ಹೇಳಿ ಒಳ್ಳೆಯದಾಗಲಿ ಎಂದು ಅರಸುತ್ತಿದ್ದುಂಟು, ಕಿರಿಯ ಪತ್ರಕರ್ತರು ಅವರ ಮನೆಗೆ ಹೋದರೆ ಗಂಟೆಗಟ್ಟಲೆ ಹರಟುತ್ತಿದ್ದ ತಮ್ ಅವರು, ಬರುವಾಗ ಕಿರಿಯ ಪತ್ರಕರ್ತರಿಗೆ ಅವರು ಒಂದಿನ್ನೂರು ಹಣವನ್ನು ಕೊಟ್ಟು ನಾನು ಪ್ರೀತಿಯಿಂದ ಕೊಡುತ್ತಿದ್ದೇನೆ, ನಿನಗಲ್ಲ ಮಕ್ಕಳಿಗೆ ಏನಾದರು ತಗೊಂಡು ಹೋಗು ಅನ್ನುತ್ತಿದ್ದರು.
ಚೈನ್ ಸ್ಮೋಕರ್ ಆಗಿದ್ದ ಅವರು, ಕೊನೆಯ ತನಕ ಸಿಗರೇಟ್ ಬಿಡಲು ಅವರಿಂದ ಸಾಧ್ಯವಾಗಲಿಲ್ಲ, ಈ ಸಿಗರೇಟ್ ಸೇವನೆಯಿಂದಲೇ ಅವರಿಗೆ ಆರೋಗ್ಯ ಹದಗೆಟ್ಟಿದ್ದು ಎಂದು ವೈದ್ಯರು ಎಚ್ಚರಿಸಿದರು, ಅದನ್ನು ಬಿಡಲಿಲ್ಲ.ಅವರು ಸಿಗರೇಟ್ ಒಂದೇ ನನ್ನ ಗೆಳೆಯ ಎಂದು ಕೆಲ ತಮ್ಮ ಆಪ್ತ ಗೆಳೆಯರ ಹತ್ತಿರ ಹೇಳಿಕೊಳ್ಳುತ್ತಿದ್ದರು.
ಅವರು ಕಪ್ಪಗಿದ್ದರಿಂದ, ದಪ್ಪ ಕನ್ನಡಕ ಹಾಕಿಕೊಳ್ಳುತ್ತಿದರಿಂದ ಮೊದಲಿಗೆ ಅವರನ್ನು ನೋಡಿದವರು ಹೆದರಿಕೆ ಪಡುತ್ತಿದ್ದರು ಎಂದು ತಮ್ ಅವರೇ ಹೇಳಿಕೊಂಡು ನಗುತ್ತಿದ್ದರು.
ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಅದನ್ನು ಗಂಭಿರವಾಗಿ ಬರೆದಿದ್ದರೆ ರಾಜ್ಯಮಟ್ಟದ ದೊಡ್ಡ ಪತ್ರಕರ್ತರಾಗುತ್ತಿದ್ದರು.
ತುಮಕೂರಿನ ಪತ್ರಿಕಾಕ್ಷೇತ್ರ ಪ್ರಬುದ್ದ ಪತ್ರಿಕಾ ವಾಗ್ಮಿಯೊಬ್ಬರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟವುಂಟಾಗಿದೆ.
ಎಸ್.ಪಿ.ತಮ್ ಅವರ ನಿಧನದ ಸುದ್ದಿ ತಿಳಿದ ಕೂಡಲೇ ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ತುಮಕೂರಿನ ಬಹುತೇಕ ಎಲ್ಲಾ ಪತ್ರಕರ್ತ ಮಿತ್ರರು, ಅಗಲಿದ ತಮ್ಮ ಸಹಪಾಟಿ ಪತ್ರಕರ್ತ ಎಸ್.ಪಿ.ತಮ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಅಪಾರ ಗೆಳೆಯರು ಸಹ ಎಸ್.ಪಿ.ತಮ್ ರವರಿಗೆ ಅಂತಿಮ ನಮನ ಸಲ್ಲಿಸಿದರು.
ಎಸ್.ಪಿ.ತಮ್ ಅವರ ನಿಧನಕ್ಕೆ ಮೈತ್ರಿನ್ಯೂಸ್ ಪತ್ರಿಕಾ ಬಳಗ ತೀವ್ರ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದೆ.