ತುಮಕೂರು:ಶೂಟಿಂಗ್ ಕ್ರೀಡೆಯಿಂದ ಮನುಷ್ಯನಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ವಿವೇಕಾನಂದ ಸ್ಪೋಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್,ವಿವೇಕಾನಂದ ಶೂಟಿಂಗ್ ಅಕಾಡೆಮಿ, ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಮತ್ತು ತುಮಕೂರು ಜಿಲ್ಲಾ ರೈಫಲ್ ಮತ್ತು ಪಿಸ್ತೂಲ್ ಅಸೋಸಿಯೇಷನ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಐದು ದಿನಗಳ ಅಹ್ವಾನಿತ ಮುಕ್ತ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಉಳ್ಳವರ ಕ್ರೀಡೆಯಾಗಿದ್ದ ಶೂಟಿಂಗ್, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಕ್ರೀಡೆಯಾಗಿ ಪರಿವರ್ತನೆಯಾಗುತ್ತಿರುವುದು ಒಳ್ಳೆಯ ಬೆಳೆವಣಿಗೆ ಎಂದರು.
ತುಮಕೂರು ಜಿಲ್ಲಾಕೇಂದ್ರದಲ್ಲಿ ಸರಕಾರ ಸುಮಾರು 65 ಕೋಟಿ ರೂಗಳನ್ನು ಖರ್ಚು ಮಾಡಿ ಅಂತರರಾಷ್ಟ್ರೀಯ ಗುಣಮಟ್ಟದ ಸ್ಟೇಡಿಯಂ ನಿರ್ಮಾಣ ಮಾಡಿದೆ.ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ ಎಂಬ ಕೂಗು ಕ್ರೀಡಾಪಟು ಗಳಲ್ಲಿದೆ.ಉದ್ಘಾಟನೆಗೊಂಡು ಒಂದು ವರ್ಷ ಕಳೆದರು ಕ್ರೀಡಾಂಗಣದ ಜವಾಬ್ದಾರಿಯನ್ನು ಹೊರಲು ಇಲಾಖೆ ಮತ್ತು ಜಿಲ್ಲಾಡಳಿತದ ನಡುವೆ ಮುಸುಕಿನ ಗುದ್ದಾಟವಿದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಿ, ತದನಂತರ ಕ್ರೀಡಾ ಸಚಿವರ ಬಳಿಯೂ ಕ್ರೀಡಾಂಗಣವನ್ನು ಕ್ರೀಡಾಪುಟಗಳ ಉಪಯೋಗಕ್ಕೆ ಅನುಕೂಲವಾಗುವಂತೆ ಮಾಡಲು ಕೋರಲಾಗುವುದು ಎಂದರು.
ಸರಕಾರದ ಧನಸಹಾಯವಿಲ್ಲದೆ ಒಂದು ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಆಯೋಜಕರು ಬಿಡಿಸಿ ಹೇಳಿದ್ದಾರೆ.ತುಮಕೂರು ಜಿಲ್ಲೆಯನ್ನು ಶೂಟಿಂಗ್ ಕ್ರೀಡೆಯ ಪ್ರಮುಖ ಸ್ಥಾನವನ್ನಾಗಿ ಸಬೇಕೆಂಬ ವಿವೇಕಾನಂದ ಸ್ಪೋಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಮತ್ತು ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಅನಿಲ್ ಅವರ ಪ್ರಯತ್ನವನ್ನು ನಾವೆಲ್ಲರೂ ಶ್ಲಾಘಿಸಲೇಬೇಕಿದೆ.ತುಮಕೂರಿನಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಇವೆಂಟ್‍ಗಳನ್ನು ಆಯೋಜಿಸುವಂತಹ ಶಕ್ತಿ ಅನಿಲ್ ಅವರಿಗೆ ದೊರೆಯಲಿ, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಮುರುಳೀಧರ ಹಾಲಪ್ಪ ಶುಭ ಹಾರೈಸಿದರು.
ಐದು ದಿನಗಳ ರಾಷ್ಟ್ರೀಯ ಮಟ್ಟದ ಅಹ್ವಾನಿತ 10 ಮೀ ರೈಫಲ್ ಶೂಟಿಂಗ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಎಷ್ಯನ್ ಗೇಮ್ಸ್ ಶೂಟಿಂಗ್ ವಿಭಾಗದ ಚಿನ್ನದ ಪದಕ ವಿಜೇತ ಕ್ರೀಡಾಪಟು ತಿಲೋತ್ತಮ್ ಸೇನ್ ಅವರನ್ನು ಈ ವೇಳೆ ಅಭಿನಂದಿಸಲಾಯಿತು.ವೇದಿಕೆಯಲ್ಲಿ ವಿವೇಕಾನಂದ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಟಿ.ಎಂ., ಸರ್ವೋದಯ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್ ಹೆಚ್,ಎನ್.ನಾರಾಯಣಪ್ಪ,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್,ಅಂತರರಾಷ್ಟ್ರಿಯ ತರಬೇತುದಾರ ಮೊಹಮದ್ ಇಸ್ಮಾಯಿಲ್, ಭಾರತೀಯ ಕ್ರೀಡಾ ಪ್ರಾಧಿಕಾರದ ಶೂಟಿಂಗ್ ಕೋಚ್ ವಿಕಾಸ್ ದಾಗ್ರ, ಶೂಟಿಂಗ್ ತೀರ್ಪುಗಾರರಾದ ರಾಮಚಂದ್ರ, ಫಿಟ್ನೇಸ್ ಕ್ಲಬ್ ಅಧ್ಯಕ್ಷರಾದ ನಾಗರಾಜು,ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟುಗಳಾದ ನಿಖಿಲ್ ಮತ್ತು ನಂದೀಶ್ ಹಾಗೂ ಎಂಟುನೂರಕ್ಕೂ ಹೆಚ್ಚು ಶೂಟಿಂಗ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.