ಸಿಜೆಐ ಮೇಲೆ ಶೂ ಎಸೆತ, ಪ್ರಜಾಪ್ರಭುತ್ವದ ಘನತೆಯನ್ನು ಕುಗ್ಗಿಸುವ ಕೆಲಸ, ತನಿಖೆಗೆ ಆಗ್ರಹ

ತುಮಕೂರು:ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಶೂ ಎಸೆಯುವಂತಹ ಹೀನ ಕೃತ್ಯ ನಡೆಸಿರುವ ಹಿರಿಯ ನ್ಯಾಯವಾದಿ ರಾಕೇಶ್‍ಕುಮಾರ್ ಅವರನ್ನು ಕೂಡಲೇ ಬಂಧಿಸಿ, ತನಿಖೆಗೆ ಒಳಪಡಿಸಿ, ಆತನಿಗೆ ಉಗ್ರ ಶಿಕ್ಷೆಗೆ ಗುರುಪಡಿಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿ, ತುಮಕೂರು ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಒಳಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡು,ಭಾರತ ಸರಕಾರದ ಮುಖ್ಯ ನ್ಯಾಯಮೂರ್ತಿ ಗಳ ಮೇಲೆ ಶೂ ತೂರಿದ ವ್ಯಕ್ತಿಯನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಚಿಂತಕರಾದ ಪ್ರೊ.ಕೆ.ದೊರೆರಾಜು,ಜಗತ್ತಿನ ಮುಂದೆ ಭಾರತದ ಘನತೆ, ಗೌರವವನ್ನು ಕಳೆಯುವಂತಹ ಘಟನೆ ಇದಾಗಿದೆ.ನ್ಯಾ.ಗವಾಯಿ ಅವರ ಮೇಲೆ ಕಲಾಪ ನಡೆಯುವ ವೇಳೆ ಶೂ ಕಳಚಿ ಎಸೆಯುವ ಸಂಗತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ.ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂಬುದು ಕಂಡು ಬರುತ್ತಿದೆ.ಸನಾತನ ಧರ್ಮದ ಹೆಸರಿನಲ್ಲಿ ನಡೆದ ಈ ಕೃತ್ಯ ನ್ಯಾಯಾಂಗದ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಕುಗ್ಗಿಸುವ ಕೆಲಸವಾಗಿದೆ.ನಾಗರಿಕ ಪ್ರಜ್ಞೆ ಇರುವ ಪ್ರತಿಯೊಬ್ಬರನ್ನು ಈ ಘಟನೆ ಆಂತಕಕೀಡು ಮಾಡಿದೆ. ಪ್ರಧಾನಿ ಮತ್ತು ಆಳುವ ವರ್ಗಗಳ ಮೌನ ಇಂತಹ ಕೃತ್ಯಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡಿವೆ.ಮಾತಾಂಧತೆಗೆ ಹೆಚ್ಚು ಕುಮ್ಮಕ್ಕು ನೀಡಿ, ಇಂತಹ ಘಟನೆಗಳು ಮರುಕಳುಸುವಂತೆ ಮಾಡಿವೆ.ಜಾತಿ ಶ್ರೇಷ್ಠತೆಯ ಆಹಂಕಾರದಲ್ಲಿ ನಡೆಯುವ ಇಂತಹ ಕೃತ್ಯಗಳು ಮುಂದೇನು ಎಂಬ ಆತಂಕವನ್ನು ಸೃಷ್ಟಿಸಿವೆ. ಹಾಗಾಗಿ ಈ ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಅದು ಇಡೀ ನಾಗರಿಕ ಸಮಾಜಕ್ಕೆ ಒಂದು ಸಂದೇಶವಾಗಬೇಕು ಎಂದು ಆಗ್ರಹಿಸಿದರು.

ಸಿಐಟಿಯು,ಪ್ರಾಂತ ರೈತ ಸಂಘದ ಬಿ.ಉಮೇಶ್ ಮಾತನಾಡಿ,71 ವರ್ಷ ವಯಸ್ಸಿನ ರಾಕೇಶ ಕಿಶೋರ್ ಎನ್ನುವ ನ್ಯಾಯವಾದಿ ಮಾಡಿರುವ ಕೆಲಸ ಭಾರತೀಯರು ವಿಶ್ವದ ಮುಂದೆ ತಲೆ ತಗ್ಗಿಸುವಂತ ಕೃತ್ಯವಾಗಿದೆ.ಇದು ತನ್ನ ಹೇಳಿಕೆಯನ್ನು ತಿರುಚಿ ಅಧಿಕಾರ ಹಿಡಿಯುವ ಭಾಗವಾಗಿ ಪರಿಣಮಿಸಿದೆ.ಪ್ರಧಾನಿಯವರು ಕೇವಲ ಕಣ್ಣೊರೆಸುವ ಮಾತುಗಳನ್ನಾಡಿದ್ದಾರೆ.ಆದರೆ ಇಡೀ ರಾಷ್ಟ್ರಕ್ಕೆ ರಕ್ಷಣೆ ನೀಡಬೇಕಾದ ಗೃಹ ಸಚಿವರು ಇದುವರೆಗೂ ಮಾತನಾಡಿಲ್ಲ. ಕೂಡಲೇ ರಾಕೇಶ್ ಕಿಶೋರ್ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿ,ಅವರ ಹೇಳಿಕೆಗಳನ್ನು ದಾಖಲಿಸಬೇಕು.ಗೂಡ್ಸೆ ಸಿದ್ದಾಂತವನ್ನು ಒಪ್ಪುವುದಿಲ್ಲ ಎಂದು ಹೇಳುತ್ತಲೇ ಗೂಡ್ಸೆಗೆ ದೇವಾಲಯ ಕಟ್ಟಲು ಹೊರಟ ವಾಜಪೇಯಿ ಅವರಂತಯೇ ಇಂದಿನ ಘಟನೆಯೂ ನಡೆದಿದೆ.ಇದು ಮಾನವೀಯ ನಲೆಗೆ ವಿರುದ್ದವಾಗಿದೆ.ದೇಶದ ಐಕ್ಯತೆಗೆ ಧಕ್ಕೆ ತರುವಂತಹದ್ದಾಗಿದೆ. ಹಾಗಾಗಿ ಇವರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದರು.

ಒಳಮೀಸಲಾತಿ ಹೋರಾಟ ಸಮಿತಿ ತುಮಕೂರು ಇದರ ಅಧ್ಯಕ್ಷರಾದ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ,ಸವೋಚ್ರ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಶೂ ಎಸೆದು ದೇಶದ ಐಕ್ಯತೆ, ಸಮಗ್ರತೆಗೆ ಧಕ್ಕೆ ತರುವ ಕೆಲಸ ಹಾಗೂ ಭಾರತೀಯರು ತಲೆ ತಗ್ಗಿಸುವ ಕೆಲಸವಾಗಿದೆ.ಇದೇ ಕೆಲಸವನ್ನು ಬೇರೆ ಯಾವ ಸಮುದಾಯದವರು ಮಾಡಿದ್ದರೆ ಇಷ್ಟು ವೇಳೆ ಆತನ ವಿರುದ್ದ ಯುಎಪಿಎ ಕೇಸು ದಾಖಲಿಸಿ,ಜೈಲಿಗೆ ಅಟ್ಟಲಾಗುತ್ತಿತ್ತು. ದುರಂತವೆಂದರೆ ಇದುವರೆಗೂ ಸದರಿ ವ್ಯಕ್ತಿಯ ವಿರುದ್ದ ದೂರು ಸಹ ದಾಖಲಾಗಿಲ್ಲದಿರುವುದು ವಿಪರ್ಯಾಸ.ನಾವೆಲ್ಲ ಒಂದು ಎನ್ನುವ ಸಂಘ ಸಂಸ್ಥೆಗಳು, ಮುಖಂಡರು ಇಂದು ಎಲ್ಲಿ ಹೋಗಿದ್ದಾರೆ.ಇದು ಸನಾತನವಾದಿಗಳ ರೋಗಗ್ರಸ್ಥ ಮನಸ್ಥಿತಿ ಇದೆ.ಕೂಡಲೇ ಪ್ರಧಾನಿಗಳು, ಗೃಹಮಂತ್ರಿಗಳು ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕು.ಇಲ್ಲದಿದ್ದರೆ ಜನರು ದಂಗೆ ಏಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮುಖಂಡರಾದ ನರಸೀಯಪ್ಪ,ನರಸಿಂಹಯ್ಯ,ವಕೀಲ ಮಾರುತಿ ಪ್ರಸಾದ್,ಡಿ.ರಾಮಯ್ಯ,ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶಿವನಂಜಪ್ಪ,ಉಪಾಧ್ಯಕ್ಷ ಜಯಮೂರ್ತಿ,ಕೊಡಿಯಾಲ ಮಹದೇವ್,ಡಾ.ಮುಕುಂದ್,ನಿವೃತ್ತ ತಹಶೀಲ್ದಾರ್ ಎಂ.ಸಿ.ನರಸಿಂಹಮೂರ್ತಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *